ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೇಕಾರರಿಗೆ ಮರೀಚಿಕೆಯಾದ ಲಾಕ್‌ಡೌನ್‌ ಪರಿಹಾರ

Last Updated 3 ಆಗಸ್ಟ್ 2020, 20:27 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದ ವಿದ್ಯುತ್‌ ಕೈ ಮಗ್ಗಗಳ ನೇಕಾರರಿಗೆ ಸರ್ಕಾರ ಘೋಷಿಸಿದ್ದ ₹ 2,000 ಪರಿಹಾರ ಜಿಲ್ಲೆಯ ಬಹುತೇಕರಿಗೆ ಇನ್ನೂ ತಲುಪಿಲ್ಲ.ಪರಿಹಾರ ಘೋಷಿಸಿ ಮೂರು ತಿಂಗಳಾದರೂ ಎಲ್ಲರಿಗೂ ಪರಿಹಾರ ದೊರೆತಿಲ್ಲ. ಅವರ ಸಂಕಷ್ಟದ ದಿನಗಳು ಇನ್ನೂ ದೂರವಾಗಿಲ್ಲ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಾರ್ಚ್‌ 22ರಿಂದ ಸುಮಾರು ನಾಲ್ಕು ತಿಂಗಳವರೆಗೆ ಲಾಕ್‌ಡೌನ್‌ ಘೋಷಿಸಿತ್ತು. ಸಂಪೂರ್ಣವಾಗಿ ಮಾರುಕಟ್ಟೆ ಬಂದ್‌ ಆಗಿತ್ತು. ಹೀಗಾಗಿ ನೇಕಾರರು ನೇಯ್ದ ಬಟ್ಟೆಗಳ ವ್ಯಾಪಾರವಾಗಲಿಲ್ಲ. ನೇಕಾರರ ಬದುಕು ಅತಂತ್ರವಾಗಿತ್ತು. ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಸರ್ಕಾರವು ₹ 2,000 ಪರಿಹಾರ ಘೋಷಿಸಿತ್ತು.

ಜಿಲ್ಲೆಯ ಬೆಳಗಾವಿ, ರಾಮದುರ್ಗ, ಕಟಕೋಳ, ಸುರೇಬಾನ, ಯಮಕನಮರಡಿ, ಹುಕ್ಕೇರಿ, ಸವದತ್ತಿ ಸೇರಿದಂತೆ ವಿವಿಧೆಡೆ 25,822 ವಿದ್ಯುತ್‌ ಮಗ್ಗಗಳಿವೆ. ಒಂದೊಂದು ಮಗ್ಗಗಳಲ್ಲಿ ಕನಿಷ್ಠ ಇಬ್ಬರಿಂದ ಮೂವರು ಕೆಲಸ ಮಾಡುತ್ತಿದ್ದಾರೆ. ಇವರ ಪೈಕಿ ಕೇವಲ 14,765 ಜನರು ಮಾತ್ರ ಪರಿಹಾರ ಕೋರಿ ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ ಕೇವಲ 9,775 ಜನರಿಗೆ ಪರಿಹಾರ ದೊರೆತಿದೆ. ಪ್ರತಿಯೊಬ್ಬರಿಗೆ ₹ 2,000 ರಂತೆ ಒಟ್ಟು ₹ 1.95 ಕೋಟಿ ಪರಿಹಾರ ಬಂದಿದೆ. ಬಾಕಿ ಉಳಿದಿರುವ ಶೇ 40ರಷ್ಟು ನೇಕಾರರಿಗೆ ಇನ್ನೂ ದೊರೆತಿಲ್ಲ.

ಬಹಳ ಜನರು ಅರ್ಜಿಯೇ ಸಲ್ಲಿಸಿಲ್ಲ

ಒಂದೊಂದು ಮಗ್ಗದ ಮೇಲೆ ಇಬ್ಬರಿಂದ ಮೂವರು ಜನರು ಕೆಲಸ ಮಾಡುತ್ತಾರೆ. ಈ ಲೆಕ್ಕ ತೆಗೆದುಕೊಂಡರೆ ಅಂದಾಜು 75 ಸಾವಿರ ಜನರು ದುಡ್ಡಿಯುತ್ತಿದ್ದಾರೆ. ಆದರೆ, ಸರ್ಕಾರ ವಿಧಿಸಿದ ಕಠಿಣ ನಿಯಮಾವಳಿಯಿಂದಾಗಿ ಬಹುತೇಕರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

ತಾವು ಕೆಲಸ ಮಾಡುತ್ತಿರುವ ಮಗ್ಗಗಳ ಮಾಲೀಕರಿಂದ ಅಫಿಡವಿಟ್‌ ಸಲ್ಲಿಸಬೇಕೆಂದು ನೇಕಾರರಿಗೆ ಸರ್ಕಾರ ನಿಯಮ ವಿಧಿಸಿತ್ತು. ಬಹಳಷ್ಟು ಜನ ಮಾಲೀಕರು ನೌಕರರಿಗೆ ಅಫಿಡವಿಟ್‌ ನೀಡಲು ಹಿಂದೇಟು ಹಾಕಿದರು. ತಮ್ಮ ಮಗ್ಗಗಳಲ್ಲಿ ಜನರು ಕೆಲಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದರೆ ಕಾರ್ಮಿಕ ಕಾನೂನುಗಳ ಕಿರಿಕಿರಿಯಾಗಬಹುದು ಎನ್ನುವ ಭಯದಿಂದ ಅಫಿಡವಿಟ್‌ ನೀಡಲಿಲ್ಲ ಎಂದು ಕಾರ್ಮಿಕ ಮುಖಂಡರು ತಿಳಿಸಿದರು.

ನೇಯ್ಗೆ ಮಾಡುವವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಲು ಬಿಡಿಕಾರ್ಮಿಕರಿದ್ದಾರೆ. ಬಿಂಬ ಕೆತ್ತುವವರು, ಬಿಂಬ ಜಗ್ಗುವವರು, ಬಾಬಿನ್‌ ಜಗ್ಗುವವರು, ಜಕಾರ ಕಟ್ಟುವವರು, ಕಾರ್ಡ್‌ ಪಂಚಿಂಗ್‌ ಮಾಡುವವರು, ಬಣ್ಣ ಹಾಕುವವರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕರು ಕೂಡ ಕೆಲಸ ಮಾಡುತ್ತಾರೆ. ಮಗ್ಗಗಳು ಬಂದ್‌ ಆಗಿದ್ದಾಗ ನೇಕಾರರ ಜೊತೆ ಇವರೂ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಇವರಿಗೂ ಪರಿಹಾರ ನೀಡಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT