ಮಂಗಳವಾರ, ಜನವರಿ 28, 2020
19 °C
ನೌಕರರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ

ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಕಲಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಸರ್ಕಾರಿ ನೌಕರರು ಜನಪ್ರತಿನಿಧಿಗಳಿಗೆ ಗೌರವ ನೀಡಬೇಕು. ಯಾವುದೇ ಕಾರ್ಯಕ್ರಮಗಳನ್ನು ಮಾಡುವಾಗ ಶಿಷ್ಟಾಚಾರ ಪಾಲಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯಿತಿ ಸದಸ್ಯರು ಸಮಸ್ಯೆಗಳಿದ್ದರೆ ನನ್ನ ಮುಂದೆ ಪ್ರಸ್ತಾಪಿಸಿ. ನೇರವಾಗಿ ಇಲಾಖೆ ಅಧಿಕಾರಿಗಳ ಮೇಲೆ ಆಕ್ರಮಣ ಮಾಡಬೇಡಿ. ನಾನು ಅಧಿಕಾರಿಗಳನ್ನು ವಿಚಾರಿಸಿ ಕ್ರಮ ಜರುಗಿಸುತ್ತೇನೆ’ ಎಂದು ಭರವಸೆ ನೀಡಿದರು.

‘ನೆರೆ ಪರಿಹಾರ ಕಾಮಗಾರಿಗಳಿಗೆ ಬಂದ ಹಣವನ್ನು ತಿಂಗಳಲ್ಲಿ ಖರ್ಚು ಮಾಡಿ, ಕೆಲಸ ಮುಗಿಸಬೇಕು. ಇಲ್ಲವಾದರೆ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ತಂಗಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆ ನಡೆಯುತ್ತಿದೆ. ಅದನ್ನು ಶೀಘ್ರವಾಗಿ ಖಾಲಿ ಮಾಡಿಸದಿದ್ದರೆ ನಿಮ್ಮನ್ನು ಅಮಾನತು ಮಾಡುತ್ತೇನೆ’ ಎಂದು ಕಾಗವಾಡ ಬಿಇಒಗೆ ಎಚ್ಚರಿಕೆ ನೀಡಿದರು. ಅಥಣಿಯಲ್ಲಿ ಖಾಸಗಿ ಕೋಚಿಂಗ್‌ ಕೇಂದ್ರದಲ್ಲಿ ಮಗು ಸಾವನ್ನಪ್ಪಿದ ಘಟನೆ ಮಾಹಿತಿ ಪಡೆದು, ‘ನಾಳೆ ಅದನ್ನು ಮತ್ತು ಅಂತಹ ಎಷ್ಟು ಕೋಚಿಂಗ್‌ ಕೇಂದ್ರಗಳಿವೆಯೋ ಅವುಗಳನ್ನು ಜಪ್ತಿ ಮಾಡಬೇಕು. ಈ ಕುರಿತು ವರದಿ ಸಲ್ಲಿಸಬೇಕು’ ಎಂದರು.

ಶಿರಗುಪ್ಪಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಯ ದಾಖಲೆಗಳುಳ್ಳ ಫೈಲ್‌ ಜಲ ನಿರ್ಮಲ ಯೋಜನೆ ಕಚೇರಿಯಿಂದ ಕಳವಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಬೇಕು ಎಂದು ನಿರ್ದೇಶಿಸಿದರು.

‘ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗಬಾರದು. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ಶಾಸಕ ಮಹೇಶ ಕುಮಠಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುರು ದಾಶ್ಯಾಳ, ಸಿದ್ದಣ್ಣ ಮದಕಣ್ಣವರ, ತಾಲ್ಲೂಕು ಪಂಚಾಯಿತಿ ಇಒ ರವಿ ಬಂಗಾರೆಪ್ಪನವರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು