ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಉಲ್ಲಂಘಿಸಿದರೆ ಪ್ರಕರಣ: ಸಚಿವ ಗೋವಿಂದ ಕಾರಜೋಳ

Last Updated 6 ಮೇ 2021, 13:54 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆಮ್ಲಜನಕ ಲಭ್ಯತೆ ಬಗ್ಗೆ ನಿರಂತರ ನಿಗಾ ವಹಿಸಬೇಕು. ಯಾವ ಆಸ್ಪತ್ರೆಗಳಲ್ಲೂ ಕೊರತೆ ಆಗಬಾರದು. ವೈದ್ಯರು ಸ್ವತಃ ಕೋವಿಡ್ ವಾರ್ಡ್‌ಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ನಿರ್ದೇಶನ ನೀಡಿದರು.

ಹೆಚ್ಚಳಕ್ಕೆ ಆತಂಕ

ಗೋಕಾಕ, ಸವದತ್ತಿ, ಬೆಳಗಾವಿ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಸೋಂಕಿನ‌ ಪ್ರಮಾಣ ದಿಢೀರ್ ಹೆಚ್ಚಾಗಿದ್ದಕ್ಕೆ ಆತಂಕ ವ್ಯಕ್ತಪಡಿಸಿದ ಸಚಿವರು, ‘ಕಠಿಣ ಕ್ರಮ ವಹಿಸಬೇಕು. ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಿದರೆ ಮಂಜೂರಾತಿ ಕೊಡಿಸಲಾಗುವುದು. ಒಎನ್‌ಜಿಸಿ ಆಮ್ಲಜನಕ ಘಟಕವನ್ನು ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ಸ್ಥಾಪಿಸಲು ಕೋರಲಾಗಿದೆ’ ಎಂದರು.

‘ಸಕ್ಕರೆ ಕಾರ್ಖಾನೆಗಳ ಆಮ್ಲಜನಕ ಸಿಲಿಂಡರ್‌ಗಳನ್ನು ಸದ್ಯಕ್ಕೆ ಪಡೆದು ಸೋಂಕಿತರ ಚಿಕಿತ್ಸೆಗೆ ಕಲ್ಪಿಸಬೇಕು. ಕೆಲವು ದಿನಗಳಲ್ಲಿ ರೆಮ್‌ಡಿಸಿವಿರ್ ಇಲ್ಲೇ ಉತ್ಪಾದನೆ ಆಗಲಿದ್ದು, ಕೊರತೆ ನೀಗಲಿದೆ’ ಎಂದು ಹೇಳಿದರು.

ಸಚಿವ ಉಮೇಶ ಕತ್ತಿ, ‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಹಂಚಿಕೆಗೆ ಸಮಿತಿ ರಚಿಸಬೇಕು’ ಎಂದು ತಿಳಿಸಿದರು.

ಫಾರ್ಮಾಸಿಸ್ಟ್‌ ವಿರುದ್ಧ ಕ್ರಮ

ಶಾಸಕ ಅಭಯ ಪಾಟೀಲ, ‘ಬಿಮ್ಸ್‌ನಲ್ಲಿ 850 ಆಮ್ಲಜನಕ ಹಾಸಿಗೆಗಳಿವೆ. ಅವುಗಳಿಗೆ ಸಮರ್ಪಕ ಪೂರೈಕೆಗೆ ವ್ಯವಸ್ಥೆ ಮಾಡಿದರೆ ಸಮಸ್ಯೆ ಪರಿಹರಿಸಬಹುದು. ಅಲ್ಲಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರೆ ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರು ಕೂಡ ಕೋವಿಡ್ ವಾರ್ಡ್‌ಗಳಿಗೆ ಹೋಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

ಶಾಸಕರ ದೂರಿಗೆ ಸ್ಪಂದಿಸಿದ ಸಚಿವರು, ‘ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಫಾರ್ಮಾಸಿಸ್ಟ್ ಅನ್ನು ಬಿಡುಗಡೆ ಮಾಡಬೇಕು’ ಎಂದು ಆದೇಶಿಸಿದರು.

ಶೇ 20ರಷ್ಟಿದೆ

‘ಆಂಬುಲೆನ್ಸ್‌ಗೆ ಸಾವಿರಾರು ರೂಪಾಯಿಯನ್ನು ಅಕ್ರಮವಾಗಿ ಪಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಶಾಸಕ ಅನಿಲ ಬೆನಕೆ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಸೋಂಕಿನ‌ ಪ್ರಮಾಣ ಸದ್ಯಕ್ಕೆ ಸರಾಸರಿ ಶೇ.20ರಷ್ಟಿದೆ. ಸೋಮವಾರದಿಂದ 36 ಗಂಟೆಗಳಲ್ಲಿ ಪರೀಕ್ಷಾ ವರದಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ಹೇಳಿದರು.

‘ಹೊಸದಾಗಿ 500 ಲೀಟರ್ ಆಮ್ಲಜನಕ ಸಂಗ್ರಹ ಸಾಮರ್ಥ್ಯದ ಘಟಕವನ್ನು ಬಿಮ್ಸ್ ಆವರಣದಲ್ಲಿ ಸ್ಥಾಪಿಸಲು ಮಂಜೂರಾತಿ ದೊರೆತಿದ್ದು, 20 ದಿನಗಳಲ್ಲಿ ಕಾರ್ಯಾರಂಭಿಸಲಿದೆ’ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ತಿಳಿಸಿದರು.

ಸಂಸದೆ ಮಂಗಲಾ ಸುರೇಶ ಅಂಗಡಿ, ಶಾಸಕ ಮಹಾಂತೇಶ ದೊಡ್ಡಗೌಡರ ಸಲಹೆ ನೀಡಿದರು. ಐಜಿಪಿ‌ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT