ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯವು ಮನಸ್ಸು ಬೆಸೆಯಬೇಕು

ಡಾ.ಬಾಳಾಸಾಹೇಬ ಲೋಕಾಪೂರ ಆಶಯ
Last Updated 31 ಜನವರಿ 2021, 14:25 IST
ಅಕ್ಷರ ಗಾತ್ರ

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ‘ಮನಸ್ಸು ಮತ್ತು ಹೃದಯ ಬೆಸೆಯುವ ಕಾರ್ಯವನ್ನು ಸಾಹಿತ್ಯ ಮಾಡಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕವಿಗೆ ಪರಂಪರೆಯ ಅರಿವು ಹಾಗೂ ವರ್ತಮಾನದ ವಿವೇಕ ಬೇಕು. ಅದಿಲ್ಲದಿದ್ದರೆ ಅವರು ರಚಿಸುವುದು ಕಾವ್ಯ ಎನಿಸಿಕೊಳ್ಳುವುದಿಲ್ಲ. ಪಂಪನಿಂದ ಹಿಡಿದು ಇಲ್ಲಿವರೆಗೆ ಕೆಲವು ಕವಿಗಳನ್ನಾದರೂ ಓದಿಕೊಂಡಿರಬೇಕು’ ಎಂದು ಸಲಹೆ ನೀಡಿದರು.

‘ಕಾವ್ಯ ತುಂಬಾ ಕಠಿಣವಾದುದು. ಆದರೂ ಪ್ರಸ್ತುತ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಶೇ 60ರಷ್ಟು ಕವನಸಂಕಲನಗಳೆ ಆಗಿರುತ್ತವೆ. ಅದನ್ನು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು. ‘ಕಾವ್ಯ ಗಂಭೀರವಾದುದು ಎನ್ನುವುದು ಗೊತ್ತಿರಬೇಕು’ ಎಂದರು.

ಕವಿಗೋಷ್ಠಿಯಲ್ಲಿ ಕವಿಗಳು ಪ್ರೀತಿ, ವಿಡಂಬನೆ, ವ್ಯಂಗ್ಯ, ಪ್ರೇಮ‌ ನಿವೇದನೆ ಬಗ್ಗೆ ಒಬ್ಬರೂ ಕಾವ್ಯ ವಾಚಿಸದ್ದನ್ನು ಪ್ರಸ್ತಾಪಿಸಿದ ಅವರು, ‘ಏಕೆ ಹೀಗೆ?’ ಎಂದು ಅಸಮಾಧಾನದಿಂದ ಕೇಳಿದರು.

‘ನಮಗೆ ಒಗ್ಗಿದ ಪ್ರಾಕಾರದಲ್ಲಿ ಬರೆಯಬೇಕು. ನಾನೂ ಎರಡು ಕವನಸಂಕಲನ ಬರೆದಿದ್ದೆ. ಆದರೆ, ಬಳಿಕ ಬರೆದ ಕಾದಂಬರಿಗಳೆ ಹೆಚ್ಚು ಜನಪ್ರಿಯವಾದವು’ ಎಂದರು.

‘ಇಂದಿನ ಕವಿಗಳು ಮಾತುಗಳೇ ಕಾವ್ಯ ಎಂದು ತಿಳಿದಿರುವುದು‌ ವಿಷಾದನೀಯ. ಕಾವ್ಯದೊಳಗೆ‌ ಒಂದು ಮೌನ ಮತ್ತು ಪಿಸುಮಾತು ಇರಬೇಕಾಗುತ್ತದೆ. ವೇದನೆಯನ್ನು ತಪ್ಪಿಸಿಕೊಂಡು ಸಂವೇದನೆ ಮಾಡುವ ಚಾಣಾಕ್ಷತನವನ್ನು ಕವಿಗಳು ರೂಢಿಸಿಕೊಳ್ಳಬೇಕು. ಇದಕ್ಕೆ ಅಕಲಂಕ ಪರವಶತೆ ಬೇಕಾಗುತ್ತದೆ. ಕಾವ್ಯ ಓದಿದ ಮೇಲೆ ಒಂದು ಭರವಸೆ ಸಿಗುವಂತಿರಬೇಕು’ ಎಂದು ಕಿವಿಮಾತು ಹೇಳಿದರು.

‘ಕಾವ್ಯ ರಚನೆ ಅಲ್ಲ; ಅದು ಹುಟ್ಟು. ಕವಿಗೋಷ್ಠಿ ಎಂದ ಮೇ ಒಂದೆರಡು‌ ಬೊಗಸೆ ಕಾಳಾದರೂ ಬೇಕಿತ್ತು’ ಎಂದು ವಿಮರ್ಶಿಸಿದರು.

‘ಕವನದಲ್ಲಿ ವಿವರ ಇರಲಿ; ವಿವರಣೆ ಇರಬಾರದು. ಕಾವ್ಯವನ್ನು ವಿವರಣೆಗಳಿಂದ ಮುಕ್ತ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಸದಲಗಾದ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ, ‘ಋಷಿಯಾಗದವ ಕವಿಯಾಗಲಾರ. ಕವನವೆಂದರೆ ಅದು ಹೃದಯದ ಭಾಷೆ’ ಎಂದು ತಿಳಿಸಿದರು.

501 ವರ್ಷಗಳ ದಿನದರ್ಶಿಕೆಯನ್ನು ಒಂದೇ ಹಾಳೆಯಲ್ಲಿ ಸಿದ್ಧಪಡಿಸಿದ ಮಂಗಸೂಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಲ್. ಕುಂಬಾರ ಅವರನ್ನು ಸತ್ಕರಿಸಲಾಯಿತು.

ಕಸಾಪ ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಹಲಸಗಿ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT