ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದುಬಂದ ಮನವಿ, ಅಹವಾಲುಗಳ ಮಹಾಪೂರ

ಸುವರ್ಣ ವಿಧಾನಸೌಧದಲ್ಲಿ ಇದೇ ಮೊದಲಿಗೆ ಜನತಾದರ್ಶನ
Last Updated 15 ಸೆಪ್ಟೆಂಬರ್ 2018, 17:17 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುವರ್ಣ ವಿಧಾನಸೌಧದಲ್ಲಿ ಇದೇ ಮೊದಲಿಗೆ ಶನಿವಾರ ನಡೆಸಿದ ಜನತಾದರ್ಶನಕ್ಕೆ ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳ ಜನರು ಸಾಗರೋಪಾದಿಯಲ್ಲಿ ಬಂದು ತಮ್ಮ ಅಹವಾಲನ್ನು ತೋಡಿಕೊಂಡರು.

ಬೆಳಿಗ್ಗೆಯಿಂದಲೇ ಬಂದಿದ್ದ ಜನರು ವಿವಿಧ ಸಮಸ್ಯೆಗಳ ಮೂಟೆಗಳನ್ನೇ ಹೊತ್ತು ತಂದಿದ್ದರು. ಪರಿಹಾರ ಪಡೆಯಲು ಜಮಾಯಿಸಿದ್ದರು.

ನೆಲ ಮಹಡಿಯಲ್ಲಿ ಅಂಗವಿಕಲರ ಅಹವಾಲು ಆಲಿಸಿ ನಂತರ, ಮೊದಲ ಮಹಡಿಯಲ್ಲಿ ಸಾರ್ವಜನಿಕರನ್ನು ಸಿಎಂ ಭೇಟಿಯಾದರು.

ಇ-ಜನಸ್ಪಂದನದಲ್ಲಿ ಸಾರ್ವಜನಿಕರ ನೋಂದಣಿ ಮಾಡಲಾಗಿತ್ತು. ಅದರಂತೆ 3ಸಾವಿರಕ್ಕೂ ಹೆಚ್ಚು ಮಂದಿ ಅಹವಾಲುಗಳನ್ನು ತಿಳಿಸಿದರು. ಕೆಲವರಿಗೆ ಆರ್ಥಿಕ ನೆರವು, ವೈದ್ಯಕೀಯ ಸೌಲಭ್ಯ ಹಾಗೂ ಉದ್ಯೋಗದ ಭರವಸೆ ಸಿಕ್ಕಿತು.

* ರಾಯಬಾಗ ತಾಲ್ಲೂಕು ನಿಲಜಿಯ ಮಹಾದೇವಿ ಶ್ರೀಶೈಲ ಜಂಗಮ ದಂಪತಿಯ 10 ತಿಂಗಳ ಮಗುವಿಗೆ ಕೀಲು ಸಂಬಂಧಿ ರೋಗವಿದ್ದು ಮಗುವಿನ ಕಾಲುಗಳು ಹಾಗೂ ಕೈಗಳು ಸ್ವಾಧೀನದಲ್ಲಿಲ್ಲ. ‘ಆಪರೇಷನ್‌ಗೆ ತುಂಬಾ ವೆಚ್ಚವಾಗಲಿದ್ದು ನಮ್ಮ ಬಳಿ ಹಣವಿಲ್ಲ’ ಎಂದು ಹೇಳಿದರು. ಸ್ಪಂದಿಸಿದ ಸಿಎಂ, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹಾಗೂ ಸಂಬಂಧಿಸಿದ ಖರ್ಚುಗಳಿಗೆ ನೆರವು ಒದಗಿಸುವ ಭರವಸೆ ಕೊಟ್ಟರು. ಮುಂದಿನ ವಾರ ಬೆಂಗಳೂರಿಗೆ ಬರುವಂತೆಯೂ ತಿಳಿಸಿದರು.

* ಗೋಕಾಕ ತಾಲ್ಲೂಕು ಪಟಗುಂದಿಯ ಅಂಗವಿಕಲೆ ರೂಪಾ (28), ‘ನಾನು ಎಂಎಸ್‌ಡಬ್ಲ್ಯು ಓದಿದ್ದು ಕಂಪ್ಯೂಟರ್ ಕೂಡ ಕಲಿತಿದ್ದೇನೆ. ಉದ್ಯೋಗ ಕೊಡಿಸಿ’ ಎಂದು ಕೋರಿದರು. ಶೀಘ್ರವೇ ಅಧಿಕಾರಿಗಳು ನಿಮಗೆ ಕರೆ ಮಾಡಿ, ಎಲ್ಲಿ ಉದ್ಯೋಗ ಕಲ್ಪಿಸಲಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ ಎಂದು ಸಿಎಂ ಧೈರ್ಯ ತುಂಬಿದರು.

* ದಾವಣಗೆರೆ ತಾಲ್ಲೂಕು ಈಜಕಟ್ಟ ಗ್ರಾಮದ ರಾಮಾನಾಯ್ಕ್ ಅಳಲು ತೋಡಿಕೊಂಡರು. ‘ನಾನು ಪಾರ್ಶ್ವವಾಯು ಪೀಡಿತ. ಪತ್ನಿ ಪಾರಿಬಾಯಿ ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ನಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ಮದುವೆಯಾಗಿ ಅವರವರ ಮನೆಯಲ್ಲಿದ್ದಾರೆ. ಬಡವರಾದ ನಮಗೆ ಆದಾಯದ ಮೂಲಗಳಿಲ್ಲ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿದೆ’ ಎಂದು ತಿಳಿಸಿದರು. ಅವರಿಗೆ ವೆಚ್ಚ ಹಾಗೂ ಜೀವನ ನಿರ್ವಹಣೆಗೆ ಆರ್ಥಿಕ ನೆರವು ದೊರಕಿಸುವ ಭರವಸೆ ನೀಡಿದರು.

* 10 ತಿಂಗಳ ಹಿಂದೆ ಮುದೋಳ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಕಾಲಿನ ಮೂಳೆ ಮುರಿದಿದೆ ಎಂದು ಗೋಕಾಕ ತಾಲ್ಲೂಕು ನಾಗನೂರಿನ ವಿಠಲ ಸಿದ್ದಪ್ಪ ಬಾಗೇವಾಡಿ ತಿಳಿಸಿದರು. ಪ್ರಕರಣ ದಾಖಲಾಗಿದೆ. ಆದರೆ, ಡಿಕ್ಕಿ ಹೊಡೆದ ಲಾರಿ ಸಿಕ್ಕಿಲ್ಲ. ಪತ್ನಿ ಕೂಡ ನಿಧನರಾಗಿದ್ದಾರೆ. ಇಬ್ಬರು ಮಕ್ಕಳಿದ್ದು ಅವರು ಅಜ್ಜಿಯ ಆಶ್ರಯದಲ್ಲಿದ್ದಾರೆ. ನನಗೆ ನೆರವಾಗಬೇಕು ಎಂದು ಕೋರಿದರು. ಅವರಿಗೆ ₹ 3.50 ಲಕ್ಷ ನೆರವು ನೀಡುವುದಾಗಿ ತಿಳಿಸಿದ ಸಿಎಂ, ಹಣವನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ತಿಳಿಸಿದರು.

* ಹುಕ್ಕೇರಿ ತಾಲ್ಲೂಕು ಯಲ್ಲಾಪುರ ಕರಗುಪ್ಪಿಯ ಶ್ರೀಕಾಂತ ಕಾಡಗೋಡ, ತಾವು ನರರೋಗದಿಂದ ಬಳಲುತ್ತಿರುವುದಾಗಿ ತಿಳಿಸಿದರು. 20 ವರ್ಷಗಳಿಂದ ಈ ಸಮಸ್ಯೆ ಇದೆ. ಈವರೆಗೆ ಬಹಳ ಹಣ ಖರ್ಚಾಗಿದೆ. ಇದ್ದ ಅಲ್ಪಸ್ವಲ್ಪ ಆಸ್ತಿಯನ್ನೂ ಕಳೆದುಕೊಂಡಿದ್ದೇನೆ. ಇಬ್ಬರು ಮಕ್ಕಳಿದ್ದು, ಪತ್ನಿ ಮಲ್ಲಮ್ಮ ಕೂಲಿ ಮಾಡಿ ಸಲಹುತ್ತಿದ್ದಾರೆ ಎಂದು ನೋವು ತೊಡಿಕೊಂಡರು. ಮರುಗಿದ ಸಿಎಂ, ₹ 3.50 ಲಕ್ಷ ಆರ್ಥಿಕ ನೆರವು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

* ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕು ಅಳಗವಾಡಿಯ ಮನೋಜ್ ಯಡ್ರಾಮಿ ಹಾಗೂ ಸಚಿನ್ ಯಡ್ರಾಮಿ ತಮ್ಮ ಸಂಕಟವನ್ನು ಬಿಚ್ಚಿಟ್ಟರು. ‘ಅವರಿಗೆ ಒಂದು ವರ್ಷದಿಂದ ರಕ್ತ ವಾಂತಿಯಾಗುತ್ತಿದೆ. ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ’ ಎಂದು ಅವರ ಸಂಬಂಧಿ ಮಲ್ಲಿಕಾರ್ಜುನ ಯಡ್ರಾಮಿ ಮುಖ್ಯಮಂತ್ರಿಗೆ ತಿಳಿಸಿದರು. ಇಬ್ಬರಿಗೂ ತಲಾ ₹ 5 ಲಕ್ಷ ನೆರವು ಹಾಗೂ ಚಿಕಿತ್ಸೆಯ ಭರವಸೆಯನ್ನು ಸಿಎಂ ನೀಡಿದರು.

* ಪತ್ನಿ ನಿಧನರಾಗಿದ್ದಾರೆ. ಇಬ್ಬರು ಮಕ್ಕಳಿವೆ. ಅವರನ್ನು ಸಲಹಲು ಸಾಧ್ಯವಾಗುತ್ತಿಲ್ಲ. ಏನಾದರೂ ಕೆಲಸ ಕೊಟ್ಟು ಅನುಕೂಲ ಮಾಡಿಕೊಡಬೇಕು ಎಂದು ಕಾಕತಿಯ ಪ್ರಗತಿ ಪರಶುರಾಮ ಎನ್ನುವ ಮಹಿಳೆ ಕಣ್ಣೀರು ಹಾಕಿದರು. ಸ್ಪಂದಿಸಿದ ಮುಖ್ಯಮಂತ್ರಿ, ವಿಟಿಯುನಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT