ಮಹದಾಯಿ: ಕಾಮಗಾರಿ ಆರಂಭಿಸಲು ಆಗ್ರಹ

7
ಕೇಂದ್ರಕ್ಕೆ ನಿಯೋಗ: ಮುಖ್ಯಮಂತ್ರಿ ಭರವಸೆ

ಮಹದಾಯಿ: ಕಾಮಗಾರಿ ಆರಂಭಿಸಲು ಆಗ್ರಹ

Published:
Updated:

ಬೆಳಗಾವಿ: ಮಹದಾಯಿ ನದಿ ನೀರು ಸದ್ಬಳಕೆಗೆ ಸಂಬಂಧಿಸಿದಂತೆ ಅಗತ್ಯವಾದ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳುವಂತೆ ಆಗ್ರಹಿಸಿ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿಯ ಮುಖಂಡರು ಗುರುವಾರ ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಧರಣಿ ನಡೆಸಿದರು.

ಮಧ್ಯಾಹ್ನದ ನಂತರ ಅವರನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆಗೆ ಪೊಲೀಸರು ಕರೆದೊಯ್ದರು.

‘ನಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಮಗಾರಿ ಆರಂಭಿಸುವುದಕ್ಕೆ ಪೂರ್ವಭಾವಿಯಾಗಿ ಅಧಿಸೂಚನೆ ಮಾಡುವಂತೆ ಒತ್ತಡ ಹೇರುವುದಕ್ಕಾಗಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು. ಈ ಭಾಗದ ಸಂಸದರು ಪ್ರಧಾನಿ ಮೇಲೆ ಒತ್ತಡ ತರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಮಹದಾಯಿ ಹೋರಾಟಗಾರರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಯಮನೂರು ಮೊದಲಾದ ಕಡೆಗಳಲ್ಲಿ ಪೊಲೀಸರು ನಡೆಸಿದ ಲಾಠಿಪ್ರಹಾರದಿಂದ ಗಾಯಗೊಂಡವರಿಗೆ ಪರಿಹಾರ ನೀಡಬೇಕು. ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಯಿತು’ ಎಂದು ಸಮಿತಿಯ ರಾಜ್ಯ ಸಂಚಾಲಕ ಅಮೃತ ಇಜಾರಿ ಮಾಹಿತಿ ನೀಡಿದರು.

‘ಪ್ರಧಾನಿ ಬಳಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯಲು 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ರೈತರ ಬೇಡಿಕೆಯಂತೆ ಕೆಲವು ಮುಖಂಡರನ್ನೂ ಕರೆದೊಯ್ಯಲು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು’ ಎಂದು ತಿಳಿಸಿದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಮುಖಂಡರಾದ ಸುಭಾಷ್ ಪಾಟೀಲ, ಶಿವಣ್ಣ ಹುಬ್ಬಳ್ಳಿ, ವಿನೋದ್ ಕ್ಯಾರೆಕಟ್ಟಿ, ಕುಮಾರಸ್ವಾಮಿ ಹಿರೇಮಠ, ರಾಜು ಪಾಟೀಲ, ಬಸಪ್ಪ ಬೀರಣ್ಣವರ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !