ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಎಫ್‌ಆರ್‌ಪಿ ಪ್ರಕಾರ ದರ ಕೊಡಿ: ಸಚಿವ ಶಿವಾನಂದ ಪಾಟೀಲ

Published 9 ಅಕ್ಟೋಬರ್ 2023, 11:38 IST
Last Updated 9 ಅಕ್ಟೋಬರ್ 2023, 11:38 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇಂದ್ರ ಸರ್ಕಾರವು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಘೋಷಿಸಿದೆ. ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಅದರಂತೆ ದರ ನೀಡಬೇಕು’ ಎಂದು ಸಕ್ಕರೆ, ಸಹಕಾರ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

‘ಸಕ್ಕರೆ ಕಾರ್ಖಾನೆಗಳ ಜೊತೆ ಸಭೆ ನಡೆಸಿ, ನಿಗದಿತ ದಿನಾಂಕದಂತೆ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದೇವೆ. ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಲು, ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದ ತೂಕದ ಮಾಪಕ ಅಳವಡಿಸಲಿದ್ದೇವೆ. ಮುಂದಿನ ವರ್ಷ ಇದು ಸಾಕಾರವಾಗಲಿದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಈ ಸಲದ ಬರಗಾಲ ದೇಶದ ದಕ್ಷಿಣ ಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕಬ್ಬಿನ ಇಳುವರಿ ಶೇ 30ರಿಂದ 40ರಷ್ಟು ಕುಸಿಯುವ ಭೀತಿಯಿದೆ. ರೈತರಿಗೆ ಉತ್ತಮ ದರ ನೀಡುತ್ತಿದ್ದ ಸಕ್ಕರೆಯ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಈ ನಿಷೇಧ ಹಿಂಪಡೆಯಬೇಕು’ ಎಂದರು.

‘ಹೆಚ್ಚಿನ ಬಡ್ಡಿದರದ ಕಾರಣಕ್ಕೆ, ಸಹಕಾರಿ ಸಂಘಗಳು ಮತ್ತು ಅರ್ಬನ್ ಬ್ಯಾಂಕ್‌ಗಳಲ್ಲಿ ಜನ ಹೆಚ್ಚಿನ ಠೇವಣಿ ಇರಿಸಿದ್ದಾರೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಿಂದ (ನಬಾರ್ಡ್) ಜಿಲ್ಲಾ ಕೇಂದ್ರ ಸಹಕಾರಿ(ಡಿಸಿಸಿ) ಬ್ಯಾಂಕ್‌ಗೆ ರಿಯಾಯಿತಿ ದರದಲ್ಲಿ ಸಾಲ ನೀಡುವಲ್ಲಿ ಮೂರು ತಿಂಗಳು ವಿಳಂಬವಾಗಿದೆ. ಈಗ ಡಿಸಿಸಿ ಬ್ಯಾಂಕ್‌ಗಳೂ ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವ ಸ್ಥಿತಿಯಲ್ಲಿಲ್ಲ. ಡಿಸಿಸಿ ಬ್ಯಾಂಕ್‌ಗಳಿಗೆ ತ್ವರಿತವಾಗಿ ಸಾಲ ಕೊಡುವಂತೆ ನಬಾರ್ಡ್‌ಗೆ ನಿರ್ದೇಶನ ಕೊಡುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಶೀಘ್ರ ಪತ್ರ ಬರೆಯುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT