ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕನ್ನಡ ಮೇಯರ್‌ಗಾಗಿ ‘ರೋಚಕ ಕಾರ್ಯತಂತ್ರ’

ನೆರವಾಗಿದ್ದ ದಿ.ಎಸ್. ಬಂಗಾರಪ್ಪ, ದಿ.ಸಂಭಾಜಿ ಪಾಟೀಲ
Last Updated 24 ಆಗಸ್ಟ್ 2021, 7:22 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ನೆಲದಲ್ಲೇ ಇದ್ದರೂ ಕನ್ನಡಿಗರೊಬ್ಬರನ್ನು ಮೇಯರ್‌ ಮಾಡುವುದಕ್ಕೆ ಹಲವು ಕಾರ್ಯತಂತ್ರಗಳನ್ನು ಅನುಸರಿಸಿದ ರೋಚಕ ಇತಿಹಾಸ ಬೆಳಗಾವಿಯ ಮಹಾನಗರಪಾಲಿಕೆಗಿದೆ.

ಭಾಷೆ ಆಧಾರದ ಮೇಲೆ ಚುನಾವಣೆ ನಡೆ‌ಯುತ್ತಿದ್ದ ಕಾರಣಕ್ಕೆ ಮರಾಠಿ ಭಾಷಿಕರೇ ಅದರಲ್ಲೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿಗರೇ ಬಹುಪಾಲು ಅವಧಿಯ ಅಧಿಕಾರವನ್ನು ಅನುಭವಿಸಿದ್ದಾರೆ. ಈ ನಡುವೆ, ನಮ್ಮ ಭಾಷಿಕ ಸದಸ್ಯರನ್ನು ಮೇಯರ್ ಮಾಡಬೇಕು ಎಂಬ ಇಲ್ಲಿನ ಕನ್ನಡ ಹೋರಾಟಗಾರರ ಕನಸು ನನಸಾದದ್ದು 1991ರಲ್ಲಿ. ಆ ಖ್ಯಾತಿಯು ಮತ್ತು ಅವಕಾಶವು ಕನ್ನಡ ಹೋರಾಟಗಾರರೂ ಆಗಿದ್ದ ದಿ.ಸಿದ್ದನಗೌಡ ಪಾಟೀಲ ಅವರಿಗೆ ಸಿಕ್ಕಿತು.

1956ರಿಂದಲೂ ಗಡಿ ನಾಡಿನಲ್ಲಿ ಕನ್ನಡ ಚಳವಳಿಯ ಮುಂಚೂಣಿಯಲ್ಲಿದ್ದ ಅವರು 1984ರಲ್ಲಿ ಬೆಳಗಾವಿ ನಗರಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1990ರಲ್ಲಿ ಪುನರಾಯ್ಕೆ ಆಗಿದ್ದರು. 1991ರಲ್ಲಿ ಪ್ರಥಮ ಕನ್ನಡ ಮೇಯರ್‌ ಆಗಿ ಆಯ್ಕೆಯಾಗಿದ್ದರು. ಇದಕ್ಕೆ ಆಗಿನ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ,ಕನ್ನಡ ಪರ ಹೋರಾಟಗಾರರು ಮತ್ತು ಎಂಇಎಸ್‌ ಬೆಂಬಲಿತರಾಗಿದ್ದ ಸಂಭಾಜಿ ಪಾಟೀಲ, ಮತ್ತು ಅವರ ಕಾರ್ಯತಂತ್ರ ಕಾರಣವಾಗಿತ್ತು ಎನ್ನುತ್ತದೆ ಇತಿಹಾಸ.

ಸಲಹೆಯಂತೆ:ಎಂಇಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರೂ ಸಂಭಾಜಿ ಪಾಟೀಲರು, ನಗರದ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೈಜೋಡಿಸಿದ್ದರು. ಆಗಿನ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರೊಂದಿಗೆ ಒಡನಾಟ ಹೊಂದಿದ್ದರು. ಈ ನಡುವೆ, ಕನ್ನಡ ಹೋರಾಟಗಾರರ ಸಲಹೆಯಂತೆ ಕನ್ನಡ ಭಾಷಿಕರೊಬ್ಬರನ್ನು ಮೇಯರ್‌ ಮಾಡಬೇಕೆಂಬ ಆಸೆ ಬಂಗಾರಪ್ಪ ಅವರಿಗೂ ಬಂದಿತ್ತು.

ಈ ವಿಷಯದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವಂತೆ ತಮ್ಮ ಆ‍ಪ್ತ ಮೈಸೂರಿನ ಮುಖಂಡ ಅಜೀಜ್‌ಸೇಠ್‌ ಅವರನ್ನು ಇಲ್ಲಿಗೆ ಕಳುಹಿಸಿದ್ದರು. ಘಟಪ್ರಭಾದ ಪ್ರವಾಸಿ ಮಂದಿರದಲ್ಲಿ ಮುಖಂಡರ ಸಭೆ ನಡೆಸಿದ್ದ ಸೇಠ್ ಕಾರ್ಯತಂತ್ರ ರೂಪಿಸಿದ್ದರು. ಕೊನೆ ಕ್ಷಣದಲ್ಲಿ ಸಿದ್ದನಗೌಡ ಪಾಟೀಲರು ಮೇಯರ್‌ ಚುನಾವಣೆಗೆ ಸ್ಪರ್ಧಿಸಿದ್ದರು.

‘ಆಗ 52 ಸದಸ್ಯ ಬಲದ ಪಾಲಿಕೆಯಲ್ಲಿ ಸಿದ್ದನಗೌಡ ಪಾಟೀಲರು 28 ಮತಗಳನ್ನು ಪಡೆದು ಗೆದ್ದಿದ್ದರು. ಆಗಿದ್ದ ‘ರಹಸ್ಯ ಮತದಾನ’ ಪದ್ಧತಿಯ ಪ್ರಕ್ರಿಯೆಯಲ್ಲಿ ಎಂಇಎಸ್ ಬೆಂಬಲಿತರ ಆರು ಮಂದಿ ಕೂಡ ಪಾಟೀಲರಿಗೆ ಬೆಂಬಲ ನೀಡಿದ್ದರಿಂದ ಗೆಲುವು ಸಾಧ್ಯವಾಯಿತು. ಈ ಕಾರ್ಯಾಚರಣೆ ಎಲ್ಲವೂ ಬಹಳ ರಹಸ್ಯವಾಗಿ ನಡೆದಿತ್ತು.ಆ ಸಂದರ್ಭದಲ್ಲಿ ಸಂಭಾಜಿ ಪಾಟೀಲರ ನಡೆಯ ವಿರುದ್ಧ ಎಂಇಎಸ್‌ನವರು ಸಿಡಿದೆದ್ದಿದ್ದರು. ಅವರ ಮನೆ ಮೇಲೆ ಕಲ್ಲು ತೂರಾಟವನ್ನೂ ನಡೆಸಿದ್ದರು. ಉರ್ದು ಭಾಷಿಕ ಸದಸ್ಯರಾಗಿದ್ದ ನಿಸಾರ್ ಅಹಮದ್ ಸನದಿ ಉಪ ಮೇಯರ್‌ ಆಗಿದ್ದರು’ ಎಂದು ಆಗ ಪತ್ರಕರ್ತರಾಗಿದ್ದ ಹಾಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಆಶೋಕ ಚಂದರಗಿ ನೆನೆದರು.

‘ನಗರದಲ್ಲಿ ಪ್ರಥಮ ಬಾರಿಗೆ ಕನ್ನಡ ಮೇಯರ್‌ ಮಾಡುವುದಕ್ಕೆ ದಿ.ಸಂಭಾಜಿ ಪಾಟೀಲರ ಕೊಡುಗೆಯೂ ಇತ್ತು’ ಎಂದು ಮಾಜಿ ಸದಸ್ಯ ರಮೇಶ ಸೊಂಟಕ್ಕಿ ತಿಳಿಸಿದರು.

ನಿಸಾರ್‌ ಸನದಿ ಅಭಿಮಾನ

ಸಿದ್ದನಗೌಡ ಪಾಟೀಲರು ಒಂದೂವರೆ ವರ್ಷ ಮೇಯರ್‌ ಆಗಿ ಅಧಿಕಾರದಲ್ಲಿದ್ದರು. ‘ಮೇಯರ್‌ಗೆ ಸರ್ಕಾರದಿಂದ ನೀಡುವ ಅಧಿಕೃತ ಕಾರಿನ ಮುಂಭಾಗದಲ್ಲಿ ಕನ್ನಡ ಧ್ವಜವನ್ನು ಹಾಕಿಕೊಳ್ಳಬೇಕು. ಈ ಮೂಲಕ ಕನ್ನಡದ ಅಸ್ಮಿತೆಯನ್ನು ಪ್ರದರ್ಶಿಸಬೇಕು’ ಎನ್ನುವುದು ಹೋರಾಟಗಾರರ ಆಗ್ರಹವಾಗಿತ್ತು. ಆದರೆ, ಅದಕ್ಕೆ ಪಾಟೀಲರು ಸ್ಪಂದಿಸಿರಲಿಲ್ಲ. ಆಗ, ಸಿಟ್ಟಿಗೆದ್ದ ಹೋರಾಟಗಾರರು, ‘ಒಂದು ವಾರದಲ್ಲಿ ಹಾಕಿಕೊಳ್ಳದಿದ್ದರೆ ನನ್ನ ಕಾರಿನ ಮೇಲೆ ಕನ್ನಡ ಧ್ವಜ ಅಳವಡಿಸುತ್ತೇನೆ’ ಎಂದು ನಿಸಾರ್ ಅಹಮದ್ ಅವರು ಮೇಯರ್‌ಗೆ ಪತ್ರ ಬರೆದಿದ್ದರು. ಸ್ಪಂದನೆ ದೊರೆಯದಿದ್ದಾಗ ತಮ್ಮ ಕಾರಿಗೆ ಕನ್ನಡ ಧ್ವಜ ಹಾಕಿದ್ದರು. ಈ ಮೂಲಕ ಅವರು ಇಡೀ ರಾಜ್ಯದ ಕನ್ನಡಿಗರ ಅಭಿಮಾನಕ್ಕೆ ಅವರು ಪಾತ್ರವಾಗಿದ್ದರು. ಇದಕ್ಕೂ ಎಂಇಎಸ್‌ನವರು ತಗಾದೆ ತೆಗೆದು, ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT