ಗುರುವಾರ , ಅಕ್ಟೋಬರ್ 21, 2021
29 °C

ನಿಮ್ಮ ಹೃದಯವನ್ನು ಪ್ರೀತಿಸಿ; ಡಾ.ಸುರೇಶ ಪಟ್ಟೇದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಗತ್ತಿನಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ, ಅಪಾಯದಿಂದ ದೂರ ಇರುವುದಕ್ಕಾಗಿ ಜನರನ್ನು ಶಿಕ್ಷಿತರನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸೆ.29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ. ಹೃದಯವನ್ನು ಪ್ರೀತಿಸಬೇಕು ಎನ್ನುವುದು ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಹಿಂದೆ, 50 ಅಥವಾ 40 ವರ್ಷವಾದವರು ವರ್ಷಕ್ಕೊಮ್ಮೆ ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದೆವು. ಆದರೆ, ಇತ್ತೀಚಿನ ವರ್ಷಗಳಲ್ಲಿ 30 ವರ್ಷದವರಿಗೂ ತಿಳಿಸುತ್ತಿದ್ದೇವೆ. ಏಕೆಂದರೆ, ಆ ವಯಸ್ಸಿನವರಲ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಜಾಗೃತಿ ವಹಿಸುವುದು ಹಾಗೂ ದುಶ್ಚಟಗಳಿಂದ ದೂರವಿರುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಬೇಕು. ಮಧುಮೇಹ ಸಮಸ್ಯೆ ಇದ್ದವರು, ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ತೂಕ ಕಡಿಮೆ ಮಾಡಿಕೊಳ್ಳಬೇಕು. ಒತ್ತಡ ನಿವಾರಣೆಗೆ, ನಿಯಮಿತವಾಗಿ ಧ್ಯಾನ ಮತ್ತು ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಬೇಕು. ನಿತ್ಯ ಕನಿಷ್ಠ 30 ನಿಮಿಷವಾದರೂ ವಾಕ್ ಮಾಡಬೇಕು. ಇತರ ಆರೋಗ್ಯದ ಸಮಸ್ಯೆ ಇದ್ದವರು, ವೈದ್ಯರ ಸಲಹೆ ಮೇರೆಗೆ ಔಷಧಿ ಪಡೆಯಬೇಕು. ಆಹಾರವನ್ನು ಹಿತಮಿತವಾಗಿ ಸೇವಿಸಬೇಕು.

ಇತ್ತೀಚಿನ ದಿನಗಳಲ್ಲಿ ಜನರು ಕೋವಿಡ್ ಭೀತಿಯಿಂದಾಗಿ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇದು ಸರಿಯಲ್ಲ. ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ವಹಿಸುತ್ತಿರುವುದರಿಂದಾಗಿ ಕೋವಿಡ್‌ಗಿಂತಲೂ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ.

ಎದೆನೋವು, ಉಬ್ಬಸ, ಎಡಗೈಯಲ್ಲಿ ನೋವು, ಅತಿಯಾದ ಸುಸ್ತಾಗುವುದು, ಬೆನ್ನು ನೋವು ಮೊದಲಾದವು ಕಾಣಿಸಿಕೊಳ್ಳುವುದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಆ ಪರಿಸ್ಥಿತಿಯಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಎಲ್ಲ ವಯೋಮಾನದವರೂ ಮುನ್ನೆಚ್ಚರಿಕೆ ವಹಿಸಬೇಕು.

– ಡಾ.ಸುರೇಶ ಪಟ್ಟೇದ, ಹೃದ್ರೋಗ ತಜ್ಞ, ಕೆಎಲ್ಇ ಆಸ್ಪತ್ರೆ, ಬೆಳಗಾವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು