ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಗಣೇಶನಿಗೆ ಗುಂಡಿಗಳೇ ‘ವಿಘ್ನ’

ಸ್ಮಾರ್ಟ್‌ಸಿಟಿಯಲ್ಲೂ ಗಣಪನಿಗೆ ತಪ್ಪದ ‘ವಿಘ್ನ’, ನಗರದೆಲ್ಲೆಡೆ ಹಾಳಾದ ರಸ್ತೆಗಳು
Published 2 ಸೆಪ್ಟೆಂಬರ್ 2024, 4:21 IST
Last Updated 2 ಸೆಪ್ಟೆಂಬರ್ 2024, 4:21 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ‘ವಿಘ್ನ ನಿವಾರಕ’ನನ್ನು ಸ್ವಾಗತಿಸಲು ಜನರಷ್ಟೇ ಅಲ್ಲ; ಗುಂಡಿಗಳೂ ಸಜ್ಜಾಗಿವೆ.

ಮುಂಬೈ, ಪುಣೆ ಬಿಟ್ಟರೆ ಸಂಭ್ರಮದ ಚೌತಿ ವೀಕ್ಷಣೆಗೆ ಜನರು ಮುಖಮಾಡುವುದೇ ಬೆಳಗಾವಿಯತ್ತ. ಗಣೇಶೋತ್ಸವದಲ್ಲಿ ಇಲ್ಲಿ 11 ದಿನಗಳ ಕಾಲ ಸಡಗರವೇ ಮೈದಳೆಯುತ್ತದೆ. ನಗರ ಮತ್ತು ಉಪನಗರ ವ್ಯಾಪ್ತಿಯಲ್ಲಿ 370ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. 

ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಮೊದಲ ದಿನದಂದು ಮೆರವಣಿಗೆಯಲ್ಲಿ ಗಣೇಶನ ಮೂರ್ತಿ ತಂದು ಪ್ರತಿಷ್ಠಾಪಿಸುತ್ತಾರೆ. ವಿಸರ್ಜನಾ ಮೆರವಣಿಗೆಯೂ ಲಕ್ಷಾಂತರ ಜನರ ಸಮ್ಮುಖದಲ್ಲಿ ನೆರವೇರುತ್ತದೆ.

ಈ ಸಲ ಗಣೇಶನ ಹಬ್ಬಕ್ಕೆ ಐದೇ ದಿನ ಬಾಕಿ ಉಳಿದಿದೆ. ಆದರೆ, ಖಾನಾಪುರ ರಸ್ತೆ, ಹಳೇ ಪಿ.ಬಿ.ರಸ್ತೆ, ಗಾಂಧಿನಗರ, ಶಿವಾಜಿ ನಗರ, ವೀರಭದ್ರನಗರ, ಆಜಮ್‌ ನಗರ, ಶಾಹೂನಗರ, ಸಹ್ಯಾದ್ರಿನಗರ, ಸದಾಶಿವನಗರ, ಮಹಾಂತೇಶ ನಗರ ಹಾಗೂ ಕಣಬರಗಿ ಸೇರಿ ವಿವಿಧ ಮಾರ್ಗಗಳಲ್ಲಿ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಹದಗೆಟ್ಟಿರುವ ರಸ್ತೆಗಳು ಇನ್ನೂ ಸುಧಾರಣೆ ಕಂಡಿಲ್ಲ. ಇದರಿಂದಾಗಿ ಗಣೇಶನ ಮೂರ್ತಿ ಹೊತ್ತು ಸಾಗುವ ವಾಹನಗಳ ಸಂಚಾರಕ್ಕೆ ತೊಡಕಾಗುವ ಸಾಧ್ಯತೆಯಿದೆ.

‘ಗಣೇಶೋತ್ಸವಕ್ಕೆ ಎರಡು ವಾರ ಮುಂಚೆಯಿಂದಲೇ ಮಹಾನಗರ ಪಾಲಿಕೆಯು ರಸ್ತೆಗಳ ಸುಧಾರಣೆಯ ಸಿದ್ಧತೆ ಆರಂಭಿಸಬೇಕಿತ್ತು. ಗಣೇಶನ ಮೂರ್ತಿಗಳನ್ನು ಸಾಗಿಸುವ, ವೀಕ್ಷಣೆಗೆ ಬರುವ ಜನರು ಸಂಚರಿಸುವ ಎಲ್ಲ ಮಾರ್ಗಗಳಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಬೇಕಿತ್ತು. ಆದರೆ, ವಿವಿಧ ನೆಪವೊಡ್ಡಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಮೂರ್ತಿ ಸಾಗಣೆ ವೇಳೆ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ’ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಸಿಗದ ಸ್ಪಂದನೆ: ಗಣೇಶನ ಹಬ್ಬದ ಆಚರಣೆ ಕುರಿತು ಚರ್ಚಿಸಲು ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಮತ್ತು ಸಾರ್ವಜನಿಕರೊಂದಿಗೆ ಇತ್ತೀಚೆಗೆ ಸಭೆ ನಡೆಸಿತ್ತು.

‘ಹಬ್ಬದ ಪ್ರಯುಕ್ತ ನಗರದಲ್ಲಿ ಹಾಳಾದ ಸ್ಥಿತಿಯಲ್ಲಿನ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಬೇಕು’ ಎಂದು ಮಂಡಳಗಳ ಪ್ರಮುಖರು ಒತ್ತಾಯಿಸಿದ್ದರು. ಆದರೆ, ಆಡಳಿತ ಯಂತ್ರದಿಂದ ಈವರೆಗೂ ಸ್ಪಂದನೆ ಸಿಗದಿರುವುದು ಅವರ ನಿರಾಸೆಗೆ ಕಾರಣವಾಗಿದೆ.

ರಸ್ತೆಗಳ ಸುಧಾರಣೆಗೆ ಗುತ್ತಿಗೆದಾರರಿಗೆ ಸೂಚನೆ ಕೊಟ್ಟಿದ್ದೇವೆ. ಅನುದಾನವೂ ಇದೆ. ಆದರೆ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದೇವೆ

-ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ ಬೆಳಗಾವಿ

ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಪಾಯಕಾರಿ ವಿದ್ಯುತ್‌ ತಂತಿಗಳನ್ನು ಸರಿಪಡಿಸಬೇಕು

- ಜ್ಯೋತಿಬಾ ಪಾಟೀಲ ಅಧ್ಯಕ್ಷ ಸಾರ್ವಜನಿಕ ಗಣೇಶೋತ್ಸವ ಮಂಡಳ ಸದಾಶಿವ ನಗರ

ಖಾನಾಪುರ ಮಾರ್ಗದ ರಸ್ತೆ ಮೂಲಕ ಅನೇಕರು ನಮ್ಮೂರಿಗೆ ಗಣೇಶನ ಮೂರ್ತಿ ತರುತ್ತಾರೆ. ಆದರೆ ಮುಖ್ಯರಸ್ತೆಯೇ ಹದಗೆಟ್ಟಿದ್ದು ಸಂಚಾರಕ್ಕೆ ತೊಡಕಾಗಿದೆ

-ಕೇಶವ ಪೋಳ ಪೀರನವಾಡಿ ನಿವಾಸಿ

ಪಾಲಿಕೆಗೆ ಜನರ ಬಗ್ಗೆ ಕಳಕಳಿ ಇಲ್ಲ. ಹಬ್ಬ ಬಂದರೂ ರಸ್ತೆಗಳ ಸುಧಾರಣೆಗೆ ನಿಷ್ಕಾಳಜಿ ವಹಿಸಿದೆ. ಅನಾಹುತವಾದರೆ ಯಾರು ಹೊಣೆ

- ಪ್ರಮೋದ ಉಬಾಳೆ ಸ್ಥಳೀಯ ಶನಿವಾರ ಕೂಟ

ಕಾಮಗಾರಿಗೆ ಮಳೆ ಅಡ್ಡಿ

‘ಗಣೇಶನ ಹಬ್ಬಕ್ಕೆ ನಗರ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಸುಧಾರಿಸಬೇಕೆಂದು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ದುರಸ್ತಿ ಕಾರ್ಯ ಕೈಗೊಳ್ಳಲು ಗುತ್ತಿಗೆದಾರರೂ ಕಾತರವಾಗಿದ್ದಾರೆ. ನಿರಂತರ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಮಳೆಯಲ್ಲೇ ದುರಸ್ತಿ ಕೈಗೊಂಡರೆ ಮತ್ತೆ ಹಾಳಾಗುತ್ತದೆ. ಒಂದೆರಡು ದಿನಗಳಲ್ಲೇ ರಸ್ತೆ ಹಿಂದಿನ ಸ್ಥಿತಿಗೇ ಹೋಗುತ್ತದೆ’ ಎಂಬುದು ಅಧಿಕಾರಿಗಳ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT