ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್, ಬೌದ್ಧರಂತೆ ಲಿಂಗಾಯತರಿಗೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು: ಜಾಮದಾರ

Last Updated 18 ನವೆಂಬರ್ 2021, 10:49 IST
ಅಕ್ಷರ ಗಾತ್ರ

ಬೆಳಗಾವಿ: ‘ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ನಿಂತಿಲ್ಲ. ಕೋವಿಡ್ ಕಾರಣದಿಂದಾಗಿ ಬಹಳ ಸಕ್ರಿಯವಾಗಿ ಕೆಲಸ ಮಾಡಲಾಗಿರಲಿಲ್ಲ. ಇನ್ಮುಂದೆ ಚಟುವಟಿಕೆ ತೀವ್ರಗೊಳಿಸುತ್ತೇವೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮಹಾಸಭಾ ಯಾವುದೇ ಪಕ್ಷದ ಪರ ಅಥವಾ ವಿರುದ್ಧವಾಗಿ ಇಲ್ಲ. ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದ ಹೋರಾಟವನ್ನು ಒಂದು ಪಕ್ಷದ ಹೋರಾಟವೆಂದು ಬಿಂಬಿಸಿದ್ದು ಹಾಗೂ ಗೂಬೆ ಕೂರಿಸಿದ್ದು ತಪ್ಪು. ಅಂತಹ ಕೆಲವು ರಾಜಕಾರಣಿಗಳನ್ನು ಮಹಾಸಭಾದಿಂದ ದೂರ ಇಟ್ಟಿದ್ದೇವೆ’ ಎಂದು ಹೇಳಿದರು.

‘280 ಸದಸ್ಯರಿಂದ ಆರಂಭವಾದ ಮಹಾಸಭಾ ಈಗ 12ಸಾವಿರ ದಾಟಿದೆ. ಆನ್‌ಲೈನ್‌ನಲ್ಲೇ ಪ್ರಕ್ರಿಯೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಲಕ್ಷಕ್ಕೂ ಮೀರಿ ಸದಸ್ಯತ್ವ ಮಾಡಬೇಕು ಎನ್ನುವ ಉದ್ದೇಶವಿದೆ’ ಎಂದರು.

‘ಸ್ವತಂತ್ರ ಧರ್ಮದ ವಿಚಾರವಾಗಿ ಕರ್ನಾಟಕ ಸರ್ಕಾರವು ಕಳುಹಿಸಿರುವ ಪ್ರಸ್ತಾವವನ್ನು ಒಪ್ಪುವುದಕ್ಕೆ ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಅದಕ್ಕೆ 3 ಕಾರಣಗಳನ್ನು ಕೊಟ್ಟಿದೆ. ಲಿಂಗಾಯತ ಸಮುದಾಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿದ್ದಾರೆ. ಸ್ವತಂತ್ರ ಧರ್ಮದ ಮಾನ್ಯತೆ ಕೊಟ್ಟರೆ ಪರಿಶಿಷ್ಟರು ವಿಶೇಷ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆ. ಹಿಂದೆ ವೀರಶೈವ ಮಹಾಸಭಾದವರು ನಮ್ಮನ್ನು ಸಂಪರ್ಕಿಸಿದಾಗ, ಲಿಂಗಾಯತ ಹಿಂದೂ ಧರ್ಮದ ಭಾಗ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಲಾಗಿದೆ. ಇದನ್ನು ಹಿಂದೆಯೇ ತೀರ್ಮಾನಿಸಿದ್ದರಿಂದ ಮತ್ತೆ ನಿರ್ಧಾರದ ಅಗತ್ಯವಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ ಎಂಬ ಕಾರಣಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.

‘ಈ ವಿಷಯದಲ್ಲಿ ರಾಜ್ಯ ಸರ್ಕಾರ ಪ್ರತ್ಯುತ್ತರ ಬರೆಯಲಿಲ್ಲ. ಬಳಿಕ ಬಂದ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಕ್ರಮ ವಹಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತ‍ಪಡಿಸಿದರು.

‘ಸಿಖ್‌ ಮತ್ತು ಬೌದ್ಧ ಧರ್ಮದಲ್ಲೂ ಪರಿಶಿಷ್ಟರಿದ್ದಾರೆ. ಅವುಗಳನ್ನು ಸ್ವತಂತ್ರ ಧರ್ಮ ಎಂದು ಪರಿಗಣಿಸಿಲ್ಲವೇ? ನಮಗೆ ಆಗುವುದಿಲ್ಲ ಎನ್ನುವುದು ನ್ಯಾಯೋಚಿತವಲ್ಲ’ ಎಂದರು.

‘ಲಿಂಗಾಯತ ಹಿಂದೂ ಧರ್ಮದ ಭಾಗ ಎನ್ನುವುದು ವಿವಾದಿತ ವಿಷಯ. ಲಿಂಗಾಯತ ಮತ್ತು ವೀರಶೈವ ಎನ್ನುವುದು ಸಿದ್ಧಾಂತಗಳು. ವೀರಶೈವರು ಎನ್ನುವ ಪಂಚಾಚಾರ್ಯರು ನಾವು ಹಿಂದೂ ಧರ್ಮದ ಭಾಗ ಎನ್ನುತ್ತಾರೆ. ಅವರ ವಿನಂತಿ ಪರಿಗಣಿಸಿ ನಮಗೆ ತಿರಸ್ಕರಿಸಿದರೆ ಸರಿಯಲ್ಲ. ಏಕೆಂದರೆ ಅವರು ಬಸವ ತತ್ವಕ್ಕೆ ಬೆಲೆ ಕೊಡುವವರಲ್ಲ. ಲಿಂಗಾಯತರಲ್ಲಿ ವೀರಶೈವ ಎನ್ನುವುದು ಸಣ್ಣ ಪಂಗಡವಷ್ಟೆ. ಸಣ್ಣ ಪಂಗಡದ ಮಾತು ಕೇಳಿಕೊಂಡು ಸಂಪೂರ್ಣ ಸಮುದಾಯದ ಬೇಡಿಕೆ ತಿರಸ್ಕರಿಸುವುದು ಸರಿಯಲ್ಲ. ಇದನ್ನು ಪ್ರತ್ಯೇಕವಾಗಿಯೇ ಪರಿಗಣಿಸಬೇಕು’ ಎಂದು ಹೇಳಿದರು.

‘ವೀರಶೈವ ಲಿಂಗಾಯತ ಸೇರಿಸಿ ಧರ್ಮ ಮಾಡಲಾಗುವುದಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಕೆಲವರು ಏನೇನೋ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ವೀರಶೈವ–ಲಿಂಗಾಯತ ಎರಡನ್ನೂ ಸೇರಿಸಿ ಪ್ರತ್ಯೇಕ ಧರ್ಮ ಮಾಡುವುದು ಸರಿಯಲ್ಲ. ಲಿಂಗಾಯತದಲ್ಲಿ ವೀರಶೈವ ಇಲ್ಲ. ವೀರಶೈವರು ಲಿಂಗಾಯತದಲ್ಲಿ ಇದ್ದಾರೆ. ಒಂದು ಪಂಗಡದ ವಾದ ಒಪ್ಪಿ ಉಳಿದ 101 ಪಂಗಡಗಳಿಗೆ ಅನ್ಯಾಯ ಮಾಡಬಾರದು’ ಎಂದು ಕೋರಿದರು.

ಮುಖಂಡರಾದ ಶಂಕರ ಗುಡಸ್ ಹಾಗೂ ಬಸವರಾಜ ರೊಟ್ಟಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT