ನಾಡಹಬ್ಬ ಉತ್ಸವ ಅ.11ರಿಂದ, ಭುವನೇಶ್ವರಿ ಆರಾಧನೆ, ವಿಶೇಷ ಉಪನ್ಯಾಸ

7

ನಾಡಹಬ್ಬ ಉತ್ಸವ ಅ.11ರಿಂದ, ಭುವನೇಶ್ವರಿ ಆರಾಧನೆ, ವಿಶೇಷ ಉಪನ್ಯಾಸ

Published:
Updated:

ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಅ. 11ರಿಂದ ಅ. 15ರವರೆಗೆ ನಿತ್ಯ ಸಂಜೆ 6ಕ್ಕೆ 91ನೇ ನಾಡಹಬ್ಬ ಉತ್ಸವ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್‌.ಬಿ. ರಾಜಶೇಖರ ತಿಳಿಸಿದರು.

‘ಗಡಿಯಲ್ಲಿ ಕನ್ನಡ ಪ್ರಜ್ಞೆ ಜಾಗೃತಗೊಳಿಸುವ ಉದ್ದೇಶದಿಂದ ಸಾರ್ವಜನಿಕರೇ ಸೇರಿಕೊಂಡು ಆಯೋಜಿಸುತ್ತಿರುವ ಉತ್ಸವ ಇದಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘11ರಂದು ನಾಡದೇವಿ ಭುವನೇಶ್ವರಿ ಪ‍್ರತಿಮೆ ಪ್ರತಿಷ್ಠಾಪನೆಯೊಂದಿಗೆ ಉದ್ಘಾಟನೆ ನೆರವೇರಲಿದೆ. ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಉದ್ಘಾಟಿಸುವರು. ಸಂಸದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸುವರು. ಗಂದಿಗವಾಡದ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಉಪನ್ಯಾಸ ನೀಡುವರು’ ಎಂದು 12ರಂದು ‘ಕನ್ನಡ ಇಂಪು ಮತ್ತು ಕಂಪು’ ವಿಷಯದ ಕಾರ್ಯಕ್ರಮದಲ್ಲಿ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬರಹಗಾರ ಕೆ.ಪಿ. ಪುತ್ತುರಾಯ ಅತಿಥಿಯಾಗಿ ಪಾಲ್ಗೊಳ್ಳುವರು. ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಉದಯ ನಾಯ್ಕ ‘ಉಪಗ್ರಹಗಳು ಹಾಗೂ ರಡಾರ್‌’ ಕುರಿತು ಮಾತನಾಡುವರು. ಸಾಹಿತಿ ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸುವರು.

ವಲಸೆಯಿಂದಾಗುವ ಪರಿಣಾಮ

13ರಂದು ‘ನೆರೆ ರಾಷ್ಟ್ರಗಳ ವಲಸೆಯಿಂದ ಆಗುವ ಪರಿಣಾಮಗಳು’ ಕಾರ್ಯಕ್ರಮ ನಡೆಯಲಿದೆ. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಿಂತಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಘವೇಂದ್ರ ಸ್ವಾಮಿ ಮಠದ ವಿಜಯೀಂದ್ರ ಶರ್ಮಾ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಸಾಂಸ್ಕೃತಿಕ ಸಂಘಟಕ ಅರವಿಂದ ಪಾಟೀಲ, ಪ್ರೊ.ಎಂ.ಬಿ. ಕದರಿ ಅವರನ್ನು ಸತ್ಕರಿಸಲಾಗುವುದು.

14ರಂದು ‘ಪ್ರಕೃತಿ ವಿಕೋಪದ ಪರಿಣಾಮಗಳು’ ವಿಷಯದ ಬಗ್ಗೆ ಸಾಹಿತಿಗಳಾದ ಸಿ.ಕೆ. ನಾವಲಗಿ ಹಾಗೂ ಪಿ.ಬಿ. ಸ್ವಾಮಿ ಉಪನ್ಯಾಸ ನೀಡುವರು. ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆರ್‌ಸಿಯು ಕುಲಸಚಿವ ಪ್ರೊ.ರಂಗರಾಜ ವನದುರ್ಗ ಅಧ್ಯಕ್ಷತೆ ವಹಿಸುವರು.

ಕನ್ನಡ ಅಭಿವೃದ್ಧಿಗೆ ಇರುವ ಆತಂಕಗಳು:

15ರಂದು ‘ಕನ್ನಡ ಅಭಿವೃದ್ಧಿಗೆ ಇರುವ ಆತಂಕಗಳು’ ಕುರಿತು ಕಾರ್ಯಕ್ರಮವಿದೆ. ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮುಖ್ಯಅತಿಥಿಯಾಗಿ ಭಾಗವಹಿಸುವರು. ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಕ್ರೀಡಾಪಟುಗಳಾದ ಮಲಪ್ರಭಾ ಜಾಧವ್ ಹಾಗೂ ಶೀತಲ್‌ ಕೊಲ್ಲಾಪುರೆ ಅವರನ್ನು ಸತ್ಕರಿಸಲಾಗುವುದು’ ಎಂದು ವಿವರಿಸಿದರು.

ಸಮಿತಿಯ ಗೌರವ ಸಲಹೆಗಾರ ಸಿದ್ದನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿ.ಕೆ. ಜೋರಾಪುರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !