ಭಾನುವಾರ, ಸೆಪ್ಟೆಂಬರ್ 22, 2019
23 °C

ಪಕ್ಷ ಬಿಡುವಂತೆ ರಮೇಶಗೆ ಯಾರೂ ಹೇಳಿಲ್ಲ: ಸತೀಶ ಜಾರಕಿಹೊಳಿ

Published:
Updated:

ಬೆಳಗಾವಿ: ‘ಶಾಸಕ, ಸಹೋದರ ರಮೇಶ ಜಾರಕಿಹೊಳಿಗೆ ಪಕ್ಷ ಬಿಡುವಂತೆ ಯಾರೂ ಹೇಳಿಲ್ಲ. ಪಕ್ಷದ ಕಾರ್ಯಕರ್ತರಾಗಲಿ, ಸಿದ್ದರಾಮಯ್ಯ ಅವರಾಗಲಿ ಯಾರೂ ಹೇಳಿಲ್ಲ. ಪಕ್ಷದಲ್ಲಿ ಇರುವುದು, ಬಿಡುವುದು ಅವರಿಗೆ ಬಿಟ್ಟಿದ್ದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಮೇಶ ಅವರ ಜೊತೆ ಮಾತನಾಡುವುದು ಮುಗಿದ ಅಧ್ಯಾಯ. ಪಕ್ಷ ಬಿಟ್ಟು ಹೋಗುವವರನ್ನು ತಡೆಯಲು ಸಾಧ್ಯವೇ? ಅವರು ಯಾವಾಗ ಪಕ್ಷ ಬಿಡುತ್ತಾರೆ, ಯಾವಾಗ ಮಂತ್ರಿಯಾಗುತ್ತಾರೆ ಎನ್ನುವುದನ್ನು ನೀವೇ (ಪತ್ರಕರ್ತರಿಗೆ) ಕೇಳಿ’ ಎಂದು ಪ್ರತ್ಯುತ್ತರ ನೀಡಿದರು.

‘ರಮೇಶ ಮಂತ್ರಿಯಾಗಿದ್ದರೂ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದರು. ಇವರನ್ನು ಯಾರು ಸಂಭಾಳಿಸುವರು’ ಎಂದರು.

ರಮೇಶ ಗೈರು:

ಕೃಷ್ಣಾ ನದಿಗೆ ನೀರು ಹರಿಸುವ ಸಂಬಂಧ ನಗರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ನಡೆಸಿದ ಸಭೆಗೆ ಶಾಸಕ ರಮೇಶ ಜಾರಕಿಹೊಳಿ ಗೈರಾಗಿದ್ದರು. ಕೃಷ್ಣಾ ನದಿ ಹರಿಯುವ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಶಿವಕುಮಾರ್‌ ನಡೆಸಿದ್ದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌– ಬಿಜೆಪಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ರಮೇಶ ಮಾತ್ರ ಗೈರಾಗಿದ್ದರು.

ಸತೀಶ ಮೈದಡವಿದ ಡಿಕೆಶಿ:

ಜನಪ್ರತಿನಿಧಿಗಳ ಸಭೆ ಆರಂಭವಾಗುವುದಕ್ಕಿಂತ ಮುಂಚೆ ಡಿ.ಕೆ. ಶಿವಕುಮಾರ್‌ ಅವರು ಪಕ್ಕದಲ್ಲಿಯೇ ಕುಳಿತಿದ್ದ ಸಚಿವ ಸತೀಶ ಜಾರಕಿಹೊಳಿ ಅವರ ಮೈದಡವಿ ಮಾತನಾಡಿಸಿದರು. ‘ಗಂಭೀರವಾಗಿ ಕುಳಿತಿರುವ ಇವರು ನಗುವುದನ್ನು ತೋರಿಸಿ’ ಎಂದು ಛಾಯಾಗ್ರಾಹಕರಿಗೆ ಹೇಳಿದರು. ಸತೀಶ ಮುಗುಳನಗೆ ಬೀರಿದರು.

Post Comments (+)