ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲದತ್ತ ಭಕ್ತರ ಹೆಜ್ಜೆ...

ಯುಗಾದಿ ಹಿಂದಿನ ದಿನ ಮಲ್ಲಿಕಾರ್ಜುನ ದೇವರ ಸನ್ನಿಧಿ ತಲುಪಲಿರುವ ಯಾತ್ರಿಕರು
Published 2 ಏಪ್ರಿಲ್ 2024, 4:13 IST
Last Updated 2 ಏಪ್ರಿಲ್ 2024, 4:13 IST
ಅಕ್ಷರ ಗಾತ್ರ

ಮೂಡಲಗಿ: ಯುಗಾದಿ ಹಬ್ಬದಂದು ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳಲು ಮೂಡಲಗಿ, ಹಳ್ಳೂರ, ಗುರ್ಲಾಪುರ, ಮಸಗುಪ್ಪಿ, ತಿಗಡಿ, ಶಿವಾಪುರ, ಖಾನಟ್ಟಿ, ನಾಗನೂರ, ಕಲ್ಲೋಳಿ, ಯಾದವಾಡ ಗ್ರಾಮಗಳ ಭಕ್ತರು ಆಂಧ್ರಪ್ರದೇಶದ ಶ್ರೀಶೈಲದತ್ತ ಪಾದಯಾತ್ರೆ ಆರಂಭಿಸಿದ್ದಾರೆ. ‘ಮಲ್ಲಯ್ಯ ಮಲ್ಲಯ್ಯ ಸಿರಿಗಿರಿ ಮಲ್ಯಯ್ಯ ಉಘೇ, ಉಘೇ...’ ಎಂದು ಜೈಕಾರ ಕೂಗುತ್ತ, ಹೆಜ್ಜೆ ಹಾಕುತ್ತಿದ್ದಾರೆ.

ಶ್ರೀಶೈಲದ ಮಲ್ಲಿಕಾರ್ಜುನ ದೇವರ ಹರಕೆ ತೀರಿಸಲು, ಈ ಭಾಗದಿಂದ ಭಕ್ತರು ದೊಡ್ಡಸಂಖ್ಯೆಯಲ್ಲಿ ತೆರಳುತ್ತಾರೆ. ಕೆಲವು ಭಕ್ತರು ಸತತ ಮೂರು ವರ್ಷ ಪಾದಯಾತ್ರೆ ಮೂಲಕ ಹೋಗಿ ಹರಕೆ ತೀರಿಸಿದರೆ, ಇನ್ನೂ ಕೆಲವರು 20ರಿಂದ 30 ವರ್ಷಗಳಿಂದ ತಪ್ಪದೇ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೋಗುತ್ತಿದ್ದಾರೆ. ಕಾಲಿಗೆ ಮರಗಾಲು ಕಟ್ಟಿಕೊಂಡು, ಪಾದಯಾತ್ರೆ ಮೂಲಕ ಹೋಗುವ ಭಕ್ತರೂ ಕಾಣಸಿಗುತ್ತಾರೆ.

‘ಪಾದಯಾತ್ರೆ ಮೂಲಕ ಹರಕೆ ತೀರಿಸಿದರೆ, ಮನಸ್ಸಿಗೆ ಸಂತೃಪ್ತಿಯಾಗುತ್ತದೆ. ನಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ದೊರೆಯುತ್ತದೆ’ ಎನ್ನುತ್ತಾರೆ ಮಸುಗುಪ್ಪಿಯ ಬಸಯ್ಯ ಮಠದ.

ಹೋಳಿ ಹಬ್ಬದ ದಿನ ತಮ್ಮ ಊರುಗಳಿಂದ ಹೊರಡುವ ಭಕ್ತರು, ಪ್ರತಿದಿನ 50ರಿಂದ 60 ಕಿ.ಮೀ ಕಾಲ್ನಡಿಗೆ ಮೂಲಕ ಕ್ರಮಿಸುತ್ತಾರೆ. ಈ ಬಾರಿ ಹಳ್ಳೂರ ಗ್ರಾಮವೊಂದರಿಂದಲೇ 1 ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಸಾಗಿದ್ದಾರೆ.
ಗುರ್ಲಾಪುರದಿಂದ 200 ಭಕ್ತರು, ಮಸಗುಪ್ಪಿ, ತಿಗಡಿಯಿಂದ ತಲಾ 100 ಭಕ್ತರು ತೆರಳಿದ್ದಾರೆ.

‘550ರಿಂದ 600 ಕಿ.ಮೀ ದೂರವನ್ನು 10 ದಿನಗಳಲ್ಲಿ ಕ್ರಮಿಸುತ್ತೇವೆ. ಯುಗಾದಿ ಹಿಂದಿನ ದಿನ ಶ್ರೀಶೈಲ ತಲುಪಿ, ಹಬ್ಬದ ದಿನ ರಥೋತ್ಸವದಲ್ಲಿ ಭಾಗವಹಿಸುತ್ತೇವೆ’ ಎಂದು ಭಕ್ತ ಶಂಕರಯ್ಯ ಮಠಪತಿ ಹೇಳಿದರು.

ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುವ ಪರಂಪರೆ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಪ್ರತಿವರ್ಷ ಯಾತ್ರಿಕರು ಹೆಚ್ಚುತ್ತಿದ್ದಾರೆ

–ವಿರೂಪಾಕ್ಷಿ ಮುಗಳಖೋಡ ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT