ಬೆಳಗಾವಿ: ಇಲ್ಲಿನ ನಗರಪಾಲಿಕೆ ದ್ವಾರದ ಬಳಿಯ ಧ್ವಜಸ್ತಂಭದಲ್ಲಿದ್ದ ಹಳೆಯದಾಗಿದ್ದ ಮತ್ತು ಅಂಚಿನಲ್ಲಿ ಹರಿದಿದ್ದ ಕನ್ನಡ ಬಾವುಟವನ್ನು ಬದಲಿಸಿ, ಹೊಸದನ್ನು ಮಂಗಳವಾರ ಹಾಕಲಾಗಿದೆ.
ಇದರೊಂದಿಗೆ ಕನ್ನಡ ಹೋರಾಟಗಾರರ ಆಗ್ರಹಕ್ಕೆ ಮನ್ನಣೆ ಸಿಕ್ಕಂತಾಗಿದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಧ್ವಜ ರಾರಾಜಿಸುತ್ತಿದೆ.
ಹಳೆಯದನ್ನು ಬದಲಿಸಿ ಹೊಸದಾಗಿ ಧ್ವಜಾರೋಹಣಕ್ಕೆ ಮುಂದಾಗಿದ್ದ 10 ಮಂದಿ ಕನ್ನಡ ಹೋರಾಟಗಾರರನ್ನು ಜುಲೈ 5ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಧ್ವಜವನ್ನು ಕನ್ನಡ ಹೋರಾಟಗಾರರೇ ಕಳೆದ ವರ್ಷ ಡಿ.28ರಂದು ಸ್ಥಾಪಿಸಿದ್ದರು. ಬಾವುಟದ ಬಣ್ಣ ಮಾಸಿ ಹೋಗಿರುವುದರಿಂದ ಹೊಸದು ಹಾಕಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ಇದಕ್ಕೆ ಸ್ಪಂದನೆ ಸಿಗದ ಕಾರಣ ತಾವಾಗಿಯೇ ಬಾವುಟದೊಂದಿಗೆ ಬಂದರು. ಇದಕ್ಕೆ ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ‘ಹೊಸ ಧ್ವಜ ಹಾರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದು ಪೊಲೀಸರು ಅವರಿಗೆ ಭರವಸೆ ನೀಡಿದ್ದರು.
ಇದಾಗಿ ಕೆಲವು ದಿನಗಳ ನಂತರ ಹೊಸ ಬಾವುಟ ಹಾಕಲಾಗಿದೆ. ಆದರೆ, ಬದಲಿಸಿದ್ದು ಯಾರು ಎನ್ನುವುದು ‘ನಿಗೂಢ’ವಾಗಿಯೇ ಇದೆ. ನಾವು ಬದಲಿಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕನ್ನಡದ ಅಭಿಮಾನಿಗಳು ಮಂಗಳವಾರ ನಸುಕಿನಲ್ಲಿ ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತೆಯೆ, ರಾಣಿ ಚನ್ನಮ್ಮ ವೃತ್ತ, ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಮತ್ತು ನಿಪ್ಪಾಣಿ ಪಟ್ಟಣದ ಚನ್ನಮ್ಮ ವೃತ್ತದಲ್ಲೂ ಕನ್ನಡದ ಹೊಸ ಧ್ವಜವನ್ನು ಹಾರಿಸಲಾಗಿದೆ.
‘ಹೊಸ ಬಾವುಟ ಹಾಕುವವರೆಗೂ ಚಪ್ಪಲಿ ತೊಡುವುದಿಲ್ಲ’ ಎಂದು ಇಲ್ಲಿನ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಸೋಮವಾರ ಶಪಥ ಮಾಡಿದ್ದರು. ಧ್ವಜಸ್ತಂಭದ ಬಳಿ ಪ್ರತಿಭಟನೆ ನಡೆಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಧ್ವಜಸ್ತಂಭದ ಸುತ್ತ ಬ್ಯಾರಿಕೇಡ್‌ಗಳನ್ನು ಇಟ್ಟು, ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.