ಮಂಗಳವಾರ, ಆಗಸ್ಟ್ 20, 2019
27 °C

ಶಾಸಕ ಕುಮಠಳ್ಳಿ ಹುಡುಕಿಕೊಡಿ: ಪೊಲೀಸರಿಗೆ ಕಾಂಗ್ರೆಸ್‌ ಕಾರ್ಯಕರ್ತರ ದೂರು

Published:
Updated:
Prajavani

ಅಥಣಿ: ‘ಅಥಣಿ ಮತ ಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಕಾಣೆಯಾಗಿದ್ದು, ಅವರನ್ನು ಪತ್ತೆ ಹಚ್ಚಿಕೊಡಬೇಕು’ ಎಂದು ಕೋರಿ ಕಾಂಗ್ರೆಸ್ ಮುಖಂಡರು ಪಿಎಸ್ಐ ಯು.ಟಿ. ಅವಟಿಗೆ ಬುಧವಾರ ದೂರು ಸಲ್ಲಿಸಿದರು.

ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ‘ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಮಾಡಬೇಕಾದ ಅಭಿವೃದ್ಧಿ ಕಾಮಗಾರಿಗಳು ಬಹಳಷ್ಟಿವೆ. ಇದಕ್ಕೆ ಆದ್ಯತೆ ಕೊಡುವುದು ಬಿಟ್ಟು ಕ್ಷೇತ್ರದ ಜನರ‍್ಯಾರಿಗೂ ಸಿಗದೇ ತಲೆಮರೆಸಿಕೊಂಡಿದ್ದಾರೆ. ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಹೀಗಾಗಿ, ಅವರನ್ನು ಹುಡುಕಿಕೊಡಬೇಕು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದ್ದೇವೆ. ಹಲವು ದಿನಗಳಿಂದ ಇಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಶಾಸಕರು ಕ್ಷೇತ್ರದ ಕಡೆಗೆ ಗಮನಹರಿಸಿಲ್ಲ’ ಎಂದು ದೂರಿದರು.

‍ಪಕ್ಷದ ಮುಖಂಡ ಸುನೀಲ ಸಂಕ ಮಾತನಾಡಿ, ‘ತಾಲ್ಲೂಕಿನಲ್ಲಿ ಬರಗಾಲ ತಾಂಡವವಾಡುತ್ತಿದೆ. ಶಾಸಕರು ತಿಂಗಳಿನಿಂದ ಕಣ್ಮರೆಯಾಗಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸದೇ ಎಲ್ಲಿಗೋ ಹೋಗಿದ್ದಾರೆ. ಹೀಗಾಗಿ, ಪೊಲೀಸರ ಸಹಾಯ ಕೋರಿದ್ದೇವೆ’ ಎಂದರು.

ಮುಖಂಡರಾದ ರಮೇಶ ಸಿಂದಗಿ, ಸತ್ಯಪ್ಪ ಬಾಗೆನ್ನವರ, ಅರ್ಷದ ಗದ್ಯಾಳ, ಸಿದ್ದಾರ್ಥ ಶಿಂಗೆ, ಶಬ್ಬೀರ ಸಾತಬಚ್ಚೆ ಇದ್ದರು.

Post Comments (+)