ಶನಿವಾರ, ಜುಲೈ 2, 2022
25 °C
ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ಪರಿಶೀಲಿಸಿದ ಅತೀಕ್

‘ಮೈ ಬೆಳಗಾವಿ’ ಆ್ಯಪ್: ಹೆಚ್ಚು ಸೇವೆ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮೈ ಬೆಳಗಾವಿ’ ‌‌‌ಆ್ಯಪ್‌ ಮೂಲಕ ಜನರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಬೇಕು. ಇದರಿಂದ ತ್ವರಿತವಾಗಿ ಸ್ಪಂದನೆ ಪಡೆಯಲು ಸಾಧ್ಯವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್‌.ಕೆ. ಅತೀಕ್ ತಿಳಿಸಿದರು.

ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ಉಪಯೋಗವಾಗುವ ಅನೇಕ ಮಾಹಿತಿಯು ಈ ಆ್ಯಪ್‌ನಲ್ಲಿದೆ. ಇದರೊಂದಿಗೆ ಸುಲಭವಾಗಿ ದೊರೆಯುವಂತೆ ಇನ್ನಷ್ಟನ್ನು ಒದಗಿಸಬೇಕು’ ಎಂದರು.

‘ಆ್ಯಪ್‌ನಲ್ಲಿ ಸಾರ್ವಜನಿಕ ಕುಂದುಕೊರತೆ ನಿರ್ವಹಣೆ, ನಾಗರಿಕರಿಗೆ ಸಿಟಿ ಬಸ್ ವೇಳಾಪಟ್ಟಿ ಮಾಹಿತಿ, ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಗಳು ಮೊದಲಾದ ಮಾಹಿತಿ ತಿಳಿಯಬಹುದು’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಬಾಗೇವಾಡಿ ತಿಳಿಸಿದರು.

‘ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಮೊಬೈಲ್‌ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಮೀಪದ ಹತ್ತಿರದ ಬಸ್ ನಿಲ್ದಾಣ, ನಗರದಲ್ಲಿ ಬಸ್‌ಗಳು ಎಲ್ಲಿ ಸಂಚರಿಸುತ್ತಿವೆ ಎನ್ನುವುದನ್ನು ಆ್ಯಪ್‌ನಲ್ಲಿಯೇ ಕುಳಿತಲ್ಲಿಂದಲೇ ನಾಗರಿಕರು ಪಡೆಯಬಹುದಾಗಿದೆ. ಅದನ್ನು ಆಧರಿಸಿ ಸಾರಿಗೆ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ’ ಎಂದು ಮಾಹಿತಿ ನೀಡಿದರು.

‘ಕೆಲವು ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ನೀಡಲಾಗಿದೆ. ಅವುಗಳನ್ನು ಮೊಬೈಲ್ ಅಪ್ಲಿಕೇಷನ್‌ನಿಂದ ಪತ್ತೆ ಮಾಡಬಹುದು. ಆ್ಯಪ್‌ ಬಳಸಿಕೊಂಡು ಯಾವುದೇ ತುರ್ತು ಸಂದರ್ಭದಲ್ಲಿ ನಾಗರಿಕರು ನೇರವಾಗಿ ಹತ್ತಿರದ ಆಂಬುಲೆನ್ಸ್‌ ಮತ್ತು ಅಗ್ನಿಶಾಮಕ ದಳದವರಿಗೆ ಕರೆ ಮಾಡಬಹುದು’ ಎಂದು ವಿವರಿಸಿದರು.

‘ದೂರುಗಳನ್ನು ದಾಖಲಿಸಿ, ನಾಗರಿಕರು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಕಂಡುಕೊಳ್ಳಬಹುದಾಗಿದೆ. ನಗರದ ಮಾಹಿತಿ, ನಗರ ಸಂಪರ್ಕಗಳು, ಘಟನೆಗಳು, ಸುದ್ದಿ, ಪ್ರಕಟಣೆ ಮತ್ತು ಸರ್ಕಾರಿ ಸೇವೆಯ ಮಾಹಿತಿಯನ್ನೂ ಒಳಗೊಂಡಿದೆ. ಈವರೆಗೆ ಗೂಗಲ್ ಪ್ಲೇ ಸ್ಟೋರ್ ಮೂಲಕ 27ಸಾವಿರ ಡೌನ್‌ಲೋಡ್ ಆಗಿದೆ’ ಎಂದು ತಿಳಿಸಿದರು.

ಬಳಿಕ ಅತೀಕ್ ಅವರು ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರ ಬಸ್‌ ನಿಲ್ದಾಣ, ಕಲಾಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಡಿಸೆಂಬರ್ ಒಳಗೆ  ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.