ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರ್‌ ಸ್ಫೋಟ ಸಂಚು ರೂಪಿಸಿದ್ದು ಬೆಳಗಾವಿಯಲ್ಲಿ?

Published 1 ಆಗಸ್ಟ್ 2023, 7:43 IST
Last Updated 1 ಆಗಸ್ಟ್ 2023, 7:43 IST
ಅಕ್ಷರ ಗಾತ್ರ

ಬೆಳಗಾವಿ: ಮಂಗಳೂರಿನಲ್ಲಿ 2022ರ ನವೆಂಬರ್‌ 19ರಂದು ನಡೆದ ಕುಕ್ಕರ್‌ ಸ್ಫೋಟದ ಪೂರ್ವ ತಯಾರಿ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಬಗ್ಗೆ ಬಲವಾದ ಅನುಮಾನ ವ್ಯಕ್ತವಾಗಿದೆ.

ಕುಕ್ಕರ್‌ ಸ್ಫೋಟ ಪ್ರಕರಣದಲ್ಲಿ ಬಂಧಿತನಾದ ಪ್ರಮುಖ ಆರೋಪಿ, ಶಿವಮೊಗ್ಗದ ಶಾರೀಕ್‌ ಅಹಮದ್‌ ಮೂರು ತಿಂಗಳು ಇಲ್ಲಿನ ಹಿಂಡಲಗಾ ಕಾರಾಗೃಹದಲ್ಲಿದ್ದ. ಬೆಂಗಳೂರಲ್ಲಿ ನಡೆದ ‘ಹನಿಟ್ರ್ಯಾಪ್’ ಪ್ರಕರಣ‌‌ದಲ್ಲಿ ಸಿಕ್ಕಿಕೊಂಡ ಕಾರಣ ಜೈಲು ಸೇರಿದ್ದ. ‘ಬೆಂಗಳೂರು ಸ್ಪೋಟ’ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ, ಚಿಕ್ಕಮಗಳೂರು ಮೂಲದ ಅಫ್ಸರ್ ಪಾಷಾ ಕೂಡ ಇದೇ ಜೈಲಿನಲ್ಲಿದ್ದ. ತಾನು ಲಷ್ಕರ್ ಎ ತಯ್ಯಬಾ ಸಂಘಟನೆಯ ನಂಟು ಹೊಂದಿದ ಬಗ್ಗೆ ಅಫ್ಸರ್ ಪಾಷಾ, ಶಾರೀಕ್‌ ಬಳಿ ಹಂಚಿಕೊಂಡಿದ್ದ.

‘ಜೈಲಿನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಮಂಗಳೂರಿನಲ್ಲಿ ಕುಕ್ಕರ್‌ ಬಳಸಿ ಬಾಂಬ್‌ ಸ್ಫೋಟಿಸುವ ಬಗ್ಗೆ ಅಪ್ಸರ್‌ ಪಾಷಾನೇ ಶಾರೀಕ್‌ಗೆ ತರಬೇತಿ ನೀಡಿರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ. ಸದ್ಯ ನಾಗ್ಪುರ ಪೊಲೀಸರ ವಶದಲ್ಲಿರುವ ಅಫ್ಸರ್ ಪಾಷಾ ನೀಡಿರುವ ಹೇಳಿಕೆಯಿಂದ ಈ ಬೆಳವಣಿಗೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಜೈಲಿನಿಂದ ಜಾಮೀನು ಪಡೆದು ‌ಬಿಡುಗಡೆಯಾದ ಶಾರೀಕ್‌ 2022ರ ನವೆಂಬರ್‌ 19ರಂದು ಮಂಗಳೂರಿನಲ್ಲಿ ಕುಕ್ಕರ್‌ ಸ್ಫೋಟಿಸಿದ್ದ.

ಅನುಮಾನ ಮೂಡಿದ್ದು ಹೇಗೆ?

ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲು ಸೇರಿದ ಜಯೇಶ್‌ ಪೂಜಾರಿ ಎಂಬಾತ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಇದೇ ಕೊಲೆ ಬೆದರಿಕೆ ಹಾಕಿದ್ದ. ತನಗೆ ₹10 ಕೋಟಿ ಕೊಡಬೇಕು, ಇಲ್ಲದಿದ್ದರೆ ನಿತಿನ್‌ ಗಡ್ಕರಿ ಅವರನ್ನು ಬಾಂಬ್‌ ಸ್ಫೋಟಿಸಿ ಕೊಲ್ಲುವುದಾಗಿ ಗಡ್ಕರಿ ಅವರ  ನಾಗ್ಪುರದ ಕಚೇರಿಗೆ ಫೋನ್‌ ಮಾಡಿದ್ದ. ಅಲ್ಲದೇ ಹಣ ವರ್ಗಾಯಿಸುವಂತೆ ಒಬ್ಬ ಯುವತಿಯ ಅಕೌಂಟ್‌ ನಂಬರ್‌ ಕೂಡ ಕೊಟ್ಟಿದ್ದ. ಆ ಯುವತಿಯೇ ಅಪ್ಸರ್‌ ಪಾಷಾನ ಗೆಳತಿ ಎಂಬ ಸಂಗತಿ ನಾಗ್ಪುರ ಪೊಲೀಸರು ಪತ್ತೆ ಮಾಡಿದ್ದರು. ಅಲ್ಲದೇ, ಜೈಲನೊಳಗೆ ಜಯೇಶ್‌ಗೆ ಮೊಬೈಲ್‌ ಒದಗಿಸಿದ್ದೂ ಅಫ್ಸರ್ ಪಾಷಾ ಎಂಬ ಸಂಗತಿಯನ್ನೂ ಖಚಿತ ಮಾಡಿಕೊಂಡಿದ್ದರು.

ಮೊಬೈಲ್‌ ಒದಗಿಸಿದ ಅಫ್ಸರ್ ಪಾಷಾಗೆ ಉಗ್ರಗಾಮಿ ಸಂಘಟನೆಯ ನಂಟಿದೆ ಎಂಬ ಅನುಮಾನದ ಮೇಲೆ ನಾಗ್ಪುರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮಂಗಳೂರು ಕುಕ್ಕರ್‌ ಸ್ಪೋಟದ ಮಾಹಿತಿ ಕೂಡ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT