ಶನಿವಾರ, ಅಕ್ಟೋಬರ್ 16, 2021
22 °C

ಎನ್‌ಇಪಿಗೆ ಮಸಿ ಬಳಿಯುತ್ತಿರುವ ಕಾಂಗ್ರೆಸ್: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಿಂದಾಗಿ ದೇಶವು ದೊಡ್ಡ ಶಕ್ತಿಯಾಗಿ ಬೆಳೆಯುತ್ತದೆ. ಹೀಗಾಗಿ, ನಮ್ಮ ಪರಿಸ್ಥಿತಿ ಏನಾಗುತ್ತದೆಯೋ ಎಂಬ ಆತಂಕ ಕಾಂಗ್ರೆಸ್‌ನವರದಾಗಿದೆ. ಆದ್ದರಿಂದ ನೀತಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಅವಿಶ್ವಾಸ ಮೂಡಿಸುತ್ತಿದ್ದಾರೆ’ ಎಂದು ಉನ್ನತಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ನೀತಿ ಅನುಷ್ಠಾನಕ್ಕೆ ಸಾಕಷ್ಟು ಪೂರ್ವ ತಯಾರಿ ನಡೆದಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿಯೇ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ’ ಎಂದು ಹೇಳಿದರು.

‘ಹಿಂದಿನ ಸರ್ಕಾರವೇ ಜವಾಬ್ದಾರಿ ಹೊತ್ತು ಪೂರ್ವ ಸಿದ್ಧತೆ ನಡೆಸಿತ್ತು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ಮಾರ್ಗದರ್ಶನ ನೀಡಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಗಿದೆ’ ಎಂದರು.

‘ನೀತಿಯಲ್ಲಿ ಆರ್‌ಎಸ್‌ಎಸ್ ನೀತಿ ಅಳವಡಿಸಲಾಗಿದೆ’ ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಆರ್‌ಎಸ್‌ಎಸ್ ಅಂದ್ರೇನೇ ದೇಶ ತಾನೆ? ಭಾರತೀಯ ತಾನೆ? ನಾವೆಲ್ಲರೂ ಭಾರತೀಯರು, ನಮ್ಮತನವನ್ನು ಅಳವಡಿಸದೆ ಮತ್ತೇನನ್ನು ಅಳವಡಿಸಬೇಕು? ಇಡೀ ಸಮಾಜಕ್ಕಾಗಿ ನಾವೆಲ್ಲರೂ ಸೇರಿ ಮಾಡಿರುವಂಥದು. ಎಲ್ಲರ ಸಲಹೆ– ಸೂಚನೆಗಳನ್ನು ಪಡೆದೆ ರಚಿಸಲಾಗಿದೆ’ ಎಂದರು.

‘ರಮೇಶ ಜಾರಕಿಹೊಳಿ ನಮ್ಮ ನಾಯಕರು. ಅವರನ್ನು ಎಲ್ಲ ರೀತಿಯಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಭಾವನೆಗೆ ಪೂರಕವಾಗಿ ಪಕ್ಷ ಸ್ಪಂದಿಸುತ್ತದೆ. ಅವರಿಗೆ ನೋವು ಆಗಿರಬಹುದು ಸಹಜ. ಪರಿಸ್ಥಿತಿಯೇ ಹಾಗಿದೆ ಅಲ್ಲವೇ? ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಮ್ಮ ಪಕ್ಷದಲ್ಲಾಗುತ್ತದೆ. ತಾಂತ್ರಿಕ ಸಮಸ್ಯೆ ಬಗೆಹರಿದ ನಂತರ ಅವರಿಗೆ ಸಚಿವ ಸ್ಥಾನ ಸಿಗಬಹುದು’ ಎಂದು ಪ್ರತಿಕ್ರಿಯಿಸಿದರು.

‘ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಎರಡೂ ಉಪ ಚುನಾವಣೆಯಲ್ಲಿ ಭಾಗಿಯಾಗಿ ಪ್ರಚಾರ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

‘ಕಮಿಷನ್ , ಬ್ಲಾಕ್‌ಮೇಲ್, ಕೀಳು ಮಟ್ಟದ ರಾಜಕಾರಣದಿಂದ ತುಂಬಿ ತುಳುಕುತ್ತಿರುವ ಕಾಂಗ್ರೆಸ್ ಪಕ್ಷ ನುಚ್ಚು ನೂರಾಗಿದೆ. ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಅಲ್ಲಿ ನಾಯಕರ ಕೊರತೆ ಇದೆ. ದಿಕ್ಕು ದೆಸೆ ಇಲ್ಲದೆ ಕಾರ್ಯನಿರ್ವಹಣೆ ಮಾಡುತ್ತಿರುವ ಪಕ್ಷ ಅದಾಗಿದೆ. ಯಾರು ಅಧ್ಯಕ್ಷರಾಗಬೇಕು ಎನ್ನುವ ಗೊಂದಲ ಅಲ್ಲಿದೆ. ಯಾವುದೇ ಧ್ಯೇಯ, ಉದ್ದೇಶ ಇಲ್ಲದ ಪಕ್ಷ’ ಎಂದು ವಾಗ್ದಾಳಿ ನಡೆಸಿದರು.

‘ಐಟಿ ದಾಳಿಗೂ– ಬಿ.ಎಸ್. ಯಡಿಯೂರಪ್ಪ ಅವರಿಗೂ ಸಂಬಂಧವಿಲ್ಲ. ಅವರಿಗೆ ಜೋಡಿಸುವುದು ಉಚಿತವಲ್ಲ. ನಮ್ಮ ಸರ್ಕಾರ ಸತ್ಯದ ಪರವಾಗಿದೆ. ಮಾಹಿತಿ ಇಲ್ಲದೆ ಇಲ್ಲದ ಸಲ್ಲದ್ದು ಹೇಳುವುದು ಸರಿಯಲ್ಲ’ ಎಂದು ವಿರೋಧಪಕ್ಷದವರಿಗೆ ತಿರುಗೇಟು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು