ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲಿಸದವರು ತಮ್ಮಿಷ್ಟದ ದೇಶಕ್ಕೆ ಹೋಗಬಹುದು: ಅಭಯ ಪಾಟೀಲ

Last Updated 9 ಏಪ್ರಿಲ್ 2022, 14:15 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿ ಸಂವಿಧಾನದ ಪ್ರಕಾರ ರೂಪಿಸಿರುವ ನಿಯಮಗಳನ್ನು ಪಾಲಿಸಲು ಆಗದವರು ಇಲ್ಲಿರಲು ಯೋಗ್ಯರಲ್ಲ. ಅವರು ತಮಗಿಷ್ಟದ ದೇಶಕ್ಕೆ ಹೋಗಬಹುದು’ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.

ನಗರಪಾಲಿಕೆಯಿಂದ ಖರೀದಿಸಿರುವ ಕಸ ಗುಡಿಸುವ ಅತ್ಯಾಧುನಿಕ ಯಂತ್ರವನ್ನು ಇಲ್ಲಿನ ಗೋವಾವೇಶ್ ಬಸವೇಶ್ವರ ವೃತ್ತದ ತಿನಿಸುಕಟ್ಟೆಯ ಬಳಿ ಶನಿವಾರ ಸಮರ್ಪಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಕೆಲವರು ನ್ಯಾಯಾಲಯದ ಆದೇಶ ಒಪ್ಪದೆ ಶಾಲಾ–ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬರುತ್ತೇವೆ ಎನ್ನುತ್ತಿದ್ದಾರೆ. ಬೆಳಿಗ್ಗೆ 4ಕ್ಕೇ ಮಸೀದಿಗಳಲ್ಲಿ ಧ್ವನಿವರ್ಧಕವನ್ನು ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ನ್ಯಾಯಾಲಯಕ್ಕೆ ಮಾಡುವ ಅಪಮಾನವಲ್ಲದೆ ಮತ್ತೇನು?’ ಎಂದು ಕೇಳಿದರು.

‘ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧವನ್ನು ಹಾಕಲಾಗುತ್ತಿರುವುದೇಕೆ ಎನ್ನುವುದನ್ನು ಗಂಭೀರವಾಗಿ ಯೋಚಿಸಬೇಕು’ ಎಂದರು.

‘ಹಿಬಾಜ್ ವಿಷಯದಲ್ಲಿ ನ್ಯಾಯಾಲಯದ ತೀರ್ಪು ಖಂಡಿಸಿ ಮುಸ್ಲಿಮರು ಅಂಗಡಿಗಳನ್ನು ಬಂದ್ ಮಾಡಿದ್ದರು. ನಾವು ಈ ದೇಶದಲ್ಲಿ ಇರಲು ಅರ್ಹರಲ್ಲ; ನಮ್ಮನ್ನು ನೀವಾಗಿಯೇ ಕಳುಹಿಸಿ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಅವರನ್ನು ಅಲ್‍ಖೈದಾ ಸಂಘಟನೆಯವರು ಸಂಪರ್ಕಿಸಿರುವುದು ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ. ಅವರ ಜಾಲ ಎಷ್ಟಿದೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಬಹುದು. ನ್ಯಾಯಾಲಯದ ಆದೇಶ ಬಂದ ಮೇಲೂ ಹಿಜಾಬ್ ಧರಿಸಿ ಬರುತ್ತೇವೆ ಎನ್ನುವ ಸಮಾಜದ ಕುರಿತು ಎಲ್ಲರೂ ಚಿಂತಿಸಬೇಕು. ಇದೆಲ್ಲವೂ ದೇಶಕ್ಕೆ ಒಳಿತಿನ ವಾತಾವರಣವಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಅರ್‌ಎಸ್‌ಎಸ್‌ ಬಗ್ಗೆ ಕೀಳಾಗಿ ಮಾತನಾಡುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಿ’ ಎಂದು ಟೀಕಿಸಿದರು. ‘ಆರ್‌ಎಸ್‌ಎಸ್‌ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಮಾಹಿತಿ ಇಲ್ಲ. ತಿಳಿದಿದ್ದರೆ ಹಗುರವಾಗಿ ಮಾತನಾಡುತ್ತಿರಲಿಲ್ಲ’ ಎಂದು ತಿರುಗೇಟು ನೀಡಿದರು.

ಇಲ್ಲಿರಲು ಹಕ್ಕಿಲ್ಲ

ದೇಶದ ಸಂವಿಧಾನ ಪಾಲಿಸದವರಿಗೆ ಇಲ್ಲಿರುವ ಹಕ್ಕಿಲ್ಲ. ಇರಬೇಕೆಂದಾದರೆ ಸಂವಿಧಾನ ಪಾಲನೆ ಮಾಡಲೇಬೇಕು.

– ಅಭಯ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT