ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಜಿತ್‌ ಜವಳಕರ್‌ ಬಂಧನ ಪ್ರಕರಣ: ಆಸ್ಪತ್ರೆ ಬಿಲ್‌ ನೀಡಲು ಪೊಲೀಸರಿಗೆ ಪತ್ರ

ಕಳೆದೆರಡು ದಿನಗಳಿಂದ ಚರ್ಚೆಗೆ ಗ್ರಾಸ ಒದಗಿಸಿದ ಪಾಲಿಕೆ ಸದಸ್ಯನ ಬಂಧನ
Published 29 ನವೆಂಬರ್ 2023, 7:55 IST
Last Updated 29 ನವೆಂಬರ್ 2023, 7:55 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆ ಸದಸ್ಯ ಅಭಿಜಿತ್‌ ಜವಳಕರ್‌ ಅವರ ಆಸ್ಪತ್ರೆಗೆ ದಾಖಲೆ, ಡಿಸ್ಚಾರ್ಜ್‌, ಪೊಲೀಸರಿಂದ ಬಂಧನ, ಬಿಡುಗಡೆ... ಹೀಗೆ ಕಳೆದೆರಡು ದಿನಗಳಿಂದ ಬೆಳಗಾವಿ ನಾಟಕೀಯ ಬೆಳವಣಿಗೆಗೆ ಸಾಕ್ಷಿ ಆಯಿತು.

ಜವಳಕರ್‌ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಒಂದು ತಂಡ ಆರೋಪಿಸಿತು. ಪಾಲಿಕೆ ಸದಸ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಪೂರ್ಣ ವಿವರ ಪಡೆದೇ ಬಂಧಿಸಲಾಗಿದೆ ಎಂದು ಪೊಲೀಸರು ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ, ಅವರ ಬಿಲ್‌ ಪೊಲೀಸರೇ ಕಟ್ಟಬೇಕು ಎಂದು ಆಸ್ಪತ್ರೆಯವರು ಪತ್ರ ನೀಡಿದರು. ಮಂಗಳವಾರ ಇಡೀ ದಿನ ಈ ಸುದ್ದಿ ಹೂರಣವಾಗಿ ಹಂಚಿಹೋಯಿತು.

‘ದಕ್ಷತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾನಗರ ಪಾಲಿಕೆ ಸದಸ್ಯ ಅಭಿಜಿತ್‌ ಜವಳಕರ್‌ ಅವರನ್ನು ಪೊಲೀಸರು ಅನುಮತಿ ಪಡೆಯದೇ ಬಂಧಿಸಿದ್ದಾರೆ. ಹಾಗಾಗಿ, ಅವರ ಚಿಕಿತ್ಸಾ ವೆಚ್ಚ ಭರಿಸಿ’ ಎಂದು ಆಸ್ಪತ್ರೆ ನಿರ್ದೇಶಕ ಕಮಲಾಕರ ಅಚ್ರೇಕರ ಅವರು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ರಾಮಪ್ಪ ಅವರಿಗೆ ಮಂಗಳವಾರ ಮನವಿ ನೀಡಿದರು.

‘ನವೆಂಬರ್ 23ರಂದು ರಾತ್ರಿ 7.23ಕ್ಕೆ ಜವಳಕರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಡಾ.ಸಂತೋಷ್ ಮರೇದ್‌ ಮತ್ತು ಡಾ.ಅಂಜಲಿ ಚಿಕ್ಕೋಡಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ರೋಗಿಯು ಚೇತರಿಸಿಕೊಂಡಿದ್ದು, ನ.26ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಬೇಕಿತ್ತು. ಅಂದೇ ಸಂಜೆ 6.30ಕ್ಕೆ ಟಿಳಕವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಆಸ್ಪತ್ರೆ ಪ್ರವೇಶಿಸಿ, ನಮ್ಮ ಅನುಮತಿಯಿಲ್ಲದೇ, ಬಲವಂತವಾಗಿ ರೋಗಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಿಲ್ ಪಾವತಿಸುವವರೆಗೂ ಕಾಯಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ, ಚಿಕಿತ್ಸೆ ವೆಚ್ಚ ಭರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಅಭಿಜಿತ ಜವಳಕರ್‌ ಬಂಧನ ವಿಚಾರದಲ್ಲಿ ಬಿಜೆಪಿ ನಾಯಕರು ಮತ್ತು ಆಸ್ಪತ್ರೆಯವರು ಮಾಡಿದ ಆರೋಪವನ್ನು ಎಸ್‌.ಎನ್‌.ಸಿದ್ರಾಮಪ್ಪ ಅಲ್ಲಗಳೆದರು.

‘ನಾವು ಈ ಪ್ರಕರಣದ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಸುತ್ತಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಕಾನೂನು ಬದ್ಧವಾಗಿಯೇ ಅವರನ್ನು ಬಂಧಿಸಿದ್ದೇವೆ. ನಮ್ಮ ಬಳಿ ಜವಳಕರ್‌ ಆಸ್ಪತ್ರೆಯಿಂದ ಬಿಡುಗಡೆಯಾದ ಸಾರಾಂಶವಿದೆ (ಡಿಸ್ಚಾರ್ಜ್‌ ರಿಪೋರ್ಟ್‌)’ ಎಂದರು.

ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಾ.ಕಮಲಾಕರ್ ಅಚ್ರೇಕರ್, ‘ಜವಳಕರ್‌ ಅವರ ₹20 ಸಾವಿರಕ್ಕೂ ಅಧಿಕ ಚಿಕಿತ್ಸಾ ವೆಚ್ಚ ಭರಿಸಬೇಕಿದೆ. ಇದನ್ನು ಪಾವತಿಸದೆ ರೋಗಿಯನ್ನು ಕರೆದೊಯ್ದ ಬಗ್ಗೆ ದೂರು ನೀಡಲು ಬಂದಿದ್ದೆ. ಆದರೆ, ನಗರ ಪೊಲೀಸರು ಆಯುಕ್ತರು ರೋಗಿಯು ಆಸ್ಪತ್ರೆಯಿಂದ ಬಿಡುಗಡೆಯಾದ ಸಾರಾಂಶ ತೋರಿಸಿದ್ದಾರೆ. ಪೊಲೀಸರು ಅದನ್ನು ಹೇಗೆ ಪಡೆದರು ಎಂದು ಆಸ್ಪತ್ರೆಯಲ್ಲಿ ಪರಿಶೀಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT