ಶುಕ್ರವಾರ, ಮಾರ್ಚ್ 5, 2021
27 °C

ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಂಟೈನ್ಮೆಂಟ್‌ ಝೋನ್‌ ಆಗಿರುವ ಹಿರೇಬಾಗೇವಾಡಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

‘ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಿಗೆ ಅವಶ್ಯ ಸಾಮಗ್ರಿಗಳು ಸಿಗುತ್ತಿಲ್ಲ ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮಸ್ಥರು ಕೊರೊನಾ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ಎಲ್ಲರೂ ಸಹಕರಿಸಿದರೆ ಸೋಂಕು ಹರಡುವಿಕೆ ತಡೆಯಬಹುದು’ ಎಂದರು.

ಟ್ರ್ಯಾಕ್ಟರ್‌ ಮೂಲಕ ಪಡಿತರ ಕೊಡಿ: ‘ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿಗ ಬಂದಿರುವ ವಲಸೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಿಸಬೇಕು. ನಿತ್ಯವೂ ಸ್ವಚ್ಛತೆ ಮತ್ತು ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಹಿರೇಬಾಗೇವಾಡಿ ಸೇರಿದಂತೆ ಎಲ್ಲ 10 ಕಂಟೈನ್ಮೆಂಟ್ ಝೋನ್‌ಗಳಲ್ಲೂ ಟ್ರ್ಯಾಕ್ಟರ್ ಮೂಲಕ ಪಡಿತರ ಆಹಾರಧಾನ್ಯ ವಿತರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಹಿರೇಬಾಗೇವಾಡಿಯ 175 ಜನರ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬರಬೇಕಿದೆ. ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ಮೊಬೈಲ್ ಕ್ಲಿನಿಕ್ ನೀಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ 2 ಮೊಬೈಲ್ ಕ್ಲಿನಿಕ್ ಒದಗಿಸಬೇಕು. ಹಾಲು, ದಿನಸಿ, ತರಕಾರಿ ಮೊದಲಾದವುಗಳ ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಸ್ಥಿತಿವಂತರು ಸಹಕರಿಸಿ: ‘ಗ್ರಾಮದಲ್ಲಿ 2,700 ಮನೆಗಳು 3ಸಾವಿರ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೂ ಅಗತ್ಯ ವಸ್ತುಗಳನ್ನು ಪೂರೈಸುವ ಬಗ್ಗೆ ಪರಿಶೀಲಿಸಲಾಗುವುದು. ಎಲ್ಲ ಕುಟುಂಬಗಳಿಗೆ ಪೂರೈಕೆ ಸಾಧ್ಯವಾಗದಿದ್ದರೆ, ಸ್ಥಿತಿವಂತರು ಸಹಕರಿಸಬೇಕು’ ಎಂದು ಕೋರಿದರು.

ಆತಂಕ ದೂರವಾಗಿಸಿ: ‘ಮೊದಲು ಜನರ ಆತಂಕ ದೂರ ಮಾಡಬೇಕು. ಗ್ರಾಮದ ನಿರ್ದಿಷ್ಟ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪರೀಕ್ಷೆಗಳು ನಡೆಸಬೇಕು. ಎಲ್ಲರನ್ನೂ ಏಕಕಾಲಕ್ಕೆ ಪರೀಕ್ಷಿಸುವುದು ವೈಜ್ಞಾನಿಕವಾಗಿ ಸೂಕ್ತವಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಜಾನುವಾರುಗಳಿಗೆ ಮೇವು ಒದಗಿಸಬೇಕು. ಜನರಿಗೆ ಉಚಿತವಾಗಿ ಹಾಲು ವಿತರಿಸಬೇಕು. ತರಕಾರಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿ ರೆಡ್ ಝೋನ್ ಬಿಟ್ಟು, ಉಳಿದೆಡೆ ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಬೇಕು. ನಿರಂತರವಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರಿಗೆ ವಿಶ್ರಾಂತಿ ನೀಡಿ, ಬೇರೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.

ಅಡಿವೇಶ ಇಟಗಿ, ಸಿ.ಸಿ. ಪಾಟೀಲ, ಸೈಯದ್‌ ಖಾದ್ರಿ, ಶ್ರೀಶೈಲ ಫಡಗಲ್, ಬಾಪು ನಾವಲಗಟ್ಟಿ, ಶ್ರೀಕಾಂತ ಮಾಧುಬರಮಣ್ಣವರ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಡಿಸಿಪಿ ಯಶೋದಾ ವಂಟಗೋಡಿ, ಎಸಿಪಿ ನಾರಾಯಣ ಭರಮನಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಮುಖಂಡ ಚನ್ನರಾಜ ಹಟ್ಟಿಹೊಳಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು