ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳಿಗೆ ತರಾಟೆ

ಸಮೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆಯದಿರುವುದಕ್ಕೆ ‘ಬಿಸಿ’ ಮುಟ್ಟಿಸಿದ ಸದಸ್ಯರು
Last Updated 26 ಜೂನ್ 2018, 11:32 IST
ಅಕ್ಷರ ಗಾತ್ರ

ಬೆಳಗಾವಿ: ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದಡಿ ನಡೆಸಿದ ಸಮೀಕ್ಷೆಯ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿರುವುದಕ್ಕೆ ಪಾಲಿಕೆ ಅಧಿಕಾರಿಗಳನ್ನು ಶಾಸಕರು ಮತ್ತು ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡರು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಸದಸ್ಯರು, ಆರೋಗ್ಯ ಶಾಖೆ ಅಧಿಕಾರಿಗಳು, ಪರಿಸರ ಎಂಜಿನಿಯರ್‌ಗಳು ಹಾಗೂ ಸ್ವಚ್ಛತಾ ನಿರೀಕ್ಷಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ಕಿರಣ ಸಾಯಿನಾಕ, ‘ಸ್ವಚ್ಛತೆಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೂ ಒಳ್ಳೆಯ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಕಾರಣವೇನು? ಮಾರುಕಟ್ಟೆ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದೇ ಜನರು ಪರದಾಡುವಂತಾಗಿದೆ’ ಎಂದು ದೂರಿದರು.

ವಿವರಣೆ ನೀಡಿದ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ, ‘ತ್ಯಾಜ್ಯ ವಿಲೇವಾರಿಯಲ್ಲಿ ಉತ್ತಮ ಅಂಕಗಳು ಸಿಕ್ಕಿವೆ. ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯ ಶೇ 97ರಷ್ಟು ನಡೆಯುತ್ತಿದೆ. ‌ಸ್ವಚ್ಛತೆ ಬಗ್ಗೆ 600 ಮಂದಿ ನಾಗರಿಕರು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಹೆಚ್ಚಿನ ಅಂಕ ಬಂದಿಲ್ಲ. ಮಲಿನ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಇಲ್ಲದಿರುವುದು ತೊಡಕಾಗಿದೆ’ ಎಂದು ಸಮರ್ಥಿಸಿಕೊಂಡರು.

ಸಮರ್ಥಿಸಿಕೊಳ್ಳಬೇಡಿ:

ಪ್ರತಿಕ್ರಿಯಿಸಿದ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ‘ನಗರದಲ್ಲಿ ತ್ಯಾಜ್ಯ ವಿಲೇವಾರಿಗೆಂದೇ 40 ಕೋಟಿ ವ್ಯಯಿಸಲಾಗುತ್ತಿದೆ. ಆದರೆ, ಇಲ್ಲಿನ ಸ್ಥಿತಿ ನೋಡಿದರೆ ಆರುನೂರಲ್ಲ, 6 ಮಂದಿಯೂ ಒಳ್ಳೆಯ ಅಭಿಪ್ರಾಯ ಹೇಳುವುದಿಲ್ಲ. ಎಲ್ಲ ನಗರಗಳಿಗಿಂತಲೂ ಹಿಂದೆ ಬಿದ್ದಿದ್ದೇವೆ. ಗುತ್ತಿಗೆದಾರರ ಬಳಿ ಷರತ್ತುಗಳ ಪ್ರಕಾರ ವಾಹನಗಳಿವೆಯೇ, ಪೌರಕಾರ್ಮಿಕರು ಇದ್ದಾರೆಯೇ, ಅವರಿಗೆ ಸೌಲಭ್ಯ ಕೊಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಸುಮ್ಮನೆ ಸಮರ್ಥನೆ ಮಾಡಿಕೊಳ್ಳಬೇಡಿ’ ಎಂದು ಎಚ್ಚರಿಸಿದರು.

‘ಶೇ 97ರಷ್ಟು ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ ಎನ್ನುತ್ತೀರಿ. ಹಾಗಾದರೆ, ಏಕೆ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿದೆ? ನಗರದ 162 ಸ್ಥಳಗಳಲ್ಲಿ ಕಸ ಹಾಕಲಾಗುತ್ತಿದೆ. ಮನೆಗಳಲ್ಲಿ ಕಸ ಬೇರ್ಪಡಿಸಿ ಕೊಟ್ಟರೂ, ನಂತರ ಒಂದೆಡೆಯೇ ಸುರಿಯಲಾಗುತ್ತಿದೆ. ಜನಪ್ರತಿನಿಧಿಗಳಾದ ನಾವು ಜನರಿಂದ ಶಾಪ ಹಾಕಿಸಿಕೊಳ್ಳಬೇಕಾಗಿದೆ. ಮೇಯರ್‌, ಉಪಮೇಯರ್‌, ಸದಸ್ಯರು, ಶಾಸಕರು ಹಾಗೂ ಅಧಿಕಾರಿಗಳು ವಾರ್ಡ್‌ ಪ್ರದಕ್ಷಿಣೆ ಮಾಡೋಣ. ಜನರ ಅಭಿಪ್ರಾಯ ಕೇಳೋಣ. ಆಗ ಎಲ್ಲರ ಬಣ್ಣ ಬಯಲಾಗುತ್ತದೆ’ ಎಂದು ಸಲಹೆ ನೀಡಿದರು.

ಫಲಕ ಅಳವಡಿಕೆಗೆ ಸಲಹೆ:

‘ಪ್ರತಿ ರಸ್ತೆಗಳಲ್ಲಿ ಇಲ್ಲಿ ನಿತ್ಯ, 2 ದಿನ ಹಾಗೂ ವಾರಕ್ಕೊಮ್ಮೆ ಸ್ವಚ್ಛತೆ ಮಾಡಲಾಗುತ್ತದೆ, ಗುತ್ತಿಗೆದಾರರು ಯಾರು, ಸಂಬಂಧಿಸಿದ ಅಧಿಕಾರಿಗಳ್ಯಾರು ಎನ್ನುವ ಮಾಹಿತಿ ಫಲಕ ಅಳವಡಿಸಬೇಕು’ ಎಂದು ತಿಳಿಸಿದರು. ಇದಕ್ಕೆ ಉತ್ತರ ಶಾಸಕ ಅನಿಲ ಬೆನಕೆ ದನಿಗೂಡಿಸಿದರು.

ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಕ್ಷೇತ್ರದಲ್ಲಿ 3 ವಾರ್ಡ್‌ಗಳು ಬರುತ್ತವೆ. ಅಲ್ಲಿ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಸೊಳ್ಳೆ, ಹಂದಿ, ನಾಯಿಗಳ ಕಾಟ ಹೆಚ್ಚಾಗಿದೆ. ಕುಡಿಯುವ ನೀರನ್ನು 15 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಪರಿಸ್ಥಿತಿ ಸುಧಾರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಪರಿಸರ ಅಧಿಕಾರಿ ಉದಯಕುಮಾರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ‘ಜೂನ್ 27ರಿಂದ ನಿತ್ಯವೂ ಒಂದು ವಾರ್ಡ್‌ನಲ್ಲಿ ಪಾದಯಾತ್ರೆ ನಡೆಸಲಾಗುವುದು’ ಎಂದು ಮೇಯರ್‌ ನಿರ್ಣಯ ಪ್ರಕಟಿಸಿದರು.

ಸದಸ್ಯರಾದ ರಮೇಶ ಸೊಂಟಕ್ಕಿ, ದೀಪಕ ಜಮಖಂಡಿ, ಸರಳಾ ಹೇರೇಕರ, ರತನ್ ಮಾಸೇಕರ, ಶಾಂತಾ ಉಪ್ಪಾರ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಮೇಯರ್‌ ಮಧುಶ್ರೀ ಪೂಜಾರಿ, ಆಯುಕ್ತ ಶಶಿಧರ ಕುರೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT