ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಗೀತಾ ಗೆಲ್ಲಿಸಲು ಯೋಜನೆ: ನಟ ಶಿವರಾಜ್‌ಕುಮಾರ್

Published 13 ಮಾರ್ಚ್ 2024, 0:04 IST
Last Updated 13 ಮಾರ್ಚ್ 2024, 0:04 IST
ಅಕ್ಷರ ಗಾತ್ರ

ಬೆಳಗಾವಿ/ಹುಬ್ಬಳ್ಳಿ: ‘ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನನ್ನ ಪತ್ನಿ ಗೀತಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಬೆಂಬಲವಾಗಿ ನಿಲ್ಲುವುದು ನನ್ನ ಕರ್ತವ್ಯ. ಸಮಯ ಸಿಕ್ಕರೆ ಕಾಂಗ್ರೆಸ್‌ನ ಇತರೆ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗುವೆ’ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದರು.

‘ಕರಟಕ ದಮನಕ’ ಚಿತ್ರದ ಪ್ರಚಾರಕ್ಕೆ ಸೋಮವಾರ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಸಲ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವೆ. ಬಿಸಿಲು ಹೆಚ್ಚಿರುವ ಕಾರಣ ನಟರನ್ನು ಕರೆತರಲ್ಲ. ನಾನು ಕರೆದರೆ ಅವರೆಲ್ಲ ಬರುತ್ತಾರೆ. ಆದರೆ, ಯಾರಿಗೂ ತೊಂದರೆ ಕೊಡಲು ನನಗೆ ಇಷ್ಟವಿಲ್ಲ’ ಎಂದರು.

‘ಗೀತಾ ಅವರ ತವರು ಶಿವಮೊಗ್ಗ. ಅಲ್ಲೇ ಹುಟ್ಟಿ, ಶಿಕ್ಷಣ ಪಡೆದಿದ್ದಾರೆ. ಈ ಕಾರಣ, ಶಿವಮೊಗ್ಗದಿಂದ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಅಲ್ಲಿ ಮನೆ ಮಾಡಲಾಗಿದೆ. ಗೀತಾ ಗೆಲ್ಲುವ ವಿಶ್ವಾಸವಿದೆ’ ಎಂದರು.

‘ಜನಪ್ರತಿನಿಧಿಯಾದರೆ ಜನಸೇವೆ ಮಾಡಲು ಹೆಚ್ಚು ಶಕ್ತಿ ಸಿಗುತ್ತದೆ. ಹಾಗಾಗಿ, ರಾಜಕಾರಣ ಅಗತ್ಯವಿದೆ. ಕಳೆದ ಬಾರಿ ಗೀತಾ ಪರಾಭವಗೊಂಡಿದ್ದರೂ, ಈ ಬಾರಿ ಗೆಲ್ಲಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕದ ಮಹತ್ವದ ನೀರಿನ ಯೋಜನೆ ಕಳಸಾ– ಬಂಡೂರಿ ಹೋರಾಟಕ್ಕೆ ನಟರೂ ಬರಬೇಕಿದೆ. ಈ ಸಲ ಹೋರಾಟ ಆರಂಭವಾದರೆ, ನಾನೇ ಖುದ್ದು ಎಲ್ಲ ನಟರನ್ನೂ ಕರೆದುಕೊಂಡು ಬರುತ್ತೇನೆ’ ಎಂದರು.

ಎಸ್.ಬಂಗಾರಪ್ಪ ಕುಟುಂಬದವರನ್ನು ಒಂದಾಗಿಸಲು ನಾನು ಯಾರು? ನಾನು ಅವರ ಮನೆಯ ಅಳಿಯ ಅಷ್ಟೇ. ಅವರೇ ಒಂದಾಗಬೇಕು. ನಾನೇನೂ ಮಾಡಲು ಆಗಲ್ಲ.
–ಶಿವರಾಜ್‌ಕುಮಾರ್ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT