ಮಂಗಳವಾರ, ಆಗಸ್ಟ್ 16, 2022
20 °C
‌ದೇವಸ್ಥಾನ ಜಮೀನು ವಿವಾದ l 20 ವಾಹನಗಳಿಗೆ ಬೆಂಕಿ

‌ದೇವಸ್ಥಾನ ಜಮೀನು ವಿವಾದದಲ್ಲಿ ವ್ಯಕ್ತಿ ಹತ್ಯೆ: ಬೆಳಗಾವಿಯ ಗೌಂಡವಾಡ ಉದ್ವಿಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌಂಡವಾಡ (ಬೆಳಗಾವಿ ತಾ.): ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗೌಂಡವಾಡ ಗ್ರಾಮದಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಇನ್ನೊಂದು ಗುಂಪು 20 ವಾಹನಗಳು ಹಾಗೂ ಮೂರು ಬಣವೆಗಳಿಗೆ ಬೆಂಕಿ ಹಚ್ಚಿದೆ. ಇಡೀ ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ನಿವಾಸಿ ಸತೀಶ ಪಾಟೀಲ (37) ಕೊಲೆಯಾದವರು. ಈ ಸಂಬಂಧ ಏಳು ಆರೋಪಿಗಳು ಹಾಗೂ ಗಲಭೆಗೆ ಸಂಬಂಧಿಸಿ 19 ಜನರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. 

ಗೌಂಡವಾಡದ ಕಾಲಭೈರವನಾಥ, ಲಕ್ಷ್ಮಿ, ಬಸವಣ್ಣ ದೇಗುಲಗಳಿಗೆ ಸೇರಿದೆ ಎನ್ನಲಾದ 27 ಎಕರೆ ಜಮೀನು ಇದೆ. ಇದನ್ನು ಕೆಲವರಿಗೆ ಉಳುಮೆಗೆ ನೀಡಿದ್ದು, ಹಲವು ವರ್ಷಗಳ ಹಿಂದೆಯೇ ಅವರು ತಮ್ಮ ಹೆಸರಿಗೆ ಜಮೀನು ಮಾಡಿಕೊಂಡಿದ್ದರು. ಒತ್ತುವರಿ ತೆರವು ಕೋರಿ ಸತೀಶ (ಕೊಲೆಯಾದವರು) ದಾವೆ ಹೂಡಿದ್ದರು. ಇದೇ 21ರಂದು(ಮಂಗಳವಾರ) ಕೋರ್ಟ್‌ನಲ್ಲಿ ಇದರ ವಿಚಾರಣೆ ನಿಗದಿಯಾಗಿದೆ.

ಶನಿವಾರ ರಾತ್ರಿ ದೇವಸ್ಥಾನದ ಪಕ್ಕದಲ್ಲಿ ಕಾರ್‌ ಪಾರ್ಕಿಂಗ್‌ ಕುರಿತು ಸತೀಶ ಹಾಗೂ ವಿರೋಧಿ ಗುಂಪಿನ ಕೆಲವರ ಮಧ್ಯೆ ಜಗಳ ನಡೆಯಿತು. ತಡರಾತ್ರಿ ವಿಕೋಪಕ್ಕೆ ತಿರುಗಿ 200ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಸೇರಿದ್ದರು. ಅವರಲ್ಲಿ ಕೆಲವರು ಮಾರಕಾಸ್ತ್ರಗಳಿಂದ ಸತೀಶ ಅವರನ್ನು ಕೊಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ರೋಸಿಹೋದ ಇನ್ನೊಂದು ಗುಂಪಿನವರು ವಾಹನಗಳಿಗೆ ಬೆಂಕಿ ಹಚ್ಚಿದರು. ಮನೆಗಳ ಮೇಲೆ ಕಲ್ಲು ತೂರಿದರು. ಬಣವೆಗಳಿಗೂ ಬೆಂಕಿ ಇಟ್ಟಿದ್ದಾರೆ. ಬಹುತೇಕ ಬೀದಿಗಳಲ್ಲಿ ವಾಹನಗಳು ಹೊತ್ತಿ ಉರಿದವು.

ಬಂದೋಬಸ್ತ್‌: ತಡರಾತ್ರಿಯೇ ಗ್ರಾಮಕ್ಕೆ ಧಾವಿಸಿದ 200ಕ್ಕೂ ಹೆಚ್ಚು ಪೊಲೀಸರು ಜನರನ್ನು ಚದುರಿಸಿದ್ದರು. 40 ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಭಾನುವಾರ ನಸುಕಿನ 2ಗಂಟೆವರೆಗೆ ಕಾರ್ಯಾಚರಣೆ ನಡೆಯಿತು ಕೆಎಲ್‌ಇಎಸ್‌ ಆಸ್ಪತ್ರೆಯಿಂದ ಸತೀಶ ಅವರ ಶವವನ್ನು ಸಂಜೆ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಗ್ರಾಮದಲ್ಲಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ. ಘಟನೆಯಲ್ಲಿ ಯಾರ ಪಾತ್ರ ಏನು ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಕಮಿಷನರ್‌
ಡಾ.ಎಂ.ಬಿ. ಬೋರಲಿಂಗಯ್ಯ ಅವರು ತಿಳಿಸಿದರು.

***

ಗೌಂಡವಾಡ ಘಟನೆ ಚಿಕ್ಕ ಗಲಾಟೆ. ದೇವಸ್ಥಾನದ ಜಾಗದ ವಿಚಾರದಲ್ಲಿ ಜಗಳ ನಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು