ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ; ಬೆಳಗಾವಿ ವಿಭಾಗಕ್ಕೆ 2.20 ಲಕ್ಷ ಪಾಲಿಸಿಗಳ ಗುರಿ

Last Updated 1 ಸೆಪ್ಟೆಂಬರ್ 2018, 13:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯೂ ಸೇರಿದಂತೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾ ವ್ಯಾಪ್ತಿ ಹೊಂದಿರುವ ಬೆಳಗಾವಿ ವಿಭಾಗೀಯ ಎಲ್‌ಐಸಿ ಕಚೇರಿಗೆ ಪ್ರಸಕ್ತ ವರ್ಷ 2.20 ಲಕ್ಷ ಹೊಸ ಪಾಲಿಸಿಗಳನ್ನು ಮಾಡುವ ಗುರಿ ಇದೆ ಎಂದು ಎಲ್‌ಐಸಿ ಹಿರಿಯ ವಿಭಾಗೀಯ ಮ್ಯಾನೇಜರ್‌ ಪೂರ್ಣಿಮಾ ಗಾಯತೊಂಡೆ ಹೇಳಿದರು.

ಇಲ್ಲಿನ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ವರ್ಷ ಆರಂಭವಾದಾಗಿನಿಂದ ಇದುವರೆಗೆ ಸುಮಾರು 50,000 ಹೊಸ ಪಾಲಿಸಿಗಳನ್ನು ಮಾಡಲಾಗಿದೆ. ವರ್ಷಾಂತ್ಯಕ್ಕೆ ಗುರಿಯನ್ನು ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಸಿಗಳ ಮೊದಲ ವರ್ಷದ ಪ್ರೀಮಿಯಂ ಹಣ ₹ 275 ಕೋಟಿ ಸಂಗ್ರಹಿಸುವ ಗುರಿ ಇದ್ದು, ಈಗಾಗಲೇ ₹ 65 ಕೋಟಿ ಸಂಗ್ರಹವಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು, ನೌಕರರು ಹೀಗೆ ಎಲ್ಲ ರೀತಿಯ ವರ್ಗದ ಜನರಿಗೆ ಅನುಕೂಲವಾಗುವಂತಹ 30 ಪಾಲಿಸಿಗಳಿವೆ. ಈಗಲೂ ವಿಮಾ ಮಾರುಕಟ್ಟೆಯಲ್ಲಿ ಎಲ್‌ಐಸಿ ಅಗ್ರಗಣ್ಯವಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ಗುರಿ ಮೀರಿ ಪ್ರೀಮಿಯಂ ಹಣ ಸಂಗ್ರಹಿಸಲಾಗಿದೆ. ₹ 230 ಕೋಟಿ ಪ್ರೀಮಿಯಂ ಹಣ ಸಂಗ್ರಹ ಗುರಿಯಲ್ಲಿ ₹ 238.9 ಕೋಟಿ ಸಂಗ್ರಹಿಸಲಾಗಿದೆ. ಶೇ 103.29 ಸಾಧನೆ ಮಾಡಲಾಗಿದೆ ಎಂದರು.

ಕಳೆದ ವರ್ಷ 2017–18ನೇ ಸಾಲಿನಲ್ಲಿ 1,72,882 ಪಾಲಿಸಿಗಳ ಮೆಚ್ಯುರಿಟಿ ಸುಮಾರು ₹ 549.66 ಕೋಟಿ ನೀಡಲಾಗಿದೆ. 7,723 ಮರಣ ಹೊಂದಿದ ಪ್ರಕರಣಗಳಲ್ಲಿ ₹ 99.84 ಕೋಟಿ ಪರಿಹಾರ ನೀಡಲಾಗಿದೆ.

ಬೆಳಗಾವಿ ವಿಭಾಗವು 1993ರಲ್ಲಿ ಆರಂಭವಾಯಿತು. 14 ಶಾಖಾ ಕಚೇರಿಗಳಿದ್ದು, 13 ಸ್ಯಾಟಲೈಟ್‌ ಕಚೇರಿಗಳು, 10 ಮಿನಿ ಕಚೇರಿಗಳಿವೆ. 722 ಉದ್ಯೋಗಿಗಗಳು ಹಾಗೂ 8,293 ಏಜೆಂಟರಿದ್ದಾರೆ.

102 ವಿಮಾ ಗ್ರಾಮ ಹಾಗೂ 2 ವಿಮಾ ಶಾಲೆಗಳಿಗೆ ಕಳೆದ ವರ್ಷ ಆರ್ಥಿಕ ಸಹಾಯ ನೀಡಲಾಗಿದೆ. ಪಂತ ಬಾಳೇಕುಂದ್ರಿ ಶಾಲೆ ಹಾಗೂ ಖಾನಾಪುರ ಬೀಡಿ ಗ್ರಾಮದ ಶಾಲೆಗಳಿಗೆ ಸಹಾಯ ನೀಡಲಾಗಿದೆ.

ಎಲ್‌ಐಸಿ ಮಾರ್ಕೆಟಿಂಗ್‌ ಅಧಿಕಾರಿ ವೈ.ಎನ್‌. ಮುರಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT