ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಲಿ ಚಿರತೆ ಸೆರೆಗೆ ಹರಸಾಹಸ: ಕಣ್ಣಾಮುಚ್ಚಾಲೆ ಆಡುತ್ತಿರುವ ಕಾಡುಪ್ರಾಣಿ

ಇಡೀ ರಾತ್ರಿ ಚಿರತೆ ಬೋನಿನಲ್ಲಿ ಕುಳಿತ ಸಿಬ್ಬಂದಿ!
Last Updated 10 ಆಗಸ್ಟ್ 2022, 13:17 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗಾಲ್ಫ್‌ ಮೈದಾನದಲ್ಲಿ ಅವಿತುಕೊಂಡ ಚಿರತೆ ಸೆರೆಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆರನೇ ದಿನವಾದ ಬುಧವಾರ ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ. ಬೋನಿನೊಳಗೆ ಸ್ವತಃ ಸಿಬ್ಬಂದಿಯೇ ಕುಳಿತು ಇಡೀ ರಾತ್ರಿ ಕಾದರೂ ಪ್ರಯೋಜನವಾಗಲಿಲ್ಲ.

ಇಲ್ಲಿನ ಮುಳ್ಳುಕಂಟಿಗಳ ಪೊದೆಯಲ್ಲಿ ಅವಿತ ಚಿರತೆ ಚಿತ್ರ ಸೋಮವಾರ ರಾತ್ರಿ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಥಣಿ ಮರಿಯಪ್ಪ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಬೋನಿನಲ್ಲಿ ಕೂಡ್ರಿಸಲಾಗಿತ್ತು: ‘ಚಿರತೆ ಸೆರೆಗಾಗಿ ಇಲ್ಲಿ ಏಳು ಬೋನು ಅಳವಡಿಸಲಾಗಿದೆ. ಮಂಗಳವಾರ ರಾತ್ರಿ 10ರಿಂದ ಬುಧವಾರ ಬೆಳಿಗ್ಗೆ 7ರವರೆಗೆ ಬೋನಿನಲ್ಲಿ ಅರವಳಿಕೆ ಚುಚ್ಚುಮದ್ದು ನೀಡುವ ತಜ್ಞ ನಿಖಿಲ್‌ ಕುಲಕರ್ಣಿ ಅವರನ್ನು ಕೂಡ್ರಿಸಲಾಗಿತ್ತು. ಆದರೆ, ಚಿರತೆ ಇತ್ತ ಸುಳಿದಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಡ್ರೋನ್‌ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಲು ಪ್ರಯತ್ನ ನಡೆಸಿದ್ದೇವೆ. ಆದರೆ, ನೆಟ್‌ವರ್ಕ್‌ ಸಮಸ್ಯೆ ಹಾಗೂ ಸತತ ಮಳೆಯಿಂದಾಗಿ ಚಿರತೆ ಹಿಡಿಯಲು ಸಾಧ್ಯವಾಗುತ್ತಿಲ್ಲ’ ಎಂದರು.

ಪರಿಣಿತರ ತಂಡ ಕರೆಸಲು ಒತ್ತಾಯ

‘ಹನುಮಾನ ನಗರ, ಜಾಧವ ನಗರ ಮತ್ತಿತರ ಪ್ರದೇಶಗಳ ನಾಗರಿಕರಲ್ಲಿ ಆತಂಕ ಸೃಷ್ಟಿಸಿದ ಚಿರತೆ ಶೋಧಿಸಲು ಕಾಡು ಪ್ರಾಣಿಗಳನ್ನು ಹಿಡಿಯುವಲ್ಲಿ ಪರಿಣಿತರಾಗಿರುವ ತಂಡಗಳನ್ನು ಕರೆಯಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಥನಿ ಮರಿಯಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT