ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: 2ನೇ ಸ್ಥಾನಕ್ಕೇರಿದ ಚಿಕ್ಕೋಡಿ ಮತದಾರರು

ಚಂದ್ರಶೇಖರ ಎಸ್ ಚಿನಕೇಕರ
Published 9 ಮೇ 2024, 6:53 IST
Last Updated 9 ಮೇ 2024, 6:53 IST
ಅಕ್ಷರ ಗಾತ್ರ

ಚಿಕ್ಕೋಡಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಚಿಕ್ಕೋಡಿ ಎರಡನೇ ಸ್ಥಾನ ಪಡೆದುಕೊಂಡಿದೆ. ಶೇ 81.48ರಷ್ಟು ಮತದಾನದ ಮೂಲಕ ಮಂಡ್ಯ ಮೊದಲ ಸ್ಥಾನದಲ್ಲಿದ್ದರೆ; ಶೇ 78.66 ಮತದಾನ ಸಾಧಿಸಿದ ಚಿಕ್ಕೋಡಿ ಎರಡನೇ ಸ್ಥಾನಕ್ಕೇರಿದೆ.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಈ ಕ್ಷೇತ್ರದಲ್ಲಿ 8,85,200 ಪುರುಷ ಮತದಾರರು, 8,76,414 ಮಹಿಳಾ ಮತದಾರರು, 80 ಇತರೆ ಮತದಾರರು ಇದ್ದಾರೆ. ಈ ಪೈಕಿ 7,05,041 ಪುರುಷರು, 6,80,617 ಮಹಿಳೆಯರು, ಇತರೆ 30 ಸೇರಿದಂತೆ ಒಟ್ಟು 13,85,688 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಮಂಡ್ಯದಲ್ಲಿ ಏ.26ರಂದು ಮೊದಲ ಹಂತದ ಮತದಾನ ನಡೆದಿತ್ತು. ಮೇ 7ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಉತ್ತರ ಕರ್ನಾಟಕದ ಎಲ್ಲ 14 ಕ್ಷೇತ್ರಗಳಲ್ಲಿ ಚಿಕ್ಕೋಡಿಯೇ ಮೊದಲ ಸ್ಥಾನದಲ್ಲಿದೆ.

ಮೇ 7ರಂದು ಬೆಳಿಗ್ಗೆ 7ಕ್ಕೆ ಪ್ರಾರಂಭವಾದ ಮತದಾನ ಬೆಳಿಗ್ಗೆ 9ರ ಸುಮಾರು ಶೇ 10.79ರಷ್ಟು, ಬೆಳಿಗ್ಗೆ 11 ಗಂಟೆಗೆ ಶೇ 27.22 ರಷ್ಟಾಗಿತ್ತು. ಬೆಳಿಗ್ಗೆಯಿಂದ ಏರುಗತಿಯಲ್ಲಿ ಸಾಗಿತ್ತು. ಹೊತ್ತೇರಿದಂತೆ ಬಿರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಬೆಳಿಗ್ಗೆಯೇ ಅತೀ ಹೆಚ್ಚು ಮತದಾನವಾಗಿದ್ದು ಕಂಡುಬಂತು.

ಮಧ್ಯಾಹ್ನ 1 ಗಂಟೆಯ ಸುಮಾರು 8,04,753 ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ 45.68ರಷ್ಟು ಮತದಾನವಾಗಿತ್ತು. 41 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದ್ದರಿಂದ ಮಧ್ಯಾಹ್ನದ ಸುಮಾರು ಮತದಾನ ಮಂದಗತಿಯಲ್ಲಿ ಸಾಗಿದ್ದು ಕಂಡುಬಂತು. ಆದರೂ ರಾಜ್ಯ ಇತರ ಎಲ್ಲೆ ಭಾಗಗಳಲ್ಲೂ ಈ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚು ಮತದಾನ ಇದಾಗಿದೆ.

ಮಧ್ಯಾಹ್ನ 3 ಗಂಟೆಯ ಸುಮಾರು ಶೇ 59.64 ರಷ್ಟು, ಸಂಜೆ 5 ಗಂಟೆಯ ಸುಮಾರು ಶೇ 72.75 ರಷ್ಟು ಮತದಾನವಾಗಿದ್ದು, ಸಂಜೆ 6 ಗಂಟೆಯವರೆಗೆ ಮತಗಟ್ಟೆಯಲ್ಲಿ ಹಾಜರಿದ್ದ ಮತದಾರರು ಮತ ಚಲಾಯಿಸಿ ಶೇ 78.66ಕ್ಕೆ ಏರಿತು.

2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೇ 75.60ರಷ್ಟಿದ್ದ ಮತದಾನ ಈ ಬಾರಿ ಶೇ 3ರಷ್ಟು ಹೆಚ್ಚಳವಾಗಿದೆ.

ಸಮರ್ಪಕ ಸೌಕರ್ಯ: ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗ ಮತಗಟ್ಟೆಗಳಲ್ಲಿ ಮಾಡಿದ ನೆರಳು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯೂ ಕಾರಣ. ಅಷ್ಟೇ ಅಲ್ಲದೇ ಕಳೆದೊಂದು ತಿಂಗಳಿನಿಂದ ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡ ಹಲವು ವಿಭಿನ್ನವಾದ ಮತದಾನ ಜಾಗೃತಿ ಕಾರ್ಯಕ್ರಮಗಳು ಕೂಡ ಕಾರಣವಾದವು.

ಪ್ರತಿ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುತ್ತಿತ್ತು. ಈ ಭಾರಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಅವರು ಪಕ್ಷೇತರರಾಗಿ ಪ್ರಬಲ ಪೈಪೋಟಿ ಒಡ್ಡಿದ್ದು ಕೂಡ ಮತದಾನ ಹೆಚ್ಚಳಕ್ಕೆ ಕಾರಣ ಎಂಬ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ.

ಹೆಚ್ಚಿನ ಜಾಗೃತಿ ಮತಗಟ್ಟೆಗಳಲ್ಲಿ ನೆರಳು ಕುಡಿಯುವ ನೀರು ಶೌಚಾಲಯ ಮುಂತಾದ ವ್ಯವಸ್ಥೆ ಮಾಡಿದ್ದು ಮತದಾನ ಹೆಚ್ಚಳಕ್ಕೆ ಕಾರಣವಾಗಿದೆ
ರಾಹುಲ ಶಿಂಧೆ ಚುನಾವಣಾಧಿಕಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಈ ಬಾರಿ ಮತಗಟ್ಟೆಗಳಲ್ಲಿ ಸಕಲ ವ್ಯವಸ್ಥೆ ಮಾಡಿದ್ದು ಪ್ರತಿಯೊಂದು ಮತಗಟ್ಟೆಗಳನ್ನು ಆಕರ್ಷಕವಾಗಿ ಸ್ಥಾಪಿಸಿದ್ದು ಮತದಾನ ಮಾಡಲು ಖುಷಿ ಎನಿಸಿತು
ಉಜ್ವಲಾ ಅಮಿತ ಮಾಳಿ ಮತದಾರರು ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT