ಭಾನುವಾರ, ನವೆಂಬರ್ 28, 2021
20 °C
ಹಲವೆಡೆ ಶೌಚಾಲಯಗಳಿಲ್ಲ; ಇದ್ದರೂ ಬಳಕೆಯಲ್ಲಿಲ್ಲ

ಇನ್ನೂ ತಪ್ಪಿಲ್ಲ ‘ಶೋಚನೀಯ’ ಸ್ಥಿತಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಅನೇಕ ಹಳ್ಳಿಗಳಲ್ಲಿ ‌ಬಯಲು ಶೌಚ ಸಮಸ್ಯೆ ಇಂದಿಗೂ ನಿವಾರಣೆ ಆಗಿಲ್ಲ. ಶೌಚಾಲಯಗಳು ಪೂರ್ಣವಾಗಿ ಆಗಿಲ್ಲ. ಆಗಿದ್ದರೂ ಬಳಕೆ ಮಾಡಿಕೊಳ್ಳುತ್ತಿಲ್ಲ. ಮಹಿಳೆಯರು ಮುಜುಗರ ಅನುಭವಿಸುವ ಸ್ಥಿತಿ ಈಗಲೂ ಇದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು. ಸಚಿವರ ಈ ಮಾತು ಜಿಲ್ಲೆಗೂ ಅನ್ವಯಿಸುತ್ತದೆ.

ಜಿಲ್ಲೆಯನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಿರುವುದು ಕೇವಲ ಕಾಗದ ಅಥವಾ ಅಂಕಿ ಅಂಶಗಳಲ್ಲಷ್ಟೆ ಉಳಿದಿದೆ. ವಾಸ್ತವವಾಗಿ, ಗ್ರಾಮೀಣ ಜನರು ‘ಶೋಚನೀಯ ಸ್ಥಿತಿ ಅನುಭವಿಸುವುದು’, ಮುಜುಗರಕ್ಕೆ ಒಳಗಾವುದು ಇಂದಿಗೂ ತಪ್ಪಿಲ್ಲ. ಶೌಚಾಲಯಗಳಿಲ್ಲದಿರುವುದು, ಇದ್ದರೂ ನಿರ್ವಹಣೆ ಇಲ್ಲದಿರುವುದು ಅಥವಾ ಅನ್ಯ ಉದ್ದೇಶಗಳಿಗೆ ಬಳಸುವುದು ಅಥವಾ ಜಾಗೃತಿ ಮೂಡಿಸದಿರುವುದಕ್ಕೆ ಇದಕ್ಕೆ ಕಾರಣವಾಗಿದೆ.

ಹಲವು ಕಾರಣ

‘ಜಿಲ್ಲೆಯಲ್ಲಿ 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ 5,41,264 ಕುಟುಂಬಗಳಿವೆ. ಆಗ, 1,12,575 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದವು. ಹಂತ ಹಂತವಾಗಿ 4,28,689 ಶೌಚಾಲಯಗಳನ್ನು ಜಿಲ್ಲಾ ಪಂಚಾಯ್ತಿಯಿಂದ ಸಹಾಯಧನ ನೀಡಿ ಕಟ್ಟಿಸಲಾಗಿದೆ. ಅಲ್ಲಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದನ್ನು ಆಧರಿಸಿ 2018ರ ನವೆಂಬರ್‌ನಲ್ಲಿ ಜಿಲ್ಲೆಯನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲಾಗಿದೆ. ವ್ಯಾಪಕ ಜಾಗೃತಿ ಕಾರ್ಯಕ್ರಮಗಳಿಂದಾಗಿ ಜನರ ಮನಸ್ಥಿತಿಯೂ ಬದಲಾಗಿದೆ. ಶೌಚಾಲಯ ಬಳಸುತ್ತಿದ್ದಾರೆ’ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ವಾಸ್ತವ ಚಿತ್ರಣವು ‘ವರದಿ’ಯಂತಿಲ್ಲ ಎನ್ನುವುದು ಪ್ರವಾಸ ಮಾಡಿದಾಗ ತಿಳಿದುಬರುತ್ತಿದೆ.

ಅನೇಕ ಹಳ್ಳಿಗಳಲ್ಲಿ ಜನರು ಅದರಲ್ಲೂ ಮಹಿಳೆಯರು, ಯುವತಿಯರು ಕತ್ತಲಾಗುವುದನ್ನೇ ಕಾಯಬೇಕಾದ ಸ್ಥಿತಿ ಇದೆ. ರಸ್ತೆ ಬದಿಯಲ್ಲಿ, ದೂರದ ಹೊಲಗಳನ್ನು ಅವಲಂಬಿಸಿದ್ದಾರೆ. ಆರೋಗ್ಯ ಸಮಸ್ಯೆಗಳಿಗೂ ಒಳಗಾಗುತ್ತಿದ್ದಾರೆ.

ಮನೋಭಾವ ಬದಲಾಗಿಲ್ಲ

‘ಗ್ರಾಮೀಣ ಪ್ರದೇಶವನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಆದರೆ, ಉಳಿಸಿಕೊಂಡು ಹೋಗಲು ಆದ್ಯತೆ ನೀಡಲಾಗಿಲ್ಲ. ಪ್ರೋತ್ಸಾಹಧನ ದೊರೆಯುತ್ತದೆಂದು ಶೌಚಾಲಯ ನಿರ್ಮಿಸಿಕೊಂಡವರು, ಬಳಸುವ ಅಭ್ಯಾಸ ಮಾಡಿಕೊಂಡಿಲ್ಲ. ಜನರಲ್ಲಿ ಜಾಗೃತಿ ಮೂಡಿಸಬೇಕು; ಅವರ ಮನೋಭಾವ ಬದಲಾಯಿಸಬೇಕು. ಬಯಲು ಶೌಚದಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸಿಕೊಡಬೇಕು’ ಎನ್ನುವ ಅಭಿಪ್ರಾಯಗಳು ಪ್ರಜ್ಞಾವಂತರದಾಗಿದೆ.

ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಮನೆಗಳು ಹಾಳಾಗುತ್ತಿವೆ. ಅವುಗಳೊಂದಿಗೆ ಶೌಚಾಲಯಗಳೂ ಬಿದ್ದಿರುತ್ತವೆ. ಆಡಳಿತ ಸೇರಿದಂತೆ ಲ್ಲರ ಗಮನ ಮನೆ ಕಟ್ಟಿಕೊಳ್ಳುವುದರ ಬಗ್ಗೆ ಇರುತ್ತದೆಯೇ ಹೊರತು ಶೌಚಾಲಯಗಳಿಗೆ ಆದ್ಯತೆ ನೀಡುವುದಿಲ್ಲ. ಪ್ರಕೃತಿ ವಿಕೋಪದಿಂದ ಎಷ್ಟು ಶೌಚಾಲಯಗಳು ಹಾಳಾಗಿವೆ; ನಿರ್ಮಿಸಿದ್ದೆಷ್ಟು; ಮರು ನಿರ್ಮಾಣವಾಗಿದ್ದೆಷ್ಟು ಎನ್ನುವ ಮಾಹಿತಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಲ್ಲಿ ಇಲ್ಲವಾಗಿದೆ!

ಜಾಗದ ಕೊರತೆಯಿಂದಾಗಿ ಬಹಳಷ್ಟು ಮಂದಿ ಶೌಚಾಲಯ ಕಟ್ಟಿಸಿಕೊಂಡಿಲ್ಲ. ಕಟ್ಟಿಕೊಂಡವರಿಗೆ ನೀರಿನ ವ್ಯವಸ್ಥೆ ಇರುವುದಿಲ್ಲ. ಪರಿಣಾಮ, ಬಳಕೆಯಾಗುತ್ತಿಲ್ಲ. ಅಲ್ಲಲ್ಲಿ ಸಾಮೂಹಿಕ ಅಥವಾ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಅವು ಬಳಸಲಾಗದ ಸ್ಥಿತಿಯಲ್ಲಿವೆ! ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುವ ರೀತಿಯಲ್ಲಿವೆ.

ಜನರು ಬಯಲಿನ ಕಡೆಗೆ

‘ಮುನವಳ್ಳಿಯಲ್ಲಿ ಸಾಕಷ್ಟು ಗುಂಪು ಶೌಚಾಲಯಗಳು ನಿರ್ಮಾಣವಾಗುತ್ತವೆ. ಪುರಸಭೆಯಿಂದ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತಿದೆ. ಆಲೂರ ಮಠದ ಹತ್ತಿರ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಭಕ್ತರು ನದಿಗೆ ಪೂಜಿಸುವುದು ವಾಡಿಕೆ. ಅಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಬರುವ ಭಕ್ತರು ರಸ್ತೆಯ ಬದಿಯಲ್ಲೇ ಶೌಚ ಮಾಡುತ್ತಾರೆ. ಶೌಚಾಲಯವಿದ್ದ ಕಡೆಗಳಲ್ಲಿ ನೀರಿನ ಕೊರತೆ ಎದುರಾಗುತ್ತಿದೆ’ ಎನ್ನುತ್ತಾರೆ ಮುನವಳ್ಳಿ ನಿವಾಸಿ ಕಿರಣ ಯಲಿಗಾರ.

‘ಶೌಚಾಲಯಗಳಲ್ಲಿ ಸ್ವಚ್ಛತೆ ಅಥವಾ ನಿರ್ವಹಣೆ ಮರೀಚಿಕೆಯಾಗಿದೆ. ಪುರಸಭೆಯವರು ವಾರಕ್ಕೊಮ್ಮೆಯಾದರೂ ನಿರ್ವಹಣೆಗೆ ಕ್ರಮ ವಹಿಸಬೇಕು. ಇಲ್ಲದ್ದಿದ್ದರೆ ಜನರು ಬಯಲನ್ನು ಆಶ್ರಯಿಸುವುದು ತಪ್ಪುವುದಿಲ್ಲ. ಈ ಸಮಸ್ಯೆ ಪರಿಹರಿಸದಿದ್ದರೆ ‘ಸ್ವಚ್ಛ ಗ್ರಾಮ’ ಯೋಜನೆ ಹಳ್ಳ ಹಿಡಿಯುತ್ತದೆ’ ಎನ್ನುತ್ತಾರೆ ಅವರು.

ಜಾಗದ ಕೊರತೆ

ಸವದತ್ತಿ: ಪಟ್ಟಣದ ಕೆಲವು ಗಲ್ಲಿಗಳ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು ಜಾಗದ ಕೊರತೆ ಇದೆ. ಪರಿಣಾಮ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಪುರಸಭೆಯಿಂದ ಕೆಲವೆಡೆ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿದೆ; ಕೆಲವೆಡೆ ತೆರವುಗೊಳಿಸಿದೆ! ಪುರುಷರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಆಗಬೇಕಿದೆ. ಕಟಕೋಳ ಬ್ಯಾಂಕ್‌ ಸೇರಿದಂತೆ ಹಲವೆಡೆ ಮೂತ್ರಾಲಯಗಳ ಅಗತ್ಯವಿದೆ. ಪುರಸಭೆಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎನ್ನುವ ದೂರು ಜನರದಾಗಿದೆ. ಕೆಲವೆಡೆ ಜನರು ಶೌಚಾಲಯಗಳ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.

‘ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ’ ಎಂದು ಎಂಜಿಎನ್‍ಆರ್‌ಇಜಿ ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ ತಿಳಿಸಿದರು.

ಗೋಕಾಕ ತಾಲ್ಲೂಕಿನಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ಕೋರಿ ಜನರು ಗ್ರಾಮ ಪಂಚಾಯ್ತಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ನಿರ್ಮಿಸಿಕೊಂಡ ಬಗ್ಗೆ ಹಾಗೂ ಬಳಕೆ ಕುರಿತು ಪರಿಶೀಲನೆ ನಡೆಯುತ್ತಿಲ್ಲ.

ಮುಕ್ತಗೊಂಡಿಲ್ಲ

ಎಂ.ಕೆ. ಹುಬ್ಬಳ್ಳಿ: ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ 6 ವರ್ಷಗಳು ಕಳೆದಿದ್ದರೂ ಪಟ್ಟಣವು ಬಯಲು ಬಹಿರ್ದೆಸೆ ಮುಕ್ತಗೊಂಡಿಲ್ಲ. ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರ ಪಕ್ಕದ ಸರ್ವಿಸ್ ರಸ್ತೆ, ಹೊರವಲಯದ ರಸ್ತೆ, ಕೆರೆ ಸೇರಿ ಹಲವೆಡೆ ಬಯಲು ಬಹಿರ್ದೆಸೆ ಸಾಮಾನ್ಯವಾಗಿದೆ. ಹಲವರಿಗೆ ಮನೆಯ ಬಳಿ ಶೌಚಾಲಯ ಕಟ್ಟಿಕೊಳ್ಳಲು ಜಾಗವಿಲ್ಲ. ಕೆಲವರು ಸರ್ಕಾರದಿಂದ ಸಿಗುವ ಹಣಕಾಸಿನ ನೆರವು ಸಾಲದೆ ಕಟ್ಟಿಕೊಂಡಿಲ್ಲ. ಮಹಿಳೆಯರು ಕತ್ತಲಾಗುವುದಕ್ಕೆ ಕಾಯುವುದು ತಪ್ಪಿಲ್ಲ.

ರೂಢಿ ಹೋಗಿಲ್ಲ!

ಚನ್ನಮ್ಮನ ಕಿತ್ತೂರು: ಕಿತ್ತೂರು ತಾಲ್ಲೂಕಿನಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ರೂಢಿ ಇನ್ನೂ ಪೂರ್ಣವಾಗಿ ಹೋಗಿಲ್ಲ. ಶೌಚಾಲಯ ಬಳಸದಿರುವುದೂ ಕಂಡುಬರುತ್ತದೆ ಎನ್ನುತ್ತಾರೆ ಪ್ರಮುಖರು. ನಿತ್ಯ ಮುಂಜಾನೆ ಹಾಗೂ ರಾತ್ರಿ ಹಳ್ಳಿಗಳ ಕಡೆಗೆ ಮುಖ ಮಾಡಿದರೆ ತಂಬಿಗೆ ಹಿಡಿದು ಹೊರಟಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಾಣಸಿಗುತ್ತಾರೆ. ಬೆಳಕು ಕಂಡರೆ ವಾಹನಕ್ಕೆ ಎದ್ದು ನಿಂತು ‘ಗೌರವ’ ಕೊಡುವ ಪದ್ಧತಿ ಮುಂದುವರಿದಿದೆ!

ನೂರರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಹೇಳುವ ಕೆಲ ಗ್ರಾಮಗಳಲ್ಲೇ ಬಯಲು ಬಹಿರ್ದೆಸೆ ನಿಂತಿಲ್ಲ. ಶೌಚಾಲಯವನ್ನು ಕೆಲವರು ಕಟ್ಟಿಗೆ ಇನ್ನಿತರ ವಸ್ತುಗಳನ್ನು ಇಡುವ ‘ಸ್ಟೋರ್ ರೂಂ’ ಆಗಿ ಬಳಸುತ್ತಿದ್ದಾರೆ.

ಖಾನಾಪುರ: ಜಿಲ್ಲೆಯ ಪ್ರಥಮ ಬಯಲು ಶೌಚ ಮುಕ್ತ ತಾಲ್ಲೂಕು ಎಂಬ ಹಿರಿಮೆಗೆ ಖಾನಾಪುರ ಪಾತ್ರವಾಗಿದೆ. ಪ್ರತಿ ಗ್ರಾಮದ ಪ್ರತಿ ಮನೆಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆಗೆ ಕ್ರಮ ವಹಿಸಲಾಗಿದೆ.

ಪ್ರತಿಕ್ರಿಯೆಗಳು

ಚುನಾಯಿತ ಪ್ರತಿನಿಧಿಗಳು ಜನರಿಗೆ ಅನುದಾನ ಬಿಡುಗಡೆ ಆಗುವಂತೆ ನೋಡಿಕೊಂಡರೆ ಸಾಲದು. ಫಲಾನುಭವಿಗಳು ಮನೆಗಳ ಬಳಿ ಶೌಚಾಲಯ ವ್ಯವಸ್ಥೆ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಬೇಕು. ಆಗ ಸ್ವಚ್ಛ ಭಾರತ ಅಭಿಯಾನ ಯಶಸ್ಸು ಕಾಣುತ್ತದೆ.

–ಅನ್ವರುದ್ದೀನ ಹಬೀಬಸಾಬ ಕಳಾವಂತ, ಲೋಳಸೂರ ನಿವಾಸ, ಗೋಕಾಕ ತಾಲ್ಲೂಕು

ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ಹಾಗೂ ಪಂಚಾಯ್ತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದಿಂದಾಗಿ ಖಾನಾಪುರ ತಾಲ್ಲೂಕನ್ನು ಬಯಲು ಶೌಚ ಮುಕ್ತ ತಾಲ್ಲೂಕು ಎಂದು ಘೋಷಿಸಲಾಗಿದೆ.

–ಡಾ.ಅಂಜಲಿ ನಿಂಬಾಳ್ಕರ, ಶಾಸಕಿ, ಖಾನಾಪುರ

ಬಿಜೆಪಿ ಸರ್ಕಾರವು ಪ್ರಶಸ್ತಿಗಾಗಿ ಕಂಡಲೆಲ್ಲಾ ಶೌಚಾಲಯಗಳನ್ನು ನಿರ್ಮಿಸಿ ಅಂಕ ತೆಗೆದುಕೊಂಡಿದೆ. ಅವು ನಿರ್ವಹಣೆ ಮತ್ತು ನೀರಿನ ವ್ಯವಸ್ಥೆ ಇಲ್ಲದೆ ಹಾಳಾಗಿವೆ. ಅವು ಲೆಕ್ಕಕ್ಕೆ ಮಾತ್ರ ಎನ್ನುವಂತಾಗಿವೆ.

–ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಶಿವಾನಂದ ವಿಭೂತಿಮಠ, ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರಸನ್ನ ಕುಲಕರ್ಣಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು