ಮಂಗಳವಾರ, ಸೆಪ್ಟೆಂಬರ್ 17, 2019
21 °C
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ 13ರಂದು

ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ

Published:
Updated:

ಬೆಳಗಾವಿ: ‘ಇಲ್ಲಿನ ಕೇಂದ್ರ ಬಸ್‌ ನಿಲ್ದಾಣ ಸಮೀಪದ ದಂಡು ಮಂಡಳಿ ಪ್ರದೇಶದಲ್ಲಿ ನಡೆಯುತ್ತಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸುವುದಕ್ಕೆ ನಮ್ಮ ವಿರೋಧವಿದೆ’ ಎಂದು ವ್ಯಾಪಾರಿಗಳ ಸಂಘದ ಮುಖಂಡ ಕೆ.ಕೆ. ಬಾಗವಾನ ತಿಳಿಸಿದರು.

‘ಸ್ಥಳಾಂತರ ವಿರೋಧಿಸಿ ಮೇ 13ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು. ನೂರಾರು ವ್ಯಾಪಾರಿಗಳು ಭಾಗವಹಿಸಲಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವ ವಿಷಯ ನಮಗೆ ತಿಳಿದಿಲ್ಲ. ತರಕಾರಿ ವ್ಯಾಪಾರಸ್ಥರ ಬಗ್ಗೆ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಮಾರುಕಟ್ಟೆಯನ್ನು ಮೇ 14ರಂದು ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು; ಇದಕ್ಕೆ ವ್ಯಾಪಾರಿಗಳು ಒಪ್ಪಿದ್ದಾರೆ ಎಂದು ಅಧಿಕಾರಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ದೂರಿದರು.

‘ಈಗಿನ ಮಾರುಕಟ್ಟೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಮ್ಮನ್ನು ಸ್ಥಳಾಂತರಿಸಲಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಗಲಭೆ ನಡೆಸಿಲ್ಲ.  ಆದರೆ, ನಮ್ಮ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ದಂಡುಮಂಡಳಿ ಪ್ರದೇಶದಲ್ಲಿರುವ ಈ ತರಕಾರಿ ಮಾರುಕಟ್ಟೆಯಲ್ಲಿ ಸಾವಿರಾರು ಜನರು ಉಪ ಜೀವನ ಕಂಡುಕೊಂಡಿದ್ದಾರೆ. ಮಾರುಕಟ್ಟೆ ಸ್ಥಳಾಂತರಿಸಿದರೆ, ಅವರೆಲ್ಲರೂ ಬೀದಿಗೆ ಬೀಳುತ್ತಾರೆ. ಇದನ್ನೂ ಮೀರಿ ಎಪಿಎಂಸಿಗೆ ಸ್ಥಳಾಂತರಿಸಿದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಇಲ್ಲಿ 230 ಮಂದಿ ವ್ಯಾಪಾರಿಗಳಿದ್ದಾರೆ. ಇತರ ವ್ಯಾಪಾರಿಗಳನ್ನು ಸುಮ್ಮನೆ ಬಿಡುವ ಅಧಿಕಾರಿಗಳು ತರಕಾರಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಎಪಿಎಂಸಿಯಲ್ಲಿ 102 ಮಂದಿಗೆ ಮಳಿಗೆ ಹಂಚಿಕೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವ್ಯಾಪಾರಿಗಳಿಗೆ ತರಕಾರಿ ವ್ಯಾಪಾರ ಮಾಡುವ ಜ್ಞಾನವೇ ಇಲ್ಲ. ಅಂಥವರಿಗೆ ಮಳಿಗೆ ಹಂಚಿದ್ದಾರೆ’ ಎಂದು ದೂರಿದರು.

‘ಗಾಂಧಿನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಅದನ್ನು ವಿರೋಧಿಸಿ ಕೆಲವರು ಹೈಕೋರ್ಟ್‌ಗೆ ಹೋಗಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ’ ಎಂದರು.

ವ್ಯಾಪಾರಿಗಳಾದ ದೀವಾಕರ ಪಾಟೀಲ, ಮೋಹನ ಮನೋಳ್ಕರ, ರಾಮ ಹವಳ, ಇಕ್ಬಾಲ ಡೋಣಿ, ಸುನೀಲ ಬೋಸಲೆ, ಸುರೇಶ ಹವಳ, ಸಂಜಯ ಬಾಬಿ, ವಿಶ್ವನಾಥ ಪಾಟೀಲ, ರಾಜು ಡೋಣಿ ಇದ್ದರು.

Post Comments (+)