ಸೋಮವಾರ, ಜನವರಿ 18, 2021
27 °C

ಬೆಳಗಾವಿ: ವೈದ್ಯಕೀಯ ಪರೀಕ್ಷೆ ಮುಂದೂಡಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ವೈದ್ಯಕೀಯ ಪರೀಕ್ಷೆ ಮುಂದೂಡಬೇಕು’ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಬಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಎಐಡಿಎಸ್‌ಒ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟ ಸಮಿತಿ ಜಂಟಿಯಾಗಿ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಲಾಗಿತ್ತು. ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣದಲ್ಲೂ ‘ಎಂಬಿಬಿಎಸ್ ಪರೀಕ್ಷೆ ಮುಂದೂಡಬೇಕು’ ಎಂಬ ಆಗ್ರಹ ಮಂಡಿಸಲಾಯಿತು. ಬೇಡಿಕೆಯ ಫಲಕ ಹಿಡಿದು ವಿದ್ಯಾರ್ಥಿಗಳು ಆನ್‌ಲೈನ್ ಚಳವಳಿಯಲ್ಲೂ ಭಾಗಿಯಾದರು. ಪೋಷಕರು ಕೂಡ ಬೆಂಬಲಿಸಿದ್ದಾರೆ ಎಂದು ಎಐಡಿಸ್‌ಒ ಜಿಲ್ಲಾ ಸಂಘಟಕ ಮಹಾಂತೇಶ ಬಿಳೂರ ತಿಳಿಸಿದ್ದಾರೆ.

‘ಡಿ. 1ರಿಂದ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. 8 ತಿಂಗಳಿನಿಂದಲೂ ಜನಸಾಮಾನ್ಯರು, ವಿದ್ಯಾರ್ಥಿಗಳು ಕೊರೊನಾಕ್ಕೆ ತುತ್ತಾಗಿ ಮತ್ತು ಆರ್ಥಿಕವಾಗಿ ನಲುಗಿ ಹೋಗಿರುವ ಸಂದರ್ಭದಲ್ಲಿ ಆಫ್‌ಲೈನ್ ತರಗತಿಗಳನ್ನು ಪುನರಾರಂಭ ಮಾಡುತ್ತೇವೆ ಎನ್ನುವುದು ಅತ್ಯಂತ ಖಂಡನೀಯವಾಗಿದೆ. ಇದರ ಬೆನ್ನಲ್ಲೇ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಜ. 19ರಿಂದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ’ ಎಂದು ಹೇಳಿದ್ದಾರೆ.

‘ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಸಿದ್ಧತೆ ನಡೆಸಿ, ಎದುರಿಸುವುದು ಅಸಾಧ್ಯ ಮತ್ತು ಅವಾಸ್ತವಿಕವಾಗಿದೆ. ಇಂಟರ್ನೆಟ್ ಮೊದಲಾದ ಸೌಲಭ್ಯಗಳ ಕೊರತೆಯಿಂದಾಗಿ, ಬಹಳಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲಾಗಿಲ್ಲ. ಪ್ರಾಯೋಗಿಕ ತರಗತಿ, ಕ್ಲಿನಿಕಲ್  ತರಬೇತಿಯ ಕ್ರಮಗಳ ಮೇಲೆ ಆಧಾರವಾಗಿರುವ ವೈದ್ಯಕೀಯ ಕೋರ್ಸ್‌ನಲ್ಲಿ ಇಲ್ಲಿವರೆಗೆ ಆ ರೀತಿಯ ತರಗತಿಗಳು ನಡೆದಿಲ್ಲ’ ಎಂದು ತಿಳಿಸಿದ್ದಾರೆ.

‘ಎಐಡಿಎಸ್‌ಒ ರಾಜ್ಯ ಸಮಿತಿ ನಡೆಸಿದ ಸಮೀಕ್ಷೆಯಲ್ಲಿ 9,500 ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಶೇ 97.6ರಷ್ಟು ವಿದ್ಯಾರ್ಥಿಗಳು ಜನವರಿಯಲ್ಲಿ ಪರೀಕ್ಷೆ ಎದುರಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ. ಒಂದೂವರೆ ತಿಂಗಳಿನ ಪೂರ್ವತಯಾರಿ ಸಾಕಾಗುವುದಿಲ್ಲ ಎಂದು ಶೇ. 97.4ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆನ್‌ಲೈನ್ ತರಗತಿಗಳು ಸಹಾಯಕವಾಗಿಲ್ಲ ಎಂದು ಶೇ. 97.3ರಷ್ಟು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಾಸ್ತವ ಕಡೆಗಣಿಸಿ ವಿಶ್ವವಿದ್ಯಾಲಯವು ಪರೀಕ್ಷೆಗೆ ತುದಿಗಾಲಲ್ಲಿ ನಿಂತಿರುವುದು ವಿದ್ಯಾರ್ಥಿಗಳ ಬಗೆಗಿನ ನಿರ್ಲಕ್ಷ್ಯ ಧೋರಣೆ ತೋರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸದ್ಯಕ್ಕೆ ಪರೀಕ್ಷೆ ಮುಂದೂಡಬೇಕು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.