ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಇಚ್ಛಾಶಕ್ತಿ ಕೊರತೆ: ಪ್ರವಾಸೋದ್ಯಮ ಮರೀಚಿಕೆ

ಪ್ರೇಕ್ಷಣೀಯ ಸ್ಥಳಗಳು, ರಮಣೀಯ ನಿಸರ್ಗ, ವಿಶ್ವವಿಖ್ಯಾತ ಜಲಪಾತ ನೋಡುವವರ ಕೊರತೆ
Published : 23 ಸೆಪ್ಟೆಂಬರ್ 2024, 4:44 IST
Last Updated : 23 ಸೆಪ್ಟೆಂಬರ್ 2024, 4:44 IST
ಫಾಲೋ ಮಾಡಿ
Comments

ಬೆಳಗಾವಿ: ಪ್ರಾಕೃತಿಕ, ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಇರುವ ಪ್ರವಾಸಿ ತಾಣಗಳು ಸಾಕಷ್ಟು. ಆದರೆ, ಪ್ರಚಾರದ ಕೊರತೆ, ಮೂಲಸೌಕರ್ಯ ಅಭಾವ, ಆಡಳಿತ ಯಂತ್ರದ ತಾತ್ಸಾರ ನಿಲುವಿನಿಂದ ಇಲ್ಲಿ ಪ್ರವಾಸೋದ್ಯಮ ಸೊರಗಿದೆ.

ಸವದತ್ತಿಯ ಯಲ್ಲಮ್ಮನಗುಡ್ಡ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಧೂಪದಾಳ ಪಕ್ಷಿಧಾಮ, ಚನ್ನಮ್ಮನ ಕಿತ್ತೂರು ಕೋಟೆ, ಖಾನಾಪುರ ತಾಲ್ಲೂಕಿನ ಹಲಸಿ ಸೇರಿದಂತೆ ಜಿಲ್ಲೆಯಲ್ಲಿ 98 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.

5.95 ಕೋಟಿ ಪ್ರವಾಸಿಗರ ಭೇಟಿ:  2023ರಲ್ಲಿ ಈ ತಾಣಗಳಿಗೆ  3,95,61,386 ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ವಿದೇಶಿಗರು 94 ಮಂದಿ ಮಾತ್ರ. 2024ರ ಜನವರಿ 1ರಿಂದ ಜೂನ್‌ 30ರ ವರೆಗೆ 2,00,02,093 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ 25 ವಿದೇಶಿಗರು ಇದ್ದಾರೆ. ಒಂದೂವರೆ ವರ್ಷದಲ್ಲಿ ಜಿಲ್ಲೆಗೆ ಭೇಟಿ ನೀಡಿರುವ 5.95 ಕೋಟಿ ಪ್ರವಾಸಿಗರ ಪೈಕಿ ಯಲ್ಲಮ್ಮನಗುಡ್ಡಕ್ಕೆ ಮಾತ್ರ ಭೇಟಿ ಕೊಟ್ಟವರ ಸಂಖ್ಯೆಯೇ 2.44 ಕೋಟಿಗೂ ಅಧಿಕ.

ಉಳಿದಂತೆ ಇದೇ ಅವಧಿಯಲ್ಲಿ ಸವದತ್ತಿಯ ಜೋಗುಳಬಾವಿ ಸತ್ಯಮ್ಮನ ದೇವಸ್ಥಾನಕ್ಕೆ 1.54 ಕೋಟಿ, ಗೋಕಾಕ ಜಲಪಾತಕ್ಕೆ 17.27 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಉಳಿದ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಟ್ಟವರ ಸಂಖ್ಯೆ ಹೆಚ್ಚಿಲ್ಲ. ಹಲವು ತಾಣಗಳಿಗೆ ಒಬ್ಬ ಪ್ರವಾಸಿಗರೂ ಬಂದಿಲ್ಲ.

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿದ್ದ ಬೆಳಗಾವಿಯ ವೀರಸೌಧ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ. ಆದರೆ, ಕನಿಷ್ಠ ಮೂಲಸೌಕರ್ಯ ಇಲ್ಲದೆ ಬಳಲುತ್ತಿದೆ. 

ಸವದತ್ತಿಯ ಯಲ್ಲಮ್ಮ ದೇವಸ್ಥಾನ ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಮೂಲಸೌಕರ್ಯವೇ ಇಲ್ಲ. ಈಗ ಯಲ್ಲಮ್ಮನಗುಡ್ಡ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರಚಿಸಿದ ಪ್ರಾಧಿಕಾರದ ಮೂಲಕ ಭಕ್ತರಿಗೆ ಹೆಚ್ಚಿನ ಸೌಕರ್ಯ ಸಿಗಬಹುದೆಂದು ನಿರೀಕ್ಷಿಸಲಾಗಿದೆ.

ಇನ್ನೂ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತದಲ್ಲೂ ಸಾಲು ಸಾಲು ಸಮಸ್ಯೆಗಳಿವೆ. ಗೊಡಚಿನಮಲ್ಕಿ ಗ್ರಾಮದಿಂದ ಜಲಪಾತ ವೀಕ್ಷಣೆಗೆ 3 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಬೇಕಿದೆ. ಆ ಮಾರ್ಗವೂ ಸುರಕ್ಷಿತವಾಗಿಲ್ಲ. ನಿರ್ಬಂಧವಿದ್ದರೂ ಪ್ರವಾಸಿಗರು ಗೋಕಾಕ ಜಲಪಾತದ ತುದಿಗೆ ಹೋಗಿ, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.

ರಾಷ್ಟ್ರೀಯ ಸ್ಮಾರಕಕ್ಕೆ ಬೇಕಿದೆ ಮಾರ್ಗಸೂಚಿ

ಚನ್ನಮ್ಮನ ಕಿತ್ತೂರು: ಇಲ್ಲಿನ ಕೋಟೆಯ ಅವಶೇಷ, ದೊರೆಗಳ ಸಮಾಧಿ ಮತ್ತು ಸಂಸ್ಥಾನಕ್ಕೆ ಸಂಬಂಧಪಟ್ಟ ತಾಣಗಳಿಗೆ ರಾಷ್ಟ್ರೀಯ ಸ್ಮಾರಕ ಪಟ್ಟಿಯಲ್ಲಿ ಸ್ಥಾನ ಸಿಗಬೇಕು ಎಂಬ ನಾಗರಿಕರ ಕೂಗು ಈ ಭಾಗದಲ್ಲಿ ಸದಾ ಕೇಳಿಬರುತ್ತಲೇ ಇರುತ್ತದೆ. ಆದರೆ, ಈವರೆಗೂ ಸ್ಪಂದನೆ ಸಿಕ್ಕಿಲ್ಲ.

ಕಿತ್ತೂರು–ಬಸಾಪುರ ಮಾರ್ಗದಲ್ಲಿನ ಹೊಂಡದ ಬಸವಣ್ಣ ಗುಡಿ ಬಳಿ, ಈಗಾಗಲೇ ರಾಷ್ಟೀಯ ಸ್ಮಾರಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಗೋವೆಯ ಕದಂಬರ ಕಾಲದ್ದು ಎನ್ನಲಾದ ಶಿಲಾಶಾಸನವಿದೆ. ಈ ತಾಣಕ್ಕೆ ತೆರಳಲು ಸರಿಯಾದ ನಾಮಫಲಕವನ್ನೇ ಪ್ರದರ್ಶಿಸಿಲ್ಲ.
‘ಶಿಲಾಶಾಸನದಲ್ಲಿ ಕೆತ್ತಿರುವ ವಿಷಯದ ಕುರಿತು ಪ್ರವಾಸಿಗರು ಮತ್ತು ವೀಕ್ಷಕರಿಗೆ ಗೊತ್ತಾಗುತ್ತಿಲ್ಲ. ಈ ಮಾಹಿತಿ ಸಿಕ್ಕರೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು. ಪ್ರವಾಸಿ ತಾಣವಾಗಿಯೂ ಬೆಳೆಸಬಹುದು’ ಎನ್ನುತ್ತಾರೆ ಪ್ರವಾಸಿಗರು.

‘ನಶಿಸುವ ಭೀತಿಯಲ್ಲಿವೆ’

ರಾಮದುರ್ಗ: ರಾಮದುರ್ಗ ತಾಲ್ಲೂಕು ಕೊಳ್ಳಗಳ ನಾಡು. ಐದಾರು ಕೊಳ್ಳಗಳು ಪ್ರಕೃತಿಪ್ರಿಯರನ್ನು ಸೆಳೆಯುತ್ತವೆ. ಅದರಲ್ಲೂ ಶಬರಿ ಕೊಳ್ಳವು ರಾಮಭಕ್ತೆ ಶಬರಿ ನೆಲೆಸಿದ ಪ್ರಸಿದ್ದ ಪ್ರವಾಸಿ ತಾಣ. ಮೇಗುಂಡೇಶ್ವರ ಕೊಳ್ಳ, ಕಲ್ಲೂರ ಸಿದ್ಧೇಶ್ವರ ಕೊಳ್ಳ, ಈಶ್ವರಪ್ಪನ ಕೊಳ್ಳ, ಹೂವಿನಕೊಳ್ಳಗಳು ಒಂದೊಂದು ವಿಷಯದಲ್ಲಿ ಪ್ರಖ್ಯಾತಿ ಪಡೆದಿವೆ. ಇತ್ತೀಚೆಗೆ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಶಿವನ ಮೂರ್ತಿಯೂ ಜನಸಾಗರವನ್ನೇ ತನ್ನತ್ತ ಸೆಳೆಯುತ್ತಿದೆ. ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಕೆಲವಷ್ಟೇ ಮೂಲಸೌಕರ್ಯ ಹೊಂದಿವೆ. ಉಳಿದವು ನಶಿಸುವ ಭೀತಿಯಲ್ಲಿವೆ.

ಪ್ರವಾಸಿಗರಿಗೆ ನಿರ್ಬಂಧ 

ಖಾನಾಪುರ: ಪಶ್ಚಿಮಘಟ್ಟದ ಸೆರಗಿನಲ್ಲಿರುವ ಖಾನಾಪುರ ತಾಲ್ಲೂಕಿನ ಕಣಕುಂಬಿ, ಚಿಗುಳೆ, ಪಾರವಾಡ, ಜಾಂಬೋಟಿ, ಚೋರ್ಲಾ, ಭೀಮಗಡ, ತಳೇವಾಡಿ, ಸಡಾ, ಕಿರಾವಳಾ, ನಾಗರಗಾಳಿ ಹಾಗೂ ಅಕ್ಕಪಕ್ಕದ ಅರಣ್ಯ ಪ್ರದೇಶದಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ, ಅವುಗಳ ವೀಕ್ಷಣೆಗೆ ಅರಣ್ಯ ಇಲಾಖೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ನಂದಗಡ, ಹಲಸಿ, ಕಸಮಳಗಿ ಮತ್ತು ಇಟಗಿಯಲ್ಲಿ ಐತಿಹಾಸಿಕ ಹಿನ್ನೆಲೆ ಇರುವ ಸ್ಮಾರಕಗಳಿವೆ. ಆದರೆ, ಹೇಳಿಕೊಳ್ಳುವಂಥ ಸೌಕರ್ಯವಿಲ್ಲ.

ವಿನಾಶದ ಅಂಚಿನಲ್ಲಿ ಕಲ್ಮೇಶ್ವರ ದೇವಸ್ಥಾನ

ಚಿಕ್ಕೋಡಿ: ಕಬ್ಬೂರ ಹೊರವಲಯದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಿದ ಕಲ್ಮೇಶ್ವರ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಚಾಲುಕ್ಯರ ಕಾಲದ ದೇವಾಲಯ ನೋಡಲು ಸುಂದರವಾಗಿದ್ದು, ಗರ್ಭಗೃಹಗಳು, ವಿಶಾಲವಾದ ನವರಂಗ, ಪ್ರತ್ಯೇಕವಾದ ಮುಖಮಂಟಪವಿದೆ.
ಈ ದೇವಸ್ಥಾನ ರಕ್ಷಿಸಿ, ಪ್ರವಾಸಿ ತಾಣ ವನ್ನಾಗಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆ ಪ್ರವಾಸೋದ್ಯಮ ಇಲಾಖೆ ಮೇಲಿದೆ.

ಬೆಳೆಯದ ಪ್ರವಾಸೋದ್ಯಮ

ಕಾಗವಾಡ: ತಾಲ್ಲೂಕಿನ ಮಂಗಸೂಳಿಯಲ್ಲಿ ಪುರಾತನ ಕಾಲದ ಮಲ್ಲಯ್ಯ ದೇವಸ್ಥಾನವಿದೆ. ಮಹಾರಾಷ್ಟ್ರ, ಗೋವಾದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ, ಇಲ್ಲಿ ಪ್ರವಾಸೋದ್ಯಮ ಬೆಳೆದಿಲ್ಲ.

ತ್ರಿಕೂಟ ಜೈನ ಬಸದಿಯಿಂದ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯು ಐತಿಹಾಸಿಕವಾಗಿ ಗುರುತಿಸಿಕೊಂಡಿದೆ. ಇದು 12ನೇ ಶತಮಾನದ ಪೂರ್ವ ಇತಿಹಾಸ ಮತ್ತು ಸವದತ್ತಿಯ ರಟ್ಟರ ವಾಸ್ತುಶಿಲ್ಪ ಹೊಂದಿದೆ. ಇದೇ ಅವಧಿಯಲ್ಲಿ ನಿರ್ಮಿಸಿರುವ ಕಲ್ಮೇಶ್ವರ ಮತ್ತು ರಾಮಲಿಂಗೇಶ್ವರ ದೇವಸ್ಥಾನಗಳು ವಾಸ್ತುಶಿಲ್ಪ
ದೃಷ್ಟಿಯಿಂದ ಶ್ರೀಮಂತವಾಗಿವೆ. ಆದರೆ, ಭಕ್ತರು ಮತ್ತು ಪ್ರವಾಸಿಗರಿಗೆ ಹೆಚ್ಚಿನ ಸೌಕರ್ಯ ಬೇಕಿದೆ.

ಕಳಚಿ ಬೀಳುತ್ತಿವೆ ಅವಶೇಷಗಳು: ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ಮಧ್ಯದಲ್ಲಿ ದಶಕದ ಹಿಂದೆ ಬಸವೇಶ್ವರರ ಪತ್ನಿ, ಶರಣೆ ಗಂಗಾಂಬಿಕೆ ಐಕ್ಯ ಮಂಟಪ ನಿರ್ಮಿಸಲಾಗಿದೆ. ಹಿಂದಿನ ಶಾಸಕ ಮಹಾಂತೇಶ ದೊಡಗೌಡರ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಳ್ಳಲು ₹2.5 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಲಾಗಿತ್ತು. ಆದರೆ, ಈವರೆಗೂ ಯಾವ ಕೆಲಸವೂ ಕಾರ್ಯರೂಪಕ್ಕೆ ಬಂದಿಲ್ಲ. ಮಂಟಪದಲ್ಲಿನ ಅವಶೇಷ ಒಂದೊಂದಾಗಿ ಕಳಚಿ ಬೀಳುತ್ತಿವೆ.  ಪ್ರವಾಸೋದ್ಯಮ ಇಲಾಖೆಯಡಿ ನಿರ್ಮಿಸುತ್ತಿದ್ದ ವಸತಿ‌ ನಿಲಯ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ.

ನಿರ್ವಹಣೆ ಇಲ್ಲದೆ ಸೊರಗಿದ ಗುಮ್ಮಟಗಳು

ವಿಜಯಪುರದ ಮಾದರಿಯಲ್ಲಿ ಹುಕ್ಕೇರಿಯಲ್ಲಿ ಪುಟ್ಟ ಗೋಳಗುಮ್ಮಟಗಳಿವೆ. ಆದರೆ, ನಿರ್ವಹಣೆ ಕೊರತೆಯಿಂದ ಅವು ಸೊರಗುತ್ತಿವೆ. ನಾಲ್ಕೈದು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಒಂದು ಗುಮ್ಮಟವನ್ನು ನವೀಕರಿಸಿತ್ತು. ಆದರೂ, ಅದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಸದ್ಯ ಮೂರು ಗುಮ್ಮಟಗಳ ಮೇಲೆ ಗಿಡಗಂಟಿ ಬೆಳೆದಿವೆ.

‘ತಿರುಳ್ಗನ್ನಡ ನಾಡು’ ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ಒಕ್ಕುಂದ ಗ್ರಾಮದಲ್ಲಿ ರಟ್ಟರ ಆಳ್ವಿಕೆಯಲ್ಲಿ ನಿರ್ಮಿಸಿದ ‘ತ್ರಿಕೂಟೇಶ್ವರ’ ಜೈನ ಬಸದಿ(ಕಲ್ಲಗುಡಿ) ಇದೆ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಜೀವತಳೆದ ದೇಗುಲ, ಸುಂದರವಾದ ಕೆತ್ತನೆ ಮೂಲಕ ಕಣ್ಮನಸೆಳೆಯುತ್ತದೆ. ಆದರೆ, ಅಭಿವೃದ್ಧಿ ವಿಚಾರವಾಗಿ ಸರ್ಕಾರದ ಕಡೆಗಣನೆಗೆ ಒಳಗಾಗಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಒಂದೂವರೆ ದಶಕದ ಹಿಂದೆ ಆರಂಭಿಸಿದ್ದ ಜಿರ್ಣೋದ್ಧಾರ ಕಾಮಗಾರಿ ಸ್ಥಗಿತವಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಬೈಲಹೊಂಗಲದ ಕಲ್ಮಠ ಗಲ್ಲಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಇದೆ. ಕಾಟಾಚಾರಕ್ಕೆ ಎಂಬಂತೆ ಇಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತಿದೆ. ಸಮಾಧಿ ಸುತ್ತಲೂ ಕೋಟೆ ಮಾದರಿಯಲ್ಲಿ ಕಟ್ಟಡ ಮಾತ್ರ ನಿರ್ಮಿಸಲಾಗಿದೆ. ಚನ್ನಮ್ಮನ ಇತಿಹಾಸ ಸಾರುವ ಯಾವುದೇ ಫಲಕ ಇಲ್ಲಿಲ್ಲ.

ಏನೇನು ಕೊರತೆ?

  • ಉತ್ತಮ ರಸ್ತೆ ಸಂಪರ್ಕ ಇಲ್ಲ

  • ವಸತಿಗಾಗಿ ಬೇಡಿಕೆಯಷ್ಟು ಯಾತ್ರಿ ನಿವಾಸ ಇಲ್ಲ

  • ಸಮರ್ಪಕವಾಗಿ ಗೈಡ್‌ಗಳಿಲ್ಲ

  • ಬಸ್‌ ಸೌಕರ್ಯ ಕೊರತೆ

  • ಶುದ್ಧ ಕುಡಿಯುವ ನೀರು, ಶೌಚಗೃಹಗಳ ಅಭಾವ

  • ಕೆಲವೆಡೆ ಹೋಟೆಲ್‌ಗಳಿಲ್ಲ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ರವಿಕುಮಾರ ಹುಲಕುಂದ, ರಾಮೇಶ್ವರ ಕಲ್ಯಾಣಶೆಟ್ಟಿ, ಬಸವರಾಜ ಶಿರಸಂಗಿ, ಚನ್ನಪ್ಪ ಮಾದರ, ಪ್ರಸನ್ನ ಕುಲಕರ್ಣಿ, ಬಾಲಶೇಖರ ಬಂದಿ, ಎನ್‌.ಪಿ.ಕೊಣ್ಣೂರ, ಚಂದ್ರಶೇಖರ ಚಿನಕೇಕರ, ವಿಜಯಮಹಾಂತೇಶ ಅರಕೇರಿ, ಶಿವಾನಂದ ವಿಭೂತಿಮಠ )

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT