ಶನಿವಾರ, ನವೆಂಬರ್ 28, 2020
18 °C
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 'ಪ್ರವರ್ಗ 2ಎ' ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ಪ್ರವರ್ಗ 2ಎ ಹಾಗೂ ಕೇಂದ್ರದಿಂದ ಒಬಿಸಿ ಮೀಸಲಾತಿಯ ಹಕ್ಕೊತ್ತಾಯಕ್ಕಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯುತ್ತಿದೆ. ಸಮಾಜದ ನೂರಾರು ಮಂದಿ ಪಾಲ್ಗೊಂಡಿದ್ದಾರೆ.

'ನಾವು ನಮಗಾಗಿ ಹೋರಾಟ ನಡೆಸುತ್ತಿಲ್ಲ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಯ ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು' ಎಂದು ಸ್ವಾಮೀಜಿ ಒತ್ತಾಯಿಸಿದರು.

'ಪಂಚಮಸಾಲಿ ಸಮಾಜ ನ್ಯಾಯಯುತ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡಬೇಕು ಎಂದು ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವರಿಷ್ಠರು ಸೂಚಿಸಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಹೆಚ್ಚಿನ ಬಲ ಬಂದಂತಾಗಿದೆ' ಎಂದು ತಿಳಿಸಿದರು.

ಮೀಸಲಾತಿಗಾಗಿ 20 ವರ್ಷಗಳಿಂದ ‌ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸಹೋದರ ಸಮಾಜಗಳು ಸಂಘಟಿತರಾಗಿ ಸಾಮಾಜಿಕ ನ್ಯಾಯ ಪಡೆದಿವೆ. ನಾವೊಬ್ಬರೇ ಬೆಳೆಯಬೇಕು ಎಂದು ಬಯಸಿದವರಲ್ಲ. ಆದರೆ ಇತರ ಸಮಾಜದವರು ಸರ್ಕಾರದ ಮೇಲೆ ಒತ್ತಡ ಹಾಕಿ ಮೀಸಲಾತಿ ಪಡೆದಿದ್ದರಿಂದ ನಾವೂ ಹೋರಾಟಕ್ಕೆ ಇಳಿದಿದ್ದೇವೆ ಎಂದು ತಿಳಿಸಿದರು.

ಒಕ್ಕಲುತನವನ್ನಷ್ಟೇ ನಂಬಿ ಕುಳಿತರೆ ಮುಂದೆ ಬದಲಾಗುವುದಿಲ್ಲ. ಹೀಗಾಗಿ ಮೀಸಲಾತಿ ಅತ್ಯಗತ್ಯವಾಗಿದೆ. ನಮ್ಮ ಬೆವರಿನ ಪಾಲನ್ನು ಕೇಳುತ್ತಿದ್ದೇವೆ. ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿಯ ಅವಕಾಶ ಕಲ್ಲಿಸಿದ್ದಾರೆ. ಶಾಂತಿಯುತ ಮಾರ್ಗದಲ್ಲಿ ಹಕ್ಕು ಪಡೆದುಕೊಳ್ಳಬೇಕಾಗಿದೆ' ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕುಲಶಾಸ್ತ್ರೀಯ ಅಧ್ಯಯನಕ್ಕೆ ನಮ್ಮ ಸಮಾಜವನ್ನೂ ಪರಿಗಣಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.

ಮುಖಂಡ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ರೋಹಿಣಿ ಪಾಟೀಲ, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು