ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ಕಡಿಯಲ್ಲಿ ಮಹಾದೇವ ಪಾಟೀಲ ಮೆರವಣಿಗೆ, ಮಾರ್ಗದುದ್ದಕ್ಕೂ ಮಹಾರಾಷ್ಟ್ರಕ್ಕೆ ಜೈಕಾರ

ಎಂಇಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
Published 19 ಏಪ್ರಿಲ್ 2024, 13:37 IST
Last Updated 19 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಮಹಾದೇವ ಪಾಟೀಲ ಶುಕ್ರವಾರ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಿದ ಎಂಇಎಸ್‌ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿದರು.

ಹಲವು ಮುಖಂಡರು, ಕಾರ್ಯಕರ್ತರೊಂದಿಗೆ ಚಕ್ಕಡಿಯಲ್ಲಿ ಮೆರವಣಿಗೆ ನಡೆಸಿದ ಮಹಾದೇವ ಪಾಟೀಲ, ಜಿಲ್ಲಾ ಚುನಾವಣಾಧಿಕಾರಿ ನಿತೇಶ್‌ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.

ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಕಾಲೇಜು ರಸ್ತೆಯ ಮೂಲಕ ಸಾಗಿ ರಾಣಿ ಚನ್ನಮ್ಮ ವೃತ್ತದವರೆಗೂ ಮುಂದುವರಿಯಿತು. ಪುರುಷ ಹಾಗೂ ಮಹಿಳಾ ಕಾರ್ಯಕರ್ತರು ಭಗವಾ ಧ್ವಜ ಹಿಡಿದುಕೊಂಡು, ತಲೆಗೆ ಕೇಸರಿ ಪೇಟ ಧರಿಸಿ ಮೆರವಣಿಗೆಯಲ್ಲಿ ಸಾಗಿದರು. ಮಾರ್ಗದುದ್ದಕ್ಕೂ ನಿರಂತರವಾಗಿ ಜೈ ಮಹಾರಾಷ್ಟ್ರ ಘೋಷಣೆ ಮೊಳಗಿಸಿದರು.

ಶ್ರೀರಾಮ ಸೇನಾ ಹಿಂದೂಸ್ಥಾನ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಚಕ್ಕಡಿ ನಡೆಸಿದರು. ಮಾಜಿ ಶಾಸಕ ಮನೋಹರ ಕಿಣೇಕರ, ಮುಖಂಡರಾದ ಪ್ರಕಾಶ ಮರಗಾಳೆ, ಸರಿತಾ ಪಾಟೀಲ, ಸುಧಾ ಭಾತಖಾಂಡೆ, ರೇಣು ಕಿಲ್ಲೇಕರ ಸೇರಿದಂತೆ ಇತರರು ಇದ್ದರು. ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಂಇಎಸ್ ಕಾರ್ಯಕರ್ತರು ಪಾಲ್ಗೊಂಡರು.

ಜೈ ಶಿವಾಜಿ, ಜೈ ಭವಾನಿ, ಜೈ ಶ್ರೀರಾಮ್‌ ಘೋಷಣೆ ಕೂಗಿದರು.

ಮತ ವಿಭಜನೆ ಆತಂಕ: 2021ರಲ್ಲಿ ನಡೆದ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ 1.20 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಮರಾಠಿಗರ ಮತಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಮತ್ತೆ ಎಂಇಎಸ್ ಒಗ್ಗಟ್ಟಾಗಿ ಚುನಾವಣಾ ಕಣಕ್ಕೆ ಧುಮುಕಿರುವುದು ಕಾಂಗ್ರೆಸ್– ಬಿಜೆಪಿ ಅಭ್ಯರ್ಥಿಗಳಿಗೆ ಮತ ಒಡೆಯುವ ಭೀತಿ ಎದುರಾಗಿದೆ.

*

ನಾಡದ್ರೋಹಿ ಘೋಷಣೆ

ಮೆರವಣಿಗೆಯುದ್ದಕ್ಕೂ ಎಂಇಎಸ್‌ ಪುಂಡರು ಕನ್ನಡ ನಾಡದ್ರೋಹಿ ಘೋಷಣೆ ಕೂಗಿದರು. ‘ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು’ ಎಂದು ಕೂಗಿದರು. ‘ಇರುವುದಾದರೆ ಮಹಾರಾಷ್ಟ್ರದಲ್ಲಿ; ಇಲ್ಲವೇ ಜೈಲಿನಲ್ಲಿ’ ಎಂದೂ ಘೋಷಣೆ ಮೊಳಗಿಸಿದರು.

ಕರ್ನಾಟಕದಲ್ಲಿ ಮರಾಠಿಗರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ತಡೆಯಲು ಎಂಇಎಸ್‌ ಅಭ್ಯರ್ಥಿಗೆ ಮತ ಹಾಕಿ ಎಂದು ಪ್ರಚಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT