ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನದಾತ ಗೌರವಕ್ಕೆ ಚ್ಯುತಿ ಬಾರದಿರಲಿ’

ಎರಡು ದಿನಗಳ ಸಾವಯವ– ಸಿರಿಧಾನ್ಯ ಮೇಳಕ್ಕೆ ಚಾಲನೆ
Last Updated 25 ಜನವರಿ 2020, 12:03 IST
ಅಕ್ಷರ ಗಾತ್ರ

ಬೆಳಗಾವಿ: ‘ಇಡೀ ವಿಶ್ವ ನಮಗೆ ‘ಅನ್ನದಾತ’ ಎಂದು ಬಹಳ ಗೌರವ ಕೊಡುತ್ತದೆ. ಇದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳೋಣ. ದುಡ್ಡಿನ ಆಸೆಗಾಗಿ ರಾಸಾಯನಿಕ ಬಳಸಿ, ವಿಷಯುಕ್ತ ಬೆಳೆ ಬೆಳೆಯುವುದು ಬೇಡ’ ಎಂದು ಕೃಷಿ ಸಚಿವ ಲಕ್ಷ್ಮಣ ಸವದಿ ರೈತರಿಗೆ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ, ಕೃಷಿಕ ಸಮಾಜ, ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ನಗರದ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ-ಸಿರಿಧಾನ್ಯ ಮೇಳ ಹಾಗೂ 62ನೇ ಫಲಪುಷ್ಪ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವರು ರಾತ್ರಿ, ಬೆಳಗಾಗುವುದರಲ್ಲಿ ಶ್ರೀಮಂತರಾಗಲು ಬಯಸುತ್ತಾರೆ. ಟಾಟಾ, ಬಿರ್ಲಾ ಅವರಂತೆ ಶ್ರೀಮಂತರಾಗಲು ಹಾತೊರೆಯುತ್ತಿದ್ದಾರೆ. ಅದಕ್ಕಾಗಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕವನ್ನು ವಿಪರೀತವಾಗಿ ಬಳಸುತ್ತಿದ್ದಾರೆ. ಈ ರೀತಿ ಬೆಳೆದ ಬೆಳೆಯಲ್ಲಿ ರಾಸಾಯನಿಕ ಅಂಶಗಳು ಸೇರಿ, ಮನುಷ್ಯರ ಆರೋಗ್ಯವನ್ನು ಕೆಡಿಸುತ್ತಿವೆ. ಮತ್ತೊಂದೆಡೆ, ಭೂಮಿಯ ಫಲವತ್ತತೆಯೂ ನಾಶವಾಗುತ್ತಿದೆ’ ಎಂದು ನೊಂದು ನುಡಿದರು.

‘ಸಾವಯವ ರೀತಿಯಲ್ಲಿ ಕೃಷಿ ಮಾಡಿದರೆ, ಫಸಲು ಕಡಿಮೆ ಪ್ರಮಾಣ ಬರಬಹುದು. ಆದರೆ, ಇದು ಆರೋಗ್ಯಕರವಾಗಿರುತ್ತದೆ. ಇದನ್ನು ನಾಲ್ಕು ಪಟ್ಟು ಹೆಚ್ಚಿನ ದರ ನೀಡಿ ಜನರು ಖರೀದಿಸುತ್ತಾರೆ. ಹೀಗಾಗಿ ರೈತರು ನಿರಾಶರಾಗುವುದು ಬೇಡ. ಸಾವಯವ ಕೃಷಿಯ ಕಡೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ಕಲುಷಿತ ಆಹಾರವನ್ನು ರೈತರು ಬೆಳೆಯಬಾರದು. ವ್ಯಾಪಾರಸ್ಥರು ಮಾರಾಟ ಮಾಡಬಾರದು’ ಎಂದು ಮನವಿ ಮಾಡಿದರು.

‘ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒತ್ತು ನೀಡಿವೆ. ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆಯುವುದರ ಜತೆಗೆ ಅವುಗಳ ಸಂಗ್ರಹಣೆ, ಪ್ಯಾಕಿಂಗ್ ಘಟಕ ಸ್ಥಾಪನೆಗೆ ಸರ್ಕಾರ ₹ 10 ಲಕ್ಷ ಧನಸಹಾಯ‌ ನೀಡುತ್ತಿದ್ದು, ರೈತ ಸಮುದಾಯ ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ‘ರೈಲು, ವಿಮಾನ ಸೇರಿದಂತೆ ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ವಿಶೇಷ ಆ್ಯಪ್ ಬಿಡುಗಡೆ

ತೋಟಗಾರಿಕೆ ಬೆಳೆಗಾರರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡುವ ವಿಶೇಷ ಆ್ಯಪ್ ಅನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಸಾಧಕ ಕೃಷಿಕರನ್ನು ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಫ್.ದೊಡ್ಡಗೌಡರ, ಸಾವಯವ ಕೃಷಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ತುಬಚಿ, ತೋಟಗಾರಿಕೆ ಸಂಘದ ಅಧ್ಯಕ್ಷ ಪ್ರಕಾಶ ಪಾಟೀಲ, ಕೃಷಿ ಇಲಾಖೆಯ ಅಪರ ನಿರ್ದೇಶಕರು ಡಾ.ವಿ.ಜೆ.ಪಾಟೀಲ, ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಹಾಗೂ ವಿವಿಧ ಜಿಲ್ಲೆಗಳ ಕೃಷಿಕ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ಉಪನಿರ್ದೇಶಕ ಡಾ.ಎಚ್.ಡಿ.ಕೋಳೇಕರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT