ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರಿಗೆ ಜನ ಕಲ್ಲು ಹೊಡೆಯಲಿದ್ದಾರೆ

ಸರ್ಕಾರಗಳ ನಡೆಗೆ ಲಕ್ಷ್ಮಿ ಹೆಬ್ಬಾಳಕರ ಆಕ್ರೋಶ
Last Updated 20 ಮೇ 2021, 12:58 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೊರೊನಾ ನಿಯಂತ್ರಣ ಹಾಗೂ ಪ್ಯಾಕೇಜ್ ಘೋಷಣೆ ವಿಷಯದಲ್ಲಿ ಸಂಪೂರ್ಣವಾಗಿ ಎಡವಿದೆ. ಇದೇ ರೀತಿ ಮುಂದುವರಿದರೆ ಅವರಿಗೆ ಜನರು ಬೀದಿ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ’ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಂಡು ಬಂದ ಬಿಜೆಪಿಗೆ ಡಬಲ್ ಎಂಜಿನ್ ಅರ್ಥ ಏನು ಎಂದು ಕೇಳಬೇಕಾಗಿದೆ. ಆತ್ಮನಿರ್ಭರದ ಬಗ್ಗೆ ಮಾತನಾಡುತ್ತಿದ್ದವರು ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಗಂಗಾನದಿ ಸ್ವಚ್ಛ ಮಾಡುತ್ತೇವೆ ಎಂದಿದ್ದರು. ಈಗ ಅಲ್ಲಿ ಶವಗಳು ತೇಲುತ್ತಿವೆ. ಎಲ್ಲಿದೆ ಇವರ ಧರ್ಮ, ಇವರ ಸಂಸ್ಕೃತಿ? ನಾಚಿಕೆ ಆಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯ ಸಂಸದರು ಏನು ಮಾಡುತ್ತಿದ್ದಾರೆ? ಚಂಡಮಾರುತದಿಂದ ಆದ ಹಾನಿ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದರು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಆರಂಭದಿಂದಲೂ ನಮಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ನೆರೆಯಾದಾಗಲೂ ಹಣ ಕೊಡಲಿಲ್ಲ. ಕೋವಿಡ್ ನಿಯಂತ್ರಣಕ್ಕೂ ನೀಡಲಿಲ್ಲ. ಆಮ್ಲಜನಕವನ್ನೂ ಕೊಡಲಿಲ್ಲ. ಎಲ್ಲವನ್ನೂ ಹೈಕೋರ್ಟ್ ಆದೇಶಿಸುವಂತಹ ಸ್ಥಿತಿ ಇದೆ. ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಆಮ್ಲಜನಕ ಬರುತ್ತಿದೆ ಇದೆಂತಹ ಡಬಲ್ ಎಂಜಿನ್ ಸರ್ಕಾರ?’ ಎಂದು ಕೇಳಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರೂಪ್ಪ ಅವರ ಬಗ್ಗೆ ಬಹಳ ಗೌರವವಿತ್ತು. ಅವರ ಆಡಳಿತ ವೈಖರಿ ನೋಡಿದರೆ ಬೇಸರವಾಗುತ್ತಿದೆ. ಪ್ರಧಾನಿ ಮೆಚ್ಚಿಸಲು ಸೋಂಕಿತರ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದ್ದಾರೆ. ಕೂಡಲೇ ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು. ಇಲ್ಲವಾದಲ್ಲಿ ಹಳ್ಳಿಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಕೋವಿಡ್‌ನಿಂದ ಮೃತರಾದವರ ಲೆಕ್ಕವನ್ನೂ ಮುಚ್ಚಿಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಸಾಯುವವರ ಲೆಕ್ಕ ನಿತ್ಯವೂ ಸಿಗುತ್ತಿದೆ. ಆದರೆ, ಇಲಾಖೆ ನೀಡುವ ಲೆಕ್ಕಕ್ಕೂ ಅದಕ್ಕೂ ತಾಳೆಯೇ ಆಗುತ್ತಿಲ್ಲ. ಹೀಗೆ ವಾಸ್ತವ ಮುಚ್ಚಿಟ್ಟು ಏನು ಮಾಡುವವರಿದ್ದಾರೆ?’ ಎಂದು ಕೇಳಿದರು.

‘ಬಿಜೆಪಿ ಶಾಸಕರಿರುವಲ್ಲಿ ಹೆಚ್ಚಿನ ಲಸಿಕೆ ಕೊಡಲಾಗುತ್ತಿದೆ. ಕಾಂಗ್ರೆಸ್ ಶಾಸಕರಿರುವಲ್ಲಿ ಕಡಿಮೆ ಇದೆ. ಇದರಲ್ಲೂ ಪಕ್ಷಪಾತ ಮಾಡಲಾಗುತ್ತಿದೆ. ಹಳ್ಳಿಯವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾದೀತೇ? ಮನೆ ಮನಗೆ ಹೋಗಿ ಲಸಿಕೆ ಕೊಡಬೇಕು. ಕಾಂಗ್ರೆಸ್‌ನಿಂದ ₹ 100 ಕೋಟಿ ಕೊಡುತ್ತೇವೆ ಎಂದು ಪತ್ರ ಬರೆದು 8 ದಿನಗಳಾದರೂ ಉತ್ತರವಿಲ್ಲ. ವಿರೋಧ ಪಕ್ಷವಾಗಿ ಸಹಕಾರ ಕೊಡುತ್ತಿದ್ದೇವೆ. ಆದರೆ, ಎಲ್ಲವನ್ನೂ ಸಹಿಸಿಕೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ರೈತರಿಗೆ ₹ 10 ಲಕ್ಷ ಶೂನ್ಯ ಬಡ್ಡಿ ದರದ ಸಾಲ ಕೊಡಬೇಕು. ಆರ್ಥಿಕ ಪ್ಯಾಕೇಜ್ ಘೋಷಿಸಿರುವ ಸರ್ಕಾರ ನೇಕಾರರನ್ನು ಸೇರಿಸಿಲ್ಲ. ಹಲವು ವರ್ಗಗಳನ್ನು ಬಿಟ್ಟಿದೆ’ ಎಂದು ಟೀಕಿಸಿದರು.

‘ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯವಿಲ್ಲವೆ? ದೊಡ್ಡ ಜಿಲ್ಲೆಗೆ ಫ್ಲೈಯಿಂಗ್ ಉಸ್ತುವಾರಿ ಸಚಿವರನ್ನು ಕೊಟ್ಟಿದ್ದಾರೆ. ಅವರು ಇಲ್ಲಿಗೆ ಬಂದು ವಾಪಸ್ ಬಾಗಲಕೋಟೆಗೆ ಹಾರುತ್ತಾರೆ. ಇದರಿಂದ ಪ್ರಯೋಜನವೇನು? ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?’ ಎಂದರು.

‘ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಜನರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಗಲಟ್ಟಿ ಇದ್ದರು.

***

ಜನರೇ, ಬಿಜೆಪಿ ಸರ್ಕಾರ ನಿಮ್ಮನ್ನು ರಕ್ಷಿಸುವುದಿಲ್ಲ. ಅವರನ್ನು ನಂಬಿಕೊಂಡು ಅಮೂಲ್ಯ ಜೀವ ಕಳೆದುಕೊಳ್ಳಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ
ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT