ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’: ಕಾಗದದಲ್ಲೇ ಉಳಿದಿರುವ ಯೋಜನೆ

ಅನುಷ್ಠಾನಗೊಳ್ಳದ ‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’
Last Updated 11 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡಿಸಿದ್ದ 2021–22ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ, ಜಿಲ್ಲೆಯ ಗಡಿ ನಾಡು ನಿಪ್ಪಾಣಿಯಲ್ಲಿ ‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಅದು ಇನ್ನೂ ಕಾಗದದಲ್ಲೇ ಉಳಿದಿದೆ.

ಇದಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ, ಅದರ ಸ್ವರೂಪವೇನು ಎನ್ನುವುದನ್ನು ಬಜೆಟ್‌ನಲ್ಲಿ ತಿಳಿಸಲಾಗಿರಲಿಲ್ಲ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಆ ಪಟ್ಟಣದಲ್ಲಿ ಕ್ಲಸ್ಟರ್‌ ಸ್ಥಾಪನೆ ಬಗ್ಗೆ ಜನರಿಗೆ ನಿರೀಕ್ಷೆ ಇರಲಿಲ್ಲ. ಆದರೆ, ಸರ್ಕಾರದಿಂದ ಮಾಡಲಾಗಿದ್ದ ಘೋಷಣೆಯಿಂದಾಗಿ ಖ್ಯಾತಿ ಗಳಿಸಿರುವ ‍ಪಾದರಕ್ಷೆಗಳನ್ನು ತಯಾರಿಸುವವರಿಗೆ ಅನುಕೂಲ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

ತಂತ್ರಜ್ಞಾನ ಬಳಸಿಕೊಂಡು:

ಈಗಲೂ ಬೇಡಿಕೆ ಉಳಿಸಿಕೊಂಡಿರುವ ಕೊಲ್ಹಾಪುರಿ ಪಾದರಕ್ಷೆಗಳನ್ನು ತಯಾರಿಸುವ ಚರ್ಮ ಕುಶಲಕರ್ಮಿಗಳು ಗಡಿಯಲ್ಲಿ ನೂರಾರು ಮಂದಿ ಇದ್ದಾರೆ. ನಿಪ್ಪಾಣಿ, ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ಮೊದಲಾದ ಕಡೆಗಳಲ್ಲಿ ಕೊಲ್ಹಾಪುರಿ ಚಪ್ಪಲಿಗಳಿಗೆ ರೂಪ ಕೊಡುವ ಕೌಶಲ ಹೊಂದಿರುವರು ಬಹಳಷ್ಟು ಜನರಿದ್ದಾರೆ. ಅವರಿಗೆ ಸುರಕ್ಷತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸ ನಿರ್ವಹಿಸುವ ಬಗ್ಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಉದ್ದೇಶ ಹೊಂದಲಾಗಿದೆ.

ಆದರೆ, ನಿಪ್ಪಾಣಿಯಲ್ಲಿ ಜಾಗ ಗುರುತಿಸಿದ್ದು ಬಿಟ್ಟರೆ ಬೇರಾವ ಪ್ರಕ್ರಿಯೆಗಳೂ ನಡೆದಿಲ್ಲ. ಬಜೆಟ್‌ನಲ್ಲಿ ಘೋಷಿಸಿದ್ದು ಇನ್ನೂ ಘೋಷಣೆಯಾಗಿಯೇ ಇದೆ.

ಅಲ್ಲಿನ ಶಾಸಕಿಯೂ ಆಗಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ಮುತುವರ್ಜಿ ವಹಿಸಿದ್ದರು. ಆದರೆ, ಅದು ಜಾಗದ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಮುಂದುವರಿಯುವುದು ಸಾಧ್ಯವಾಗಿಲ್ಲ. ಅತ್ತ ಅಧಿಕಾರಿಗಳೂ ಗಮನಹರಿಸಿಲ್ಲ. ಇದರಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎನ್ನಲಾಗಿದೆ. ಪರಿಣಾಮ ಸರ್ಕಾರದಿಂದ ಸಿಕ್ಕಿರುವ ವಿಶೇಷ ಯೋಜನೆಯೊಂದು ಅನುಷ್ಠಾನದ ಹಂತದಲ್ಲೇ ಮುಗ್ಗರಿಸಿದಂತಾಗಿದೆ.

ಯೋಜನೆಯ ಮಾಹಿತಿ ಇಲ್ಲ:

ಈ ಬಗ್ಗೆ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಲಿಡ್‌ಕರ್‌ (ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ) ಜಿಲ್ಲಾ ಸಂಯೋಜಕ ಎಸ್. ನಾಗರಾಜ್‌, ‘ಯೋಜನೆ ಸಂಬಂಧಿಸಿದಂತೆ 10 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಖರೀದಿಗಾಗಿ ಮೊದಲ ಹಂತದಲ್ಲಿ ₹ 1.60 ಲಕ್ಷ ಬಂದಿತ್ತು. ಜಾಗ ಖರೀದಿ ಪ್ರಕ್ರಿಯೆ ನಡೆದಿತ್ತು. ಆದರೆ, ವ್ಯಕ್ತಿಯೊಬ್ಬರು ರಿಟ್ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ’ ಎಂದು ಮಾಹಿತಿ ನೀಡಿದರು.

‘ಯೋಜನೆಗೆ ಎಷ್ಟು ಹಣ ವಿನಿಯೋಗಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲ. ಆದರೆ, ಚರ್ಮ ಉದ್ಯಮಕ್ಕೆ ಉತ್ತೇಜನ ನೀಡುವುದು, ಆ ಕುಶಲಕರ್ಮಿಗಳ ಉದ್ಯೋಗಕ್ಕೆ ಸಹಕಾರಿಯಾಗುವುದು ಮತ್ತು ಯಂತ್ರಗಳ ಬಳಕೆಗೆ ಆರ್ಥಿಕವಾಗಿ ನೆರವಾಗುವ ಉದ್ದೇಶವನ್ನು ಹೊಂದಲಾಗಿದೆ’ ಎಂದು ಅವರು ತಿಳಿಸಿದರು.

ಚರ್ಮ ಹದಗೊಳಿಸಲು:

‘ಕ್ಲಸ್ಟರ್‌ಗಳನ್ನು ಚರ್ಮ ಕೈಗಾರಿಕೆ ನಡೆಸಲು ಶೆಡ್ (ಘಟಕ) ಹಾಕಿಕೊಡಲಾಗುವುದು. ಕೊಲ್ಹಾಪುರಿ ಚಪ್ಪಲಿ ತಯಾರಿಸಲು ಬೇಕಾಗುವ ಚರ್ಮ ಹದಗೊಳಿಸುವ ಪ್ರಕ್ರಿಯೆಯನ್ನು ಪ್ರಸ್ತುತ ಕೈಯಲ್ಲಿ ಮಾಡುತ್ತಾರೆ. ಅದನ್ನು ಕ್ಲಸ್ಟರ್‌ನಲ್ಲಿ ಯಂತ್ರಗಳಿಂದ ಮಾಡಬಹುದಾಗಿದೆ. 120 ಮಂದಿಗೆ ಕ್ಲಸ್ಟರ್‌ನಲ್ಲಿ ಜಾಗ ಸಿಗಲಿದೆ. ಕೊಲ್ಹಾಪುರಿ ಚಪ್ಪಲಿಗಳಿಗೆ ಇರುವ ಬೇಡಿಕೆಗೆ ತಕ್ಕಂತೆ ಅವರು ಕೆಲಸ ಮಾಡಬಹುದಾಗಿದೆ. ಸುಸಜ್ಜಿತ ಜಾಗದಲ್ಲಿ ಚರ್ಮೋದ್ಯಮ ನಡೆಸಲು ಅನುಕೂಲವಾಗಲಿದೆ. ಇದರಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ಅವರು.

‘ಕೊಲ್ಹಾಪುರಿ ಚಪ್ಪಲಿಗಳ ಕ್ಲಸ್ಟರ್ ಸ್ಥಾಪನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸಭೆಯನ್ನೂ ನಡೆಸಿಲ್ಲ. ಹೀಗಾಗಿ ಆ ಯೋಜನೆಯಿಂದ ಆಗಬಹುದಾದ ಲಾಭಗಳ ನಮಗೆ ಗೊತ್ತಿಲ್ಲ’ ಎಂದು ನಿಪ್ಪಾಣಿಯಲ್ಲಿ ಚರ್ಮ ಕೈಗಾರಿಕೆ ನಡೆಸುವ ರವಿ ಕದಂ ಪ್ರತಿಕ್ರಿಯಿಸಿದರು.

‘ಈ ಭಾಗದ ಕುಶಲಕರ್ಮಿಗಳು ಕೈಯಲ್ಲೇ ಚಪ್ಪಲಿಗಳನ್ನು ಮಾಡುತ್ತಾರೆ. 5ಸಾವಿರಕ್ಕೂ ಹೆಚ್ಚಿನ ಕಾರ್ಮಿಕರಿದ್ದಾರೆ. ಕೊಲ್ಹಾಪುರಿ ಪಾದರಕ್ಷೆಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಅದನ್ನು ಕಡಿಮೆ ಮಾಡಬೇಕು. ಅದರಿಂದ ನಮಗೆ ಅನುಕೂಲವಾಗುತ್ತದೆ. ಚಪ್ಪಲಿಯ ಬೆಲೆಯನ್ನು ನಾವು ಕಡಿಮೆ ಮಾಡಬಹುದು. ಅದರಿಂದ ಗ್ರಾಹಕರಿಗೆ ಪ್ರಯೋಜನವಾಗುತ್ತದೆ. ಸರ್ಕಾರ ಇತ್ತ ಈ ಬಜೆಟ್‌ನಲ್ಲಾದರೂ ಗಮನಹರಿಸಬೇಕು’ ಎಂದು ಕೋರುತ್ತಾರೆ ಅವರು.

ಹೆಚ್ಚಾಗುವ ನಿರೀಕ್ಷೆ

ಸದ್ಯ ನಿಪ್ಪಾಣಿ ಭಾಗದಲ್ಲಿ ಕೆಲವರು ದೆಹಲಿ ಮೊದಲಾದ ಕಡೆಗಳಿಗೆ ಕೊಲ್ಹಾಪುರಿ ‍ಪಾದರಕ್ಷೆಗಳನ್ನು ಕಳುಹಿಸುತ್ತಿದ್ದಾರೆ. ಕ್ಲಸ್ಟರ್‌ ನಿರ್ಮಾಣವಾದಲ್ಲಿ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ.

–ಎಸ್. ನಾಗರಾಜ್‌, ಜಿಲ್ಲಾ ಸಂಯೋಜಕ, ಲಿಡ್‌ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT