ಬುಧವಾರ, ಮೇ 18, 2022
24 °C

ನಾಮನಿರ್ದೇಶನ ಸದಸ್ಯರಿಗೂ ಮತದಾನ ಹಕ್ಕು: ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ನಾಮನಿರ್ದೇಶನ ಸದಸ್ಯರಿಗೂ ಮತದಾನದ ಹಕ್ಕಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಕರಡು ಮತದಾರರ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 38 ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ 15ರ ಅವಧಿ ಮುಗಿದಿದೆ. ಪ್ರಸ್ತುತ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಗಳ ಸದಸ್ಯರು, ಚಾಲ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ರಾಜ್ಯಸಭಾ ಸದಸ್ಯರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರು ಮತದಾರರಾಗಿದ್ದಾರೆ. ಜಿಲ್ಲಾ  ಮತ್ತು ತಾಲ್ಲೂಕು ಪಂಚಾಯಿತಿಗಳು ಅಸ್ತಿತ್ವದಲ್ಲಿ ಇಲ್ಲವಾದ್ದರಿಂದ ಆ ಸದಸ್ಯರು ಮತದಾರರಾಗಿರುವುದಿಲ್ಲ. ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಹೇಳಿದರು.

‘ನ.16ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ನ.23 ಕೊನೆಯ ದಿನವಾಗಿದೆ. ನ.24ರಂದು ಪರಿಶೀಲಿಸಲಾಗುವುದು. ಉಮೇದುವಾರಿಕೆ ಹಿಂಪಡೆಯಲು ನ.26 ಕೊನೆಯ ದಿನವಾಗಿದೆ. ಡಿ.10ರಂದು ಮತದಾನ ನಡೆಯಲಿದೆ. ಡಿ.14ರಂದು ಮತ ಎಣಿಕೆ ನಡೆಲಾಗುವುದು. ಚುನಾವಣಾ ವೀಕ್ಷಕರೊಂದಿಗೆ ಚರ್ಚಿಸಿ ಮತ ಎಣಿಕೆಯ ಸ್ಥಳ ನಿಗದಿಪಡಿಸಲಾಗುವುದು. ಮಾದರಿ ನೀತಿಸಂಹಿತೆಯು ನ.9ರಿಂದಲೇ  ಆರಂಭವಾಗಿದ್ದು, ಡಿ.16ರವರೆಗೆ ಜಾರಿಯಲ್ಲಿರುತ್ತದೆ’ ಎಂದು ವಿವರಿಸಿದರು.

ಅಂತಿಮಗೊಳಿಸುವಂತಿಲ್ಲ:

‘ನೀತಿಸಂಹಿತೆ ಅವಧಿಯಲ್ಲಿ, ಮುಖ್ಯಮಂತ್ರಿ, ರಾಜ್ಯ ಹಾಗೂ ಕೇಂದ್ರ ಮಂತ್ರಿಗಳು ಅಧಿಕೃತವಾಗಿ ಭೇಟಿ ಕೊಡಬಹುದು. ಆದರೆ, ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ. ಆಡಳಿತಾತ್ಮಕ ಅನುಮೋದನೆ ಆಗಿದ್ದರೂ ಕಾಮಗಾರಿಗಳಿಗೆ ಚಾಲನೆ ನೀಡುವಂತಿಲ್ಲ. ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರಸ್ತಾಪಿತ ಕಾಮಗಾರಿಗಳಿಗೂ ನೀತಿಸಂಹಿತೆಯು ಅನ್ವಯವಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಕಾಮಗಾರಿಗಳ ಟೆಂಡರ್‌ ಆಹ್ವಾನಿಸುವಂತಿಲ್ಲ ಹಾಗೂ ಅಂತಿಮಗೊಳಿಸುವಂತೆಯೂ ಇಲ್ಲ. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯ ಅಥವಾ ಘೋಷಣೆ ಮಾಡುವಂತಿಲ್ಲ. ಸ್ಥಳೀಯ ಸಂಸ್ಥೆಗಳ ಸದಸ್ಯರ ಸಭೆ ನಡೆಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ಸಭೆಗಳನ್ನು ಏರ್ಪಡಿಸಬೇಕಾದಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ನೀತಿಸಂಹಿತೆಯು ಜಿಲ್ಲೆಯಾದ್ಯಂತ ಜಾರಿಯಲ್ಲಿದ್ದು, ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದರು.

ಮತಪತ್ರಗಳ ಬಳಕೆ:

‘ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ನಾಮಪತ್ರ ನಮೂನೆಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಪಡೆಯಬಹುದು. ನ.16ರಿಂದ 23ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳು ₹ 10ಸಾವಿರ ಹಾಗೂ ಮೀಸಲಾತಿ ಅಭ್ಯರ್ಥಿಗಳು ₹ 5ಸಾವಿರ ಠೇವಣಿ ಮೊತ್ತ ‍ಪಾವತಿಸಬೇಕು’ ಎಂದು ತಿಳಿಸಿದರು.

‘ಹೋದ ಚುನಾವಣೆಯಲ್ಲಿ ಪ್ರತಿ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಿಗೆ ಒಂದರಂತೆ ಮತಗಟ್ಟೆ ಸ್ಥಾ‍‍‍‍ಪಿಸಲಾಗಿತ್ತು. ಈ ಬಾರಿ ಆಯೋಗದ ಸೂಚನೆಯಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತಪತ್ರಗಳನ್ನು ಹಾಗೂ ಮತಪೆಟ್ಟಿಗೆಗಳನ್ನು ಬಳಸಲಾಗುವುದು. ಕೋವಿಡ್ ಮಾರ್ಗಸೂಚಿಗಳ ಪಾಲನೆಯೊಂದಿಗೆ ಚುನಾವಣೆ ನಡೆಸಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಜರಿದ್ದರು.

***

ಆಯೋಗಕ್ಕೆ ಪತ್ರ

ಬೆಳಗಾವಿ ಮಹಾನಗರಪಾಲಿಕೆಯ ಸದಸ್ಯರು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಆದ್ದರಿಂದ ಅವರಿಗೆ ಈ ಚುನಾವಣೆಯಲ್ಲಿ ಮತದಾನದ ಹಕ್ಕು ಇದೆಯೇ ಇಲ್ಲವೇ ಸ್ಪಷ್ಟಪಡಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ.

–ಎಂ.ಜಿ. ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು