ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನಾಳೆ ಕರಾಳ ದಿನಾಚರಣೆಗೆ ಎಂಇಎಸ್‌ನಿಂದ ತಯಾರಿ

Published 31 ಅಕ್ಟೋಬರ್ 2023, 9:08 IST
Last Updated 31 ಅಕ್ಟೋಬರ್ 2023, 9:08 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ನ.1ರಂದು ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಣೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ತಯಾರಿ ನಡೆಸಿದೆ.

‘ಪ್ರತಿ ಬಾರಿಯಂತೆ ಈ ಬಾರಿಯೂ ಶಹಾಪುರದ ಸಂಭಾಜಿ ಉದ್ಯಾನದಿಂದ ರೈಲ್ವೆ ಮೇಲ್ಸೇತುವೆ ಬಳಿಯ ಮರಾಠಾ ಮಂದಿರ ಕಾರ್ಯಾಲಯದವರೆಗೆ ಮೆರವಣಿಗೆ ನಡೆಸುತ್ತೇವೆ. ನಂತರ ಸಭೆ ನಡೆಸಿ, ನಮ್ಮ ಹಕ್ಕೊತ್ತಾಯ ಈಡೇರಿಸುವಂತೆ ಒತ್ತಾಯಿಸುತ್ತೇವೆ’ ಎಂದು ಎಂಇಎಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಡವಿರೋಧಿ ಚಟುವಟಿಕೆ ಕೈಗೊಳ್ಳುವ ಎಂಇಎಸ್‌ಗೆ, ‘ಈ ಬಾರಿ ಕರಾಳ ದಿನಾಚರಣೆಗೆ ಅನುಮತಿ ಕೊಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ಕೊಟ್ಟಿದ್ದರು. ಇದನ್ನು ಧಿಕ್ಕರಿಸಿ ಆಚರಣೆಗೆ ತಯಾರಿ ಮಾಡಿಕೊಳ್ಳಲಾಗಿದೆ.

ಕಾನೂನು ಕ್ರಮ: ಸಿದ್ದರಾಮಪ್ಪ

‘ಕರಾಳ ದಿನಾಚರಣೆಗೆ ಅನುಮತಿ ಕೋರಿ ಎಂಇಎಸ್‌ನವರು ಜಿಲ್ಲಾಧಿಕಾರಿ ಮತ್ತು ನನಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದರು. ನಾವೂ ಅನುಮತಿ ಕೊಟ್ಟಿಲ್ಲ. ಆದರೂ, ಕರಾಳ ದಿನ ಆಚರಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಮಹಾರಾಷ್ಟ್ರದ ಮೂವರು ಸಚಿವರು ಹಾಗೂ ಒಬ್ಬ ಸಂಸದ ಬೆಳಗಾವಿಗೆ ಬಂದರೆ, ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆಯಿತ್ತು. ಹಾಗಾಗಿ ನಾಲ್ವರಿಗೂ ನಿರ್ಬಂಧ ಹೇರಿ, ಆದೇಶ ಹೊರಡಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

‘ಮಹಾರಾಷ್ಟ್ರದ ನಾಯಕರು ಕಳ್ಳದಾರಿ ಮೂಲಕ ಬೆಳಗಾವಿಗೆ ಬರುವುದನ್ನು ತಡೆಯಲು ಜಿಲ್ಲೆಯ ಗಡಿಗಳಲ್ಲಿ 15 ಚೆಕ್‌ಪೋಸ್ಟ್‌ ನಿರ್ಮಿಸಿದ್ದೇವೆ. ಅಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳದೇದ ಹೇಳಿದರು.

‘ಮಹಾರಾಷ್ಟ್ರದ ಉಸ್ಮಾನಾಬಾದ್‌ನಲ್ಲಿ ಕರ್ನಾಟಕದ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಯೊಂದಿಗೆ ಚರ್ಚಿಸಿದ್ದೇವೆ. ಕರ್ನಾಟಕದಿಂದ ಅಲ್ಲಿಗೆ ಬಸ್‌ ಸಂಚಾರವನ್ನೂ ತಡೆದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT