ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರ | ಕುರುಬ, ಲಿಂಗಾಯತ... ‘ಕೈ’ ಸಮೀಕರಣ

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ, ಆಯ್ಕೆ ಕಗ್ಗಂಟು
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಲಿಂಗಾಯತರಿಗೆ, ಇನ್ನೊಂದರಲ್ಲಿ ಕುರುಬರಿಗೆ ಟಿಕೆಟ್‌ ನೀಡಲು ಯತ್ನಗಳು ನಡೆದಿವೆ. ಎರಡು ದೊಡ್ಡ ಸಮಾಜಗಳ ಮತಗಳಿಗೆ ಗಾಳ ಹಾಕಿ, ಗೆಲುವು ಸಾಧಿಸಬೇಕು ಎಂಬುದು ಈ ಸಮೀಕರಣದ ಹಿಂದಿನ ಕಾಂಗ್ರೆಸ್‌ ತಂತ್ರವಾಗಿದೆ.

ಎರಡೂ ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಒತ್ತಾಸೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಹೆಚ್ಚಿದ್ದರಿಂದ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಮತ್ತು ಸತೀಶ ಜಾರಕಿಹೊಳಿ ಅವರಿಗೆ ದೊಡ್ಡ ಸವಾಲು ಎದುರಾಗಿದೆ. ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ದಂಡೇ ಸಿದ್ಧವಾಗಿದ್ದು, ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ನಿಗೂಢವಾಗಿದೆ.

ಬೆಳಗಾವಿ ಕ್ಷೇತ್ರದಿಂದ ಮಾಜಿ ಸಂಸದ ಅಮರಸಿಂಹ ಪಾಟೀಲ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡ ಕಿರಣ ಸಾಧುನವರ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಪ್ರಬಲ ಆಕಾಂಕ್ಷಿಗಳು. ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ, ಕುರುಬ ಸಮಾಜದ ಲಕ್ಷ್ಮಣರಾವ್‌ ಚಿಂಗಳೆ, ಮುಖಂಡರಾದ ಎಸ್‌.ಕೆ.ಬುಟಾಳೆ, ಗಜಾನನ ಮಂಗಸೂಳಿ, ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಪ್ರಬಲ ಆಕಾಂಕ್ಷಿಗಳು.

ಕುರುಬರ ಬೇಡಿಕೆ:

ಜಿಲ್ಲೆಯಲ್ಲಿ ಲಿಂಗಾಯತರ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಇದ್ದಾರೆ. ಒಂದು ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್‌ ನೀಡಿ, ಎರಡೂ ಕ್ಷೇತ್ರಗಳಲ್ಲಿ ಸಮುದಾಯಗಳ ಪರಸ್ಪರ ಸಹಕಾರ ತತ್ವದಡಿ ಗೆಲ್ಲಬೇಕು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ವಿಧಾನಸಭಾ ಚುನಾವಣೆಯ ಬಳಿಕವೇ ಈ ತಂತ್ರವನ್ನು ಕಾಂಗ್ರೆಸ್‌ ಆರಂಭಿಸಿದೆ. ಬೆಳಗಾವಿಯಲ್ಲಿ ಅಕ್ಟೋಬರ್‌ 3 ಮತ್ತು 4ರಂದು ಷಫರ್ಡ್ಸ್‌ ಇಂಟರ್‌ನ್ಯಾಷನಲ್‌ ವತಿಯಿಂದ ಅಂತರರಾಷ್ಟ್ರೀಯ ಕುರುಬರ ಸಮಾವೇಶ ಹಾಗೂ ಕಾರ್ಯಕಾರಿಣಿ ಸಭೆ ನಡೆಸಿದ್ದು ಕೂಡ ಇದರ ಪೂರ್ವಸಿದ್ಧತೆಯೇ.

‘ಜಿಲ್ಲೆಯ ಒಂದು ಕ್ಷೇತ್ರಕ್ಕೆ ಕುರುಬರಿಗೆ ಟಿಕೆಟ್‌ ನೀಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಸಚಿವ ಸತೀಶ ಜಾರಕಿಹೊಳಿ ಇದೇ ಸಮಾವೇಶದಲ್ಲಿ ಘೋಷಿಸಿದ್ದರು.

ಕುರುಬ ಸಮಾಜದ ಲೆಕ್ಕಾಚಾರದಲ್ಲಿ ಅಮರಸಿಂಹ ಪಾಟೀಲ ಪ್ರಬಲರು. 1999ರಲ್ಲಿ ಅವರು ಕಾಂಗ್ರೆಸ್‌ನಿಂದ ಸಂಸದರಾಗಿದ್ದರು. ಅದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಲೆಕ್ಕಾಚಾರದಲ್ಲಿ ‘ಬಲಾಢ್ಯ’ರು.

ಇದಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಮರಸಿಂಹ ಪಾಟೀಲ ಆಪ್ತರು. ಅಮರಸಿಂಹ ಅವರ ತಂದೆ ವಿ.ಎಲ್‌.ಪಾಟೀಲ ಹಾಗೂ ಖರ್ಗೆ ಜೊತೆಯಾಗಿ ರಾಜಕಾರಣ ಮಾಡಿದವರು.

ಕಾಂಗ್ರೆಸ್‌ನ ಇನ್ನೊಂದು ಬಣ ಚಿಕ್ಕೋಡಿಯಲ್ಲಿ ಲಕ್ಷ್ಮಣರಾವ್ ಚಿಂಗಳೆ ಅವರಿಗೆ ಟಿಕೆಟ್‌ ಕೊಟ್ಟು, ಬೆಳಗಾವಿಯಲ್ಲಿ ಲಿಂಗಾಯತರಿಗೇ ಕೊಡಬೇಕು ಎಂಬ ವಾದ ಮಂಡಿಸಿದೆ. ಅಮರಸಿಂಹ ಅವರಿಗೆ ಟಿಕೆಟ್‌ ತಪ್ಪಿಸುವ ಯತ್ನವೂ ಒಂದು ಸಮುದಾಯದ ನಾಯಕರಿಂದ ಜೋರಾಗಿ ನಡೆದಿದೆ.

‘ವಿಧಾನಸಭೆಯಲ್ಲಿ 11 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನಲ್ಲಿ ಒಬ್ಬರೂ ಕುರುಬರು ಇಲ್ಲ. ಅದಕ್ಕೆ ಲೋಕಸಭೆಗೆ ಟಿಕೆಟ್‌ ಅನಿವಾರ್ಯ’ ಎಂಬ ಕೂಗು ಗಟ್ಟಿಯಾಗಿದೆ. ಸಿದ್ದರಾಮಯ್ಯ, ಎಚ್‌.ವಿಶ್ವನಾಥ, ಎಚ್.ಎಂ.ರೇವಣ್ಣ ಅವರಂಥ ನಾಯಕರು ಕೂಡ ಈ ಬೇಡಿಕೆ ಪರ ಇದ್ದಾರೆ ಎಂಬುದು ಮೂಲಗಳ ಮಾಹಿತಿ.

****

ಬೆಳಗಾವಿ ಅಥವಾ ಚಿಕ್ಕೋಡಿ ಟಿಕೆಟ್‌ ನೀಡುವಾಗ ಕುರುಬರನ್ನೂ ಪರಿಗಣಿಸುತ್ತೇವೆ ಎಂದು ಹೇಳಿದ್ದೇನೆ. ಕಡ್ಡಾಯವಾಗಿ ಕೊಡುತ್ತೇವೆ ಎಂದು ನಾನು ಹೇಳಿಲ್ಲ. ಸಮರ್ಥರಿದ್ದರೆ ಕೊಡುತ್ತೇವೆ

-ಸತೀಶ ಜಾರಕಿಹೊಳಿ ಕಾರ್ಯಾಧ್ಯಕ್ಷ ಕೆಪಿಸಿಸಿ

ಸಚಿವರ ಮಕ್ಕಳಿಗೆ ಸಿಗುವುದೇ ಅವಕಾಶ?

‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ಗೆ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರಿಗೆ ಟಿಕೆಟ್‌ ಕೊಡಬೇಕು’ ಎಂಬ ಒತ್ತಾಯ ಆರು ತಿಂಗಳಿಂದ ಇದೆ. ಆದರೆ ಇಬ್ಬರನ್ನೂ ಕರೆಸಿದ ಹೈಕಮಾಂಡ್‌ ಹೊಸ ಸೂತ್ರ ನೀಡಿದೆ. ‘ಇಬ್ಬರಲ್ಲಿ ಒಬ್ಬರು ಸಚಿವ ಸ್ಥಾನ ಬಿಟ್ಟು ಲೋಕಸಭೆಗೆ ನಿಲ್ಲಬೇಕು. ಅವರಿಂದ ತೆರವಾದ ವಿಧಾನಸಭೆಗೆ ಅವರ ಮಕ್ಕಳಿಗೆ ಟಿಕೆಟ್‌ ಕೊಡಲಾಗುವುದು’ ಎಂದು ಹೈಕಮಾಂಡ್‌ ಹೇಳಿದೆ. ಆದರೆ ಇದನ್ನು ಇಬ್ಬರೂ ಸಚಿವರು ನಿರಾಕರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಸದ್ಯ ಮೃಣಾಲ್‌ ಮಾತ್ರ ಟಿಕೆಟ್‌ ಕೇಳಿದ್ದಾರೆ. ಪ್ರಿಯಾಂಕಾ ಅರ್ಜಿ ಸಲ್ಲಿಸಿಲ್ಲ. ಪ್ರಿಯಾಂಕಾ ಅವರಿಗೆ ಟಿಕೆಟ್‌ ನೀಡುವುದಾದರೆ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಮಾತ್ರ ನೀಡಬೇಕು ಎಂಬ ತಕರಾರು ಇನ್ನೊಂದು ಗುಂಪಿನದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT