ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ | ಮಲಿನಗೊಂಡ ಮಲಪ್ರಭೆ: ಸಾಂಕ್ರಾಮಿಕ ರೋಗ ಭೀತಿ

Published 28 ಮೇ 2024, 6:27 IST
Last Updated 28 ಮೇ 2024, 6:27 IST
ಅಕ್ಷರ ಗಾತ್ರ

ರಾಮದುರ್ಗ: ಬರಗಾಲದಿಂದ ಸಂಪೂರ್ಣ ಖಾಲಿಯಾಗಿರುವ ಮಲಪ್ರಭಾ ನದಿಯ ಒಡಲು ಈಗ ಚರಂಡಿ ನೀರು ಶೇಖರಣೆ ಕೇಂದ್ರವಾಗಿ ಮಾರ್ಪಟ್ಟಿದೆ. ಪಟ್ಟಣದಿಂದ ಹೊರ ಹೋಗಬೇಕಿದ್ದ ಚರಂಡಿ ನೀರು ಮಲಪ್ರಭಾ ನದಿ ಒಡಲಲ್ಲಿ ಸಂಗ್ರಹಗೊಂಡು ಮಲಪ್ರಭೆ ನದಿ ಮಲಿನಗೊಂಡಿದೆ.

ಪಟ್ಟಣ ಪ್ರದೇಶದ ಎಲ್ಲ ಚರಂಡಿಗಳ ನೀರು ಪಟ್ಟಣಕ್ಕೆ ಹೊಂದಿಕೊಂಡಿರುವ ಮಲಪ್ರಭಾ ನದಿ ಪಾತ್ರದಲ್ಲಿ ಸುಮಾರು ಮೂರ್ನಾಲ್ಕು ಕಡೆಗಳಿಂದ ಸಂಗ್ರಹವಾಗುತ್ತಿದೆ. ಮೊದಲಿನಿಂದಲೂ ನದಿಗೆ ಹರಿ ಬಿಡಲಾಗುತ್ತಿದ್ದ ಚರಂಡಿ ನೀರು ಈಗಲೂ ನದಿಗೆ ಸೇರಿ ಸುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಇದರಿಂದ ವಾಯುವಿಹಾರಕ್ಕೆಂದು ಆಗಮಿಸುವ ಜನರಿಗೆ ತಲೆ ನೋವಾಗಿದೆ. ಇದಲ್ಲದೇ ನದಿ ಪಕ್ಕದಲ್ಲಿ ವಾಸಿಸುವವರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ.

ಆಮೆ ಗತಿಯಲ್ಲಿ ಒಳಚರಂಡಿ ಯೋಜನೆ: ಚರಂಡಿ ನೀರನ್ನು ನದಿಗೆ ಸೇರಿಸದೇ ಒಳಚರಂಡಿ ಮೂಲಕ ಹಲಗತ್ತಿ ಸಮೀಪದ ಜಾಗೆಯಲ್ಲಿ ನೀರು ಶುದ್ಧಿಕರಣ ಕೇಂದ್ರ ಮಾಡಲು 2009 ರಲ್ಲಿಯೇ ನಿರ್ಧರಿಸಲಾಗಿತ್ತಾದರೂ ಕಳೆದ 12–15 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಯೋಜನೆ ಇನ್ನೂ ತನಕ ಪೂರ್ಣಗೊಂಡಿಲ್ಲ.

ಕಳೆದ ಸಾಕಷ್ಟು ದಿನಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಯೋಜನೆಯಿಂದ ಜನ ಬೇಸತ್ತು ಹೋಗಿದ್ದಾರೆ. ಆಗಾಗ ಗುಂಡಿ ಅಗೆಯುವ ಮತ್ತು ರಸ್ತೆ, ಪರಿಸರ ಹಾಳು ಮಾಡುವ ಯೋಜನೆಯ ಕಾಮಗಾರಿಯಿಂದ ಜನ ಕಂಗಾಲಾಗಿದ್ದಾರೆ. ಈಗೀಗ ಎರಡ್ಮೂರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡು ಯೋಜನೆಯ ಸಫಲತೆ ಜನತೆಗೆ ತಲುಪಿಲ್ಲ.

ಕೆಲವು ಕಡೆಗಳಲ್ಲಿ ಚರಂಡಿ ನೀರನ್ನು ಒಳಚರಂಡಿಗಳಲ್ಲಿ ಹರಿಬಿಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಶೌಚಾಲಯ, ಸ್ನಾನಗೃಹದ ನೀರು ಒಳಚರಂಡಿ ಯೋಜನೆಯ ಪೈಪುಗಳಲ್ಲಿ ಸೇರಿಸಲಾಗಿದೆ. ಶೇಖರಣೆಗೊಂಡಿರುವ ನೀರು ಅಲ್ಲಲ್ಲಿ ಚೇಂಬರ್ ಮೂಲಕ ಹೊರ ಚಿಮ್ಮುವ ಗಲೀಜು ನೀರು ಆ ಪ್ರದೇಶದ ಜನರನ್ನು ಮತ್ತು ದಾರಿ ಹೋಕರನ್ನು ಹೈರಾಣು ಮಾಡಿದೆ.

ಕೊಟ್ಯಂತರ ಅನುದಾನದಲ್ಲಿ ಕೈಗೊಂಡಿರುವ ಒಳಚರಂಡಿ ಯೋಜನೆಯ ಬಹುತೇಕ ಚೇಂಬರ್‌ಗಳು ಒಡೆದು ಹಾಳಾಗುತ್ತಿವೆ. ಅದರಲ್ಲಿ ವೃದ್ಧರು, ಮಕ್ಕಳು ಬೀಳುವ ಭಯ ಬಹುತೇಕರನ್ನು ಕಾಡುತ್ತಿದೆ.

ಒಳಚರಂಡಿ ಯೋಜನೆ ಶೀಘ್ರ ಪೂರ್ಣಗೊಂಡು ನದಿಗೆ ಸೇರುವ ಗಲೀಜು ನೀರನ್ನು ಒಂದೆಡೆ ಸಂಗ್ರಹಿಸಿ ಶುದ್ಧೀಕರಣ ಮಾಡಬೇಕು. ನದಿ ಪಾತ್ರವನ್ನು ಶುಚಿಯಾಗಿ ಇಟ್ಟುಕೊಳ್ಳಲು ಪುರಸಭೆಯು ಮುಂದಾಗಬೇಕಿದೆ.

ಮೊದಲಿಗೆ ರೂ. 7.49 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಹೊಸ ಅಂದಾಜಿನ ಪ್ರಕಾರ ₹ 18.18 ಕೋಟಿ ಪ್ರಸ್ತಾವ ಕಲ್ಪಿಸಲಾಗಿದೆ. ಮನೆಯ ಚರಂಡಿ ನೀರನ್ನು ಒಳಚರಂಡಿಗೆ ಜೋಡಿಸುವ ಕಾರ್ಯ ಮಾತ್ರ ಉಳಿದಿದೆ.

ಮನೆಗಳ ನೀರನ್ನು ಒಳಚರಂಡಿಗೆ ಸೇರಿಸುವ ಕ್ರಮ ಮಾತ್ರ ಬಾಕಿ ಉಳಿದಿದೆ. ಶೀಘ್ರವೇ ಕಾಮಗಾರಿ ಮುಗಿಸಲುಸೂಚನೆ ನೀಡಿದ್ದೇವೆ
ಪ್ರವೀಣ.ಎಸ್‌ ಎಇ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಪವಿತ್ರ ಮಲಪ್ರಭೆಯು ಕೊಳಚೆ ನೀರಿನಿಂದ ನದಿ ಕಲುಷಿತವಾಗುತ್ತಿದೆ. ಕೊರಚೆ ನೀರು ನದಿಗೆ ಸೇರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಅಲ್ತಾಫ್‌ ಜಹಗೀರದಾರ ಪರಿಸರ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT