ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ನಲ್ಲಿ ದೇಶಕ್ಕೆ 4ನೇ ರ್‍ಯಾಂಕ್‌: ಬೆಳಗಾವಿ ತಾಲ್ಲೂಕಿನ ರುಚಾ ಪಾವಶೆ ಸಾಧನೆ

Last Updated 8 ಸೆಪ್ಟೆಂಬರ್ 2022, 13:03 IST
ಅಕ್ಷರ ಗಾತ್ರ

ಬೆಳಗಾವಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಯಲ್ಲಿ ತಾಲ್ಲೂಕಿನ ಉಚಗಾವಿಯ ರುಚಾ ಪಾವಶೆ ದೇಶಕ್ಕೆ 4ನೇ ಮತ್ತು ರಾಜ್ಯಕ್ಕೆ 2ನೇ ರ್‍ಯಾಂಕ್‌ ಗಳಿಸಿದ್ದಾರೆ.

‘ನಾನು ಅಗ್ರ 10 ಸ್ಥಾನದೊಳಗೆ ರ್‍ಯಾಂಕ್‌ ಗಳಿಸುತ್ತೇನೆಂಬ ವಿಶ್ವಾಸವಿರಲಿಲ್ಲ. ಆದರೆ, ಉತ್ತಮ ರ್‍ಯಾಂಕ್‌ ಸಿಗುವ ನಿರೀಕ್ಷೆಯಿತ್ತು. ಈಗ ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮ ಫಲಿತಾಂಶ ಬಂದಿರುವುದಕ್ಕೆ ಸಂತಸದೊಂದಿಗೆ ಅಚ್ಚರಿಯೂ ಆಗಿದೆ’ ಎಂದು ರುಚಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರುಚಾ ಅವರದ್ದು ವೈದ್ಯರ ಮನೆತನ. ಅವರ ಮುತ್ತಜ್ಜ, ಅಜ್ಜ ವೈದ್ಯರಾಗಿದ್ದರು. ಈಗ ತಂದೆ–ತಾಯಿ ಹಾಗೂ ಸಹೋದರ ಕೂಡ ವೈದ್ಯರಾಗಿದ್ದಾರೆ. ಉಚಗಾವಿ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಒಂದು ಶತಮಾನದಿಂದ ಅವರ ಕುಟುಂಬ ಆರೋಗ್ಯ ಸೇವೆ ಒದಗಿಸುತ್ತಿದೆ.

ನಗರದ ಸೆಂಟ್‌ ಝೇವಿಯರ್ಸ್‌ ಪ್ರೌಢಶಾಲೆ ಹಾಗೂ ರಾಜಾ ಲಖಮಗೌಡ ಪಿಯು ವಿಜ್ಞಾನ ಕಾಲೇಜಿನಲ್ಲಿ ರುಚಾ ವ್ಯಾಸಂಗ ಮಾಡಿದ್ದಾರೆ. ನೀಟ್‌ ತಯಾರಿಗಾಗಿಯೇ ಒಂದು ವರ್ಷ ಮುಂದಿನ ಶಿಕ್ಷಣ ಮೊಟಕುಗಳಿಸಿದ್ದರು. ಕಳೆದ ಬಾರಿ ಅವರಿಗೆ ನೀಟ್‌ನಲ್ಲಿ 500ನೇ ರ್‍ಯಾಂಕ್‌ ಬಂದಿತ್ತು. ಇದರಿಂದ ತೃಪ್ತಿಗೊಳ್ಳದ ವಿದ್ಯಾರ್ಥಿನಿ ಮತ್ತೊಂದು ಅವಕಾಶ ಬಳಸಿಕೊಂಡರು. ಈ ಪರೀಕ್ಷೆಗಾಗಿ ಎನ್‌ಸಿಇಆರ್‌ಟಿ ಪುಸ್ತಕಗಳು, ಹಳೇ ಪ್ರಶ್ನೆಪತ್ರಿಕೆಗಳನ್ನು ನಿರಂತರವಾಗಿ ಗಮನಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಎಲ್ಲಿಯೂ ಕೋಚಿಂಗ್‌ ಪಡೆದಿಲ್ಲ.

‘ಬುಧವಾರ ರಾತ್ರಿ ಫಲಿತಾಂಶ ಪ್ರಕಟಗೊಂಡಾಗ ನಂಬಲಾಗಲಿಲ್ಲ. ಆದರೆ, ಖಚಿತವಾದಾಗ ತುಂಬಾ ಸಂತಸವಾಯಿತು. ಈ ವಿಷಯ ಕೇಳಿ ನಮ್ಮ ಕುಟುಂಬದವರೂ ರಾತ್ರಿಯಿಡೀ ನಿದ್ರಿಸಲಿಲ್ಲ. ಮನೆಯಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದೆವು’ ಎಂದು ರುಚಾ ಖುಷಿಪಟ್ಟರು.

‘ನಾನು ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌(ಏಮ್ಸ್‌)ನಲ್ಲಿ ಪ್ರವೇಶ ಗಿಟ್ಟಿಸುವ ಆಸೆ ಹೊಂದಿದ್ದೇನೆ’ ಎಂದರು.

‘ಮುತ್ತಜ್ಜನನ್ನು ನಾನು ನೋಡಿಲ್ಲ. ಆದರೆ, ಅವರು ಸಮಾಜಕ್ಕೆ ಒದಗಿಸಿದ ಆರೋಗ್ಯ ಸೇವೆಯನ್ನು ಜನರೂ ಈಗಲೂ ನೆನಪಿಸಿಕೊಳ್ಳುತ್ತಾರೆ. ಹೆತ್ತವರು ವೈದ್ಯರಾಗಿದ್ದರಿಂದ ಬಾಲ್ಯದಿಂದಲೇ ಈ ವೃತ್ತಿ ಬಗ್ಗೆ ಅಭಿಮಾನವಿತ್ತು. ನಾನೂ ವೈದ್ಯೆಯಾಗಬೇಕೆಂದು ಕನಸು ಕಂಡಿದ್ದೆ’ ಎಂದು ಸಂತಸ ಹಂಚಿಕೊಂಡರು.

‘ಸಹೋದರಿ ನೀಟ್‌ಗಾಗಿ ಶ್ರದ್ಧೆಯಿಂದ ಅಭ್ಯಾಸ ಕೈಗೊಂಡಿದ್ದಳು. ಉತ್ತಮ ರ್‍ಯಾಂಕ್‌ ಸಿಕ್ಕಿದ್ದರಿಂದ ತನ್ನಿಷ್ಟದ ಕಾಲೇಜಿನಲ್ಲಿ ಪ್ರವೇಶ ಪಡೆದು ಎಂಬಿಬಿಎಸ್‌ ವ್ಯಾಸಂಗ ಕೈಗೊಳ್ಳಲಿದ್ದಾಳೆ. ನಮ್ಮ ಕುಟುಂಬದಲ್ಲಿ ನಾನು ನಾಲ್ಕನೇ ತಲೆಮಾರಿನ ವೈದ್ಯನಾಗಿದ್ದೆ. ಈಗ ತಂಗಿಯೂ ವೈದ್ಯೆಯಾಗುವ ಹಾದಿಯಲ್ಲಿ ಸಾಗುತ್ತಿರುವುದು ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ ಸಹೋದರ ಡಾ.ಪ್ರಥಮೇಶ.

ರುಚಾ ಅವರೂ ಸೇರಿದಂತೆ ನಾಲ್ವರು 715 ಅಂಕಗಳನ್ನು ಸಮನಾಗಿ ಪಡೆದಿದ್ದಾರೆ. ಟೈ ಬ್ರೇಕರ್‌ನಲ್ಲಿ ಇವರಿಗೆ ನಾಲ್ಕನೇ ರ್‍ಯಾಂಕ್‌ ನೀಡಲಾಗಿದೆ.
ರುಚಾ ಅವರೂ ಸೇರಿದಂತೆ ನಾಲ್ವರು 715 ಅಂಕಗಳನ್ನು ಸಮನಾಗಿ ಪಡೆದಿದ್ದಾರೆ. ಟೈ ಬ್ರೇಕರ್‌ನಲ್ಲಿ ಇವರಿಗೆ ನಾಲ್ಕನೇ ರ್‍ಯಾಂಕ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT