ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಕೊಕಟನೂರಲ್ಲಿ ಕೃಷಿ ಇಲಾಖೆಯ ಜಾಗೃತ ಕೋಶದಿಂದ ದಾಳಿ

171 ಚೀಲ ನಕಲಿ ಗೊಬ್ಬರ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಅಥಣಿ ತಾಲ್ಲೂಕು ಕೊಕಟನೂರ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರುತ್ತಿದ್ದ ಆರೋಪದ ಮೇಲೆ ವೀರಭದ್ರೇಶ್ವರ ಕೃಷಿ ಸೇವಾ ಕೇಂದ್ರ ಮತ್ತು ಗೋದಾಮಿನ ಮೇಲೆ ಕೃಷಿ ಇಲಾಖೆಯ ಜಾಗೃತ ಕೋಶದವರು ಸೋಮವಾರ ದಾಳಿ ನಡೆಸಿ, ನಕಲಿ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.

ಆ ಗ್ರಾಮದ ಕಲ್ಲಯ್ಯ ಮಠಪತಿ ಅವರಿಗೆ ಸೇರಿದ ರಸಗೊಬ್ಬರ ಮಾರಾಟ ಕೇಂದ್ರ ಇದಾಗಿದೆ. ಸುತ್ತಮುತ್ತಲಿನ ಗ್ರಾಮಗಳಿಗೆ ನಕಲಿ ರಸಗೊಬ್ಬರ ಮಾರುತ್ತಿದ್ದುದ್ದನ್ನು ದಾಳಿ ವೇಳೆ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೇಂದ್ರದಲ್ಲಿ ಫ್ಯಾಕ್ಟ್ ಕಂಪನಿಯ ಅಮೋನಿಯಂ ಸಲ್ಫೇಟ್ ರಸಗೊಬ್ಬರ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಅಧಿಕಾರಿಗಳ ತಂಡವು, ಕೇಂದ್ರದಲ್ಲಿದ್ದ 171 ಚೀಲ ನಕಲಿ ಹಾಗೂ ಯಾವುದೇ ಇನ್‌ವೈಸ್ ಇಲ್ಲದೇ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಅಮೋನಿಯಂ ಸಲ್ಫೇಟ್ ರಸಗೊಬ್ಬರವನ್ನು ವಶಕ್ಕೆ ಪಡೆದು ಗೋದಾಮನ್ನು ಸೀಲ್ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೇಂದ್ರ ಸರ್ಕಾರ ನಿಗದಿಪಡಿಸಿದಂತೆ ಅಮೋನಿಯಂ ಸಲ್ಫೇಟ್ ರಸಗೊಬ್ಬರಕ್ಕೆ ಗರಿಷ್ಠ ಮಾರಾಟ ದರ ₹ 850 (50 ಕೆ.ಜಿ. ಚೀಲಕ್ಕೆ) ಇದೆ. ವಶಪಡಿಸಿಕೊಂಡ ನಕಲಿ ರಸಗೊಬ್ಬರದ ಕೆಲ ಚೀಲಗಳ ಮೇಲೆ ₹ 875 ಮತ್ತು ₹ 1,100 ಮಾರಾಟ ದರ ನಮೂದಿಸಲಾಗಿದೆ. ರಸಗೊಬ್ಬರದ ಪರೀಕ್ಷೆಗಾಗಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಆಧರಿಸಿ ಕಲ್ಲಯ್ಯ ಮಠಪತಿ ಅವರ ಮೇಲೆ ರಸಗೊಬ್ಬರ ನಿಯಂತ್ರಣ ಆದೇಶದ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.

‘ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಹಲವು ಬಿತ್ತನೆಬೀಜಗಳು, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಕ್ಕೆ ತಡೆಯಾಜ್ಞೆ ನೀಡಲಾಗಿದ್ದು, ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಜಿಲಾನಿ ಮೊಕಾಶಿ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ಕಣಗಿ, ಆರ್‌.ಪಿ. ಪಾಟೀಲ, ಸುಪ್ರಿತಾ ಅಂಗಡಿ ಹಾಗೂ ಕೃಷಿ ಅಧಿಕಾರಿ ಎಂ‌.ಎ. ಕಡಪಟ್ಟಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು