ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶನೂರ| ನಿರ್ಲಕ್ಷ್ಯಕ್ಕೊಳಗಾದ ಪ್ರೇಮದ ಸಂಕೇತ ‘ನಿರಂಜನಿ ಮಹಲ್‌’

ಪುನರುಜ್ಜೀವನಕ್ಕೆ ಪ್ರಜ್ಞಾವಂತರ ಒತ್ತಾಯ
ಅಕ್ಷರ ಗಾತ್ರ

ನೇಸರಗಿ (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮನ ಕಾಲದಲ್ಲಿ ಉಪರಾಜಧಾನಿಯಾಗಿ ಮೆರೆದ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮ ಕಿತ್ತೂರಿನಷ್ಟೇ ಖ್ಯಾತಿ ಪಡೆದಿತ್ತು. ಕಿತ್ತೂರ ಸಂಸ್ಥಾನಕ್ಕೆ ಸಂಬಂಧಿಸಿದ ಅಮರ ಪ್ರೇಮದ ಸಂಕೇತವಾಗಿರುವ ನಿರಂಜನಿ ಮಹಲ್ ನಿರ್ಲಕ್ಷಕ್ಕೆ ಒಳಗಾಗಿದೆ.

ದೇಶನೂರ ಗ್ರಾಮವು ಕೋಟೆ-ಕೊತ್ತಲ, ಮಸೀದಿ, ಮಂದಿರ, ಪ್ರೇಮಮಹಲು ಮುಂತಾದ ಐತಿಹಾಸಿಕ ತಾಣಗಳಿಂದ ಮನಸಳೆಯುತ್ತದೆ. ಅಲ್ಲಿನ ನಿರಂಜನ ಮಹಲ್ ಅನ್ನು ಮುನ್ನೂರು ವರ್ಷಗಳಷ್ಟು ಹಿಂದೆ ಕಟ್ಟಲಾಗಿದೆ ಎನ್ನಲಾಗಿದೆ. ಅದು ಅವನತಿಯತ್ತ ಸಾಗಿರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ.

ಆ ಗ್ರಾಮದ ಗುಡ್ಡದಲ್ಲಿ ರುದ್ರಗಡ ಎಂಬ ಕೋಟೆ ಇದೆ. ಅದು ಕೂಡ ವಿನಾಶದ ಅಂಚಿನಲ್ಲಿದೆ.

ಮಹಲಿನ ಇತಿಹಾಸ:

ಕಿತ್ತೂರನ್ನಾಳಿದ 9ನೇ ದೊರೆ ಮಲವ ರುದ್ರಸರ್ಜ ಉರ್ಫ್ ಫಕೀರ ರುದ್ರಸರ್ಜ ಮುಸ್ಲಿಂ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ, ಆಕೆಗಾಗಿ ಈ ಮಹಲ್ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಕಾಶ್ಮೀರದಿಂದ ವಲಸೆ ಬಂದ ಮುಸ್ಲಿ ರಾಜನರ್ತಕಿಯ ಮಗಳಾದ ನೀಲಂ ಅವರನ್ನು ಪ್ರೀತಿಸಿದ ಮಲವ ರುದ್ರಸರ್ಜ, ಆಕೆಯನ್ನು ಮದುವೆಯಾಗಲು ಬಯಸಿದನಂತೆ. ಆಗ ರಾಜಗುರು ಸಂಸ್ಥಾನ ಕಲ್ಮಠದ ಸ್ವಾಮೀಜಿ ಆಕೆಗೆ ‘ನಿರಂಜನಿ’ ಎಂದು ಹೆಸರಿಟ್ಟು ಲಿಂಗ ದೀಕ್ಷೆ ಕೊಡಿಸಿ ಮಲವ ರುದ್ರಸರ್ಜನೊಂದಿಗೆ ಮದುವೆ ಮಾಡಿಸಲಾಗುತ್ತದೆ. ಕಿತ್ತೂರು ಸಂಸ್ಥಾನದ ಆಡಳಿತಕ್ಕೊಳಪಟ್ಟ ದೇಶನೂರ ಗ್ರಾಮದಲ್ಲಿ ಪ್ರೀತಿಯ ರಾಣಿಗಾಗಿ ಸುಂದರ ಮಹಲನ್ನು ನಿರ್ಮಿಸುವ ದೊರೆ ಅದಕ್ಕೆ ‘ನಿರಂಜನಿ ಮಹಲ್’ ಎಂದು ಕರೆದು ದೇಶನೂರಿನಿಂದ ಕಿತ್ತೂರಿನ ರಾಜ್ಯಭಾರ ನಡೆಸುತ್ತಾನೆ ಎನ್ನುತ್ತದೆ ಇತಿಹಾಸ.

ಈ ಮಹಲನ್ನು ಸಂಪೂರ್ಣ ಗಚ್ಚಿನಿಂದ ಕಟ್ಟಲಾಗಿದೆ. ಮಹಲ್‌ನ ಮೇಲ್ಭಾಗದಲ್ಲಿ ರಾಣಿಯ ವಿಹಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. 12 ಕಮಾನುಗಳುಳ್ಳ ನೆಲಮಾಳಿಗೆಯಲ್ಲಿ ರಾಣಿಯ ಹಾಗೂ ದಾಸಿಯರ ವಾಸಕ್ಕೆ ಕೋಣೆಗಳನ್ನು ನಿರ್ಮಿಸಲಾಗಿದೆ. ನೀರಿಗಾಗಿ ನೆಲಮಾಳಿಗೆಯಲ್ಲಿ ಬಾವಿ ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆಯಿಂದಾಗಿ ಇಂದು ಈ ಬಾವಿ ಹುಗಿದುಹೋಗಿದೆ. ಕೋಣೆಗಳು ನಿರ್ವಹಣೆ ಇಲ್ಲದೆ ನಾರುತ್ತಿವೆ.

ಅಲ್ಪ ಭಾಗ ಕುಸಿದಿದೆ:

ಮಹಲ್‌ಗೆ ಇಂದು ಅನಾಥ ಪ್ರಜ್ಞೆ ಕಾಡುತ್ತಿದೆ. ಮಹಲ್ ಮೇಲೆ ಹುಲ್ಲು ಬೆಳೆದಿದ್ದು, ಒಳಗೆಲ್ಲ ಕಲ್ಲುಗಳು ಬಿದ್ದು ಕಟ್ಟಡದ ಅಲ್ಪ ಭಾಗ ಕುಸಿದಿದೆ. ಮಹಲ್‌ನ ಅಕ್ಕ-ಪಕ್ಕದ ಮನೆಯವರು ಬಣವೆ, ಹುಲ್ಲು, ನೇಗಿಲುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಈ ಮಹಲನ್ನು ಐತಿಹಾಸಿಕ ಸ್ಮಾರಕವಾಗಿ ರೂಪಿಸಿ, ಅಭಿವೃದ್ಧಿಪಡಿಸಿದರೆ ಪ್ರೇಕ್ಷಣೀಯ ಸ್ಥಳವಾಗುವಾಗಬಲ್ಲದು ಎನ್ನುವುದು ಹಲವು ಅಭಿಲಾಷೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎನ್ನುವುದು ಅವರ ಕೋರಿಕೆಯಾಗಿದೆ.

***

ಯೋಜನೆ ಇದೆ

ನಿರಂಜನಿ ಮಹಲನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಸರ್ಕಾರದಿಂದ ಬರುವ ಅನುದಾನದ ಸ್ವಲ್ಪ ಭಾಗವನ್ನು ಮಹಲ್ ನಿರ್ವಹಣೆಗೆ ವಿನಿಯೋಗಿಸುವ ಯೋಜನೆ ಇದೆ.

–ಮಹಾಂತೇಶ ದೊಡ್ಡಗೌಡರ, ಶಾಸಕ

***

ಅಭಿವೃದ್ಧಿಪಡಿಸಲಿ

ಕಿತ್ತೂರ ಅಭಿವೃದ್ಧಿ ಪ್ರಾಧಿಕಾರವು ಈ ನಿರಂಜನಿ ಮಹಲಿನ ಬಗ್ಗೆ ಸಂಶೋಧನೆ ನಡೆಸಿ ಅಭಿವೃದ್ದಿಪಡಿಸಬೇಕು.

–ಎ.ಎಸ್. ಗಡದವರ, ಸಾಹಿತಿ, ದೇಶನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT