ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPTCL: ಕೆಪಿಟಿಸಿಎಲ್ ಕಿರಿಯ ಸಹಾಯಕರ ಪರೀಕ್ಷೆಯಲ್ಲಿ ಸ್ಮಾರ್ಟ್‌ವಾಚ್ ಬಳಿಸಿ ಅಕ್ರಮ

ಯುವಕನ ಬಂಧನ, ತನಿಖೆಗೆ ತಂಡ ರಚನೆ
Last Updated 10 ಆಗಸ್ಟ್ 2022, 12:33 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಭಾನುವಾರ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್‌ವಾಚ್ ಬಳಿಸಿ ಅಕ್ರಮ ಎಸಗಿದ ಆರೋಪ‍ದ ಮೇಲೆ ಯುವಕನನ್ನು ಬುಧವಾರ ಬಂಧಿಸಲಾಗಿದೆ.

ಮೂಡಲಗಿ ತಾಲ್ಲೂಕಿನ ನಾಗನೂರು ಗ್ರಾಮದ ಸಿದ್ಧಪ್ಪ ಮದಿಹಳ್ಳಿ (20) ಬಂಧಿತ ಆರೋಪಿ. ಗೋಕಾಕ ನಗರದ ‍ಪರೀಕ್ಷಾ ಕೇಂದ್ರವೊಂದರಲ್ಲಿ ಈತ ಅಕ್ರಮ ಎಸಗಿದ್ದು ಖಾತ್ರಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಗಸ್ಟ್‌ 7ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಮಾಹಿತಿ ನೀಡಿದರು. ಪರೀಕ್ಷಾ ಕೊಠಡಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆರೋಪಿ ಕೈಯಲ್ಲಿ ಸ್ಮಾರ್ಟ್‌ವಾಚ್‌ ಇರುವುದು ಗೊತ್ತಾಗಿದೆ. ಆ ವಾಚ್‌ನಲ್ಲಿರುವ ಮಿನಿ ಕ್ಯಾಮೆರಾ ಬಳಸಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಹೊರಗೆ ರವಾನಿಸಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ’ ಎಂದರು.

‘ಪ್ರಶ್ನೆ ಪತ್ರಿಕೆಯ ಫೋಟೊವನ್ನು ಯಾರಿಗೆ ಕಳುಹಿಸಿದ್ದ, ಎಲ್ಲಿಗೆ ಕಳುಹಿಸಿದ್ದ ಮತ್ತು ಅಲ್ಲಿಂದ ಮರಳಿ ಉತ್ತರಗಳನ್ನು ಹೇಗೆ ಪಡೆದುಕೊಂಡಿದ್ದಾನೆ ಎಂಬುದರ ಬಗ್ಗೆ ತಾಂತ್ರಿಕ ಪರಿಣತರಿಂದ ಪರಿಶೀಲನೆ ನಡೆದಿದೆ. ಜತೆಗೆ, ಈ ಅಕ್ರಮದಲ್ಲಿ ಸಿದ್ದಪ್ಪ ಒಬ್ಬನೇ ಇದ್ದಾನೋ ಅಥವಾ ಇತರರೂ ಇದೇ ಮಾರ್ಗ ಅನುಸರಿಸಿದ್ದಾರೋ ಎಂಬ ಬಗ್ಗೆಯೂ ನಿಖರ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದೂ ಎಸ್ಪಿ ತಿಳಿಸಿದರು.

‘ಡಿವೈಎಸ್‌ಪಿ ನೇತೃತ್ವದಲ್ಲಿ ತಕ್ಷಣ ಎರಡು ತಂಡಗಳನ್ನು ರಚಿಸಲಾಗಿದೆ. ಮೂಲ ಎಲ್ಲಿದೆ ಎಂಬುದನ್ನೂ ಜಾಲಾಡಲಾಗುತ್ತಿದೆ. ಅಕ್ರಮ ಎಸಗಿದ ಯಾರೂ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದೂ ಅವರು ತಿಳಿಸಿದರು.

ಈ ಬಗ್ಗೆ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂದುವರಿದ ಅಕ್ರಮ ಮಾರ್ಗ

545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣ ಇನ್ನೂ ಸದ್ದು ಮಾಡುತ್ತಿದೆ. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜಕಾರಣಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಇತರ ಇಲಾಖೆಗಳ ನೌಕರರು, ಹಲವು ಅಭ್ಯರ್ಥಿಗಳೂ ಬಂಧಿತರಾಗಿದ್ದಾರೆ. ಇದರಲ್ಲಿ ಬ್ಲ್ಯೂಟೂತ್‌ ಬಳಸಿ, ಒಎಂಆರ್‌ ಶೀಟ್‌ ತಿದ್ದಿ ಅಕ್ರಮ ಎಸಗಿದ್ದು ಬಹಿರಂಗವಾಗಿದೆ.

ಈಗ ಕೆಪಿಟಿಸಿಎಲ್‌ ಪರೀಕ್ಷೆಯಲ್ಲಿ ಸ್ಮಾರ್ಟ್‌ವಾಚ್‌ ಬಳಸುವ ಮೂಲಕ ಅಕ್ರಮಕ್ಕೆ ಮತ್ತೊಂದು ಹೊಸ ಮಾರ್ಗ ಕಂಡುಕೊಂಡಿದ್ದು ಬಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT