ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮುಗಿಬಿದ್ದು ಖರೀದಿಸಿದ ಮದ್ಯಪ್ರಿಯರು

Last Updated 4 ಮೇ 2020, 14:52 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಮೂರನೇ ಹಂತದ ಸಡಿಲಿಕೆಯಲ್ಲಿ ಸರ್ಕಾರವು ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಖುಷಿಯಾದ ಮದ್ಯಪ್ರಿಯರು, ಸೋಮವಾರ ತಮ್ಮಿಷ್ಟದ ಮದ್ಯ ಖರೀದಿಸಿ ನೆಮ್ಮದಿಯ ಉಸಿರು ಬಿಟ್ಟರು.

ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ, ಇತರ ಪ್ರದೇಶಗಳಲ್ಲಿ ಮದ್ಯ ಮಾರಾಟ ಆರಂಭವಾಯಿತು. ಬಹುತೇಕ ಅಂಗಡಿಗಳ ಎದುರು ಸಾಕಷ್ಟು ಗ್ರಾಹಕರು ಸೇರಿದ್ದರೂ ಎಲ್ಲಿಯೂ ನೂಕು ನುಗ್ಗಲು ಆಗಲಿಲ್ಲ. ಮುಖಕ್ಕೆ ಮಾಸ್ಕ್‌ ಹಾಕಿಕೊಂಡು, ಅಂತರ ಕಾಯ್ದುಕೊಂಡು ಮತ್ತು ಸರದಿ ಸಾಲಿನಲ್ಲಿ ನಿಂತು ಖರೀದಿಸಿದ್ದು ಗಮನ ಸೆಳೆಯಿತು.

ಬೆಳಿಗ್ಗೆ 9 ಗಂಟೆಗೆ ಅಂಗಡಿಗಳು ತೆರೆಯುವುದಕ್ಕಿಂತ ಮುಂಚೆಯೇ ಗ್ರಾಹಕರು, ಉದ್ದುದ್ದ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ 43 ದಿನಗಳಿಂದ ಮದ್ಯವಿಲ್ಲದೇ ಪರಿತಪಿಸಿದ್ದವರು ಕೊಂಚ ನಿರಾಳಗೊಂಡರು. ಸರ್ಕಾರ ನಿಗದಿಪಡಿಸಿದ್ದ ಗರಿಷ್ಠ ಪ್ರಮಾಣ (2.3 ಲೀಟರ್‌ ವಿಸ್ಕಿ, ರಮ್, ಜಿನ್‌ ಮದ್ಯ ಹಾಗೂ 18 ಲೀಟರ್‌ ಬಿಯರ್‌) ಖರೀದಿಸಿದರು.

ನಗರದ ಅನಗೋಳದಲ್ಲಿರುವ ಬಾರ್‌ವೊಂದರ ಮಾಲೀಕರು, ಮೊದಲ ಗ್ರಾಹಕರಿಗೆ ಹೂವಿನ ಹಾರ ಹಾಕಿ, ಸ್ವಾಗತಿಸಿಕೊಂಡಿದ್ದು ವಿಶೇಷವಾಗಿತ್ತು ಮಹಾಂತೇಶ ನಗರದಲ್ಲಿ ವಿಪರೀತ ಕುಡಿದ ವ್ಯಕ್ತಿಯೊಬ್ಬರು ರಸ್ತೆಯ ಪಕ್ಕ ಬಿದ್ದಿದ್ದರು. ಘಟಪ್ರಭಾದಲ್ಲಿ ಮದ್ಯದ ಅಂಗಡಿ ಎದುರು ಮದ್ಯಪ್ರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಹಿತಕರ ಘಟನೆಗಳನ್ನು ನಡೆಯದಂತೆ ತಡೆಯಲು ಪ್ರತಿಯೊಂದು ಬಾರ್‌ ಬಳಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ, ಎಲ್ಲಿಯೂ ಗಲಾಟೆ ನಡೆದ ಬಗ್ಗೆ ವರದಿಯಾಗಿಲ್ಲ. ನಿಗದಿತ ಅವಧಿ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟ ಬಿರುಸಿನಿಂದ ನಡೆಯಿತು.

‘ಸರ್ಕಾರದ ನಿರ್ದೇಶನದಂತೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ಇತರ ಪ್ರದೇಶಗಳಲ್ಲಿರುವ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ವಿಸ್ಕಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿರುವ ಅಂದಾಜು ಇದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಬಸವರಾಜ ಸಂದಿಗವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT