ಸೋಮವಾರ, ಆಗಸ್ಟ್ 2, 2021
20 °C

ಕಾಳಪ್ಪ ಕೈಯಲ್ಲಿ ಕೊರಡು ಕೊನರಿದಾಗ...

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಳೆಯರಗುದ್ರಿ ಗ್ರಾಮದ ಕಾಳಪ್ಪ ಬಡಿಗೇರ ಕಟ್ಟಿಗೆಯಲ್ಲಿ ವೈವಿಧ್ಯಮಯವಾದ ಕಲಾಕೃತಿಗಳನ್ನು ರೂಪಿಸಿ ತಮ್ಮ ಕಲಾ ಕೌಶಲ ಮೆರೆಯುತ್ತಿದ್ದಾರೆ.

ವಿವಿಧ ದೇವರ ಮೂರ್ತಿಗಳು, ಜೋಡೆತ್ತುಗಳು (ಬಸವಣ್ಣ), ಹುಲಿ, ಸಿಂಹ, ಆನೆ, ನವಿಲು, ಹಸು, ಕುದರೆ, ಆಮೆ, ಬಂಡಿ ಹೀಗೆ... ಹತ್ತು ಹಲವಾರು ಕುಸರಿ ಕಲಾಕೃತಿಗಳು ಅವರ ಕೈಚಳಕದಲ್ಲಿ ಮರದಲ್ಲಿ ಜೀವ ಪಡೆದುಕೊಂಡಿವೆ. ನೀನೊಲಿದರೆ ಕೊರಡು ಕೊನರುವುದಯ್ಯಾ ಎಂಬ ವಚನದ ಸಾಲಿನಂತೆ ಕಾಳಪ್ಪ ಅವರಿಗೆ ಕಟ್ಟಿಗೆ ಸಿಕ್ಕರೆ ಸಾಕು ಅದನ್ನು ಧ್ಯಾನಾಸಕ್ತಿಯಿಂದ ಕೆತ್ತಿ ಸುಂದರ ಕಲಾಕೃತಿಯನ್ನಾಗಿಸುತ್ತಾರೆ.

4ನೇ ತರಗತಿವರೆಗೆ ಕಲಿತಿರುವ ಕಾಳಪ್ಪ ಅವರು ಬಾಲಕರಿದ್ದಾಗಲೇ ತಂದೆ ಲಿಂಗಪ್ಪ ಅವರ ಜೊತೆಗೆ ಬಡಿಗತನ ಕಾಯಕಕ್ಕೆ ಸಾಥ್‌ ನೀಡಿದರು. ಉಪಯೋಗಕ್ಕೆ ಬಾರದೆಂದು ಬಿಸಾಡಿದ್ದ ಕಟ್ಟಿಗೆ ತುಂಡುಗಳನ್ನೇ ಬಳಸಿ ಪಕ್ಷಿ, ಪ್ರಾಣಿಗಳನ್ನು ಮಾಡಲು ಸ್ವಪ್ರತಿಭೆಯಿಂದ ಶುರು ಮಾಡಿದರು. ಮುಂದೆ  ಸೂಕ್ಷ್ಮತೆಯ ಕುಸರಿ ಕೆಲಸದಲ್ಲಿ ಪರಿಣಿತರಾಗಿ ದೇವರ ಮೂರ್ತಿಗಳಿಗೆ ರೂಪಕೊಟ್ಟರು. ಈವರೆಗೆ ಕಾಳಪ್ಪ ಅವರು ಕಟ್ಟಿಗೆಯಲ್ಲಿ ಸಿದ್ಧಗೊಳಿಸಿರುವ ಹಲವು ದೇವರ ಮೂರ್ತಿಗಳು ಸಾಕಷ್ಟು ಜನರ ದೇವರ ಮನೆಯಲ್ಲಿ ಪೂಜಿಸಲಸ್ಪಡುತ್ತಿವೆ; ವಿವಿಧ ಕಲಾಕೃತಿಗಳು ಅನೇಕರ ಮನೆಗಳನ್ನು ಅಲಂಕರಿಸುವೆ.

ಅವರು ಸಾಗವಾನಿ ಕಟ್ಟಿಗೆ ಬಳಸುತ್ತಿದ್ದು, ಉಳಿಯಂಥ ದೇಸಿ ಉಪಕರಣಗಳನ್ನೇ ಬಳಸುತ್ತಾರೆ. ಕಲಾಕೃತಿ ಸಿದ್ಧವಾದ ನಂತರ ಟಚ್‌ವುಡ್‌ ಇಲ್ಲವೆ ಫ್ರೆಂಚ್ ಪಾಲಿಶ್‌ ಲೇಪನ ಮಾಡಿ ಅಂದಗೊಳಿಸುತ್ತಾರೆ. ಹೀಗಾಗಿ ಅವು ಎಲ್ಲರ ಮನಸೂರೆಗೊಳ್ಳುತ್ತವೆ. ಕೆಲವರು ಸಾಗವಾನಿ ಕಟ್ಟಿಗೆ ಕೊಟ್ಟು ತಮಗೆ ಬೇಕಾದ ಕಲಾಕೃತಿಗಳನ್ನು ಮಾಡಿಸಿಕೊಳ್ಳುತ್ತಾರೆ. ಅವರು ತಯಾರಿಸುವ ಕಲಾಕೃತಿಗಳಿಗೆ ಬಹಳಷ್ಟು ಬೇಡಿಕೆ ಇದೆ.

‘ಸದ್ಯ ಕೊರೊನಾದಿಂದ ಯಾವ ಕೆಲಸ ಇಲ್ಲದೆ ಕಷ್ಟವಾಗಿದೆ’ ಎನ್ನುತ್ತಾರೆ.

ಕಟ್ಟಿಗೆ ಬೀಗ: ಕಟ್ಟಿಗೆಯಲ್ಲಿ ಕೆತ್ತಿರುವ ಬೀಗ ಮತ್ತು ಕೀ ಅವರ ಕಲಾಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಬೀಗವನ್ನು ಹಾಕುವ, ತೆಗೆಯುವ ತಾಂತ್ರಿಕತೆ ಅಳವಡಿಸಿರುವುದು ಕಟ್ಟಿಗೆ ಬೀಗದ ವಿಶೇಷವಾಗಿದೆ. ಒಂದೇ ಕಟ್ಟಿಗೆ ಕೆತ್ತಿ ಸರಪಳಿ ಮಾಡಿದ್ದು, ಚಿಕ್ಕದಾದ ಎತ್ತಿನ ಬಂಡಿ ಮಾಡಿರುವುದು ಗಮನಾರ್ಹವಾಗಿವೆ. 4 ಅಂಗುಲದಿಂದ ಹಿಡಿದು ಒಂದು ಅಡಿ ಎತ್ತರವಿರುವ ಕಲಾಕೃತಿಗಳನ್ನು ಮಾಡುತ್ತಾರೆ.

‘ಕಲಾ ಸರಸ್ವತಿ ಒಲಿಯಬೇಕಾದ್ರ ತಪಸ್ಸು ಬೇಕ್ರೀ. ಕೆಲಸಾ ಮಾಡುವಾಗ ಊಟದ ಖಬರ ಇರಾಂಗಿಲ್ಲರ್ರೀ. ಕೈಯಾಗಿಂದ ಕೆಲಸ ಮುಗಿಸಿದ ಮ್ಯಾಲ ಊಟಾ ಮಾಡತನ್ರೀ’ ಎನ್ನುತ್ತಾರೆ.

ಅವರ ಕುಸರಿ ಕಲೆಗೆ ಸದ್ಯ ಐದು ದಶಕಗಳು ಸಂದಿವೆ. 65ನೇ ವಯಸ್ಸಲ್ಲೂ ಕಟ್ಟಿಗೆ ಕಲಾಕೃತಿಗಳನ್ನು ತಯಾರಿಸುವಲ್ಲಿ ಈಗಲೂ ಲವಲವಿಕೆ ಇದೆ.

‘ಹಳ್ಳಿಗಳಲ್ಲಿ ಇಂಥ ಅನೇಕ ಕಲಾ ಪ್ರತಿಭೆಗಳಿದ್ದರೂ ಸಹ ಸರ್ಕಾರದ ಸಂಬಂಧಿಸಿದ ಇಲಾಖೆಯವರು ಗುರುತಿಸುತ್ತಿಲ್ಲ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ಹಳ್ಳಿಗಳಲ್ಲಿ ಎಲೆಮರೆ ಕಾಯಿಯಂತಿರುವ ಕಾಳಪ್ಪ ಬಡಿಗೇರ ಅವರಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವಶ್ಯವಿದೆ' ಎಂದು ಅವರಾದಿಯ ಶಿಕ್ಷಕ ಮಹಾಲಿಂಗ ಪಾಟೀಲ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು