ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು | ವಿದ್ಯುತ್ ಸ್ಥಗಿತ: ಮಳೆ ನೀರು ಸೇವನೆ!

Published 1 ಜುಲೈ 2024, 7:50 IST
Last Updated 1 ಜುಲೈ 2024, 7:50 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ವಾರದಿಂದ ನೀರು ಪೂರೈಕೆ ನಿಂತು ಹೋಗಿದೆ. ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆಯೂ ಆಗಿಲ್ಲ. ಈ ಭಾಗಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡದ್ದರಿಂದ ಹೊಲ, ಗದ್ದೆಗಳಲ್ಲಿ ತಿರುಗಾಡಿ ನೀರು ತರುವುದು ನಿಂತು ಹೋಗಿದೆ. ಅಕ್ಷರಶಃ ಮಳೆನೀರು ಕುಡಿಯುತ್ತಿದ್ದೇವೆ’

ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಕುಲವಳ್ಳಿ ಮಾರ್ಗದಲ್ಲಿ ಬರುವ ಪರಸನಟ್ಟಿಯ ನಾಗರಿಕರ ಗೋಳು ಇದು.

‘ಸುಮಾರು ಹದಿನೈದು ಕುಟುಂಬ ವಾಸಿಸುತ್ತಿರುವ ಪರಸನಟ್ಟಿ ಊರಿನಲ್ಲಿ ಮೊದಲು ಗುಡಿಸಲುಗಳೇ ಕಾಣಸಿಗುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದ್ದು, ಹೆಂಚಿನ ಕಟ್ಟಡಗಳು ಕಾಣಸಿಗುತ್ತಿವೆ. ಉಳ್ಳವರು ದುಮ್ಮಜಲಿನ ಮನೆಗಳನ್ನೂ ಕಟ್ಟಿಕೊಂಡಿದ್ದಾರೆ. ಇಷ್ಟೆಲ್ಲ ಸುಧಾರಣೆ ಆಗಿದ್ದರೂ ನೀರು, ವಿದ್ಯುತ್, ರಸ್ತೆ ಸಮಸ್ಯೆಗಳಿಂದ ನಮಗೆ ಮುಕ್ತಿ ಸಿಕ್ಕಿಲ್ಲ’ ಎಂದು ಅಲ್ಲಿನವರು ಅಳಲು ತೋಡಿಕೊಂಡರು.

‘ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಆಗಿವೆ. ವಿದ್ಯುತ್ ಇದ್ದ ಕಡೆಗೆ ಬ್ಯಾಟರಿ ಚಾರ್ಜ್ ಮಾಡಿಕೊಂಡು ಬರುತ್ತಿದ್ದೇವೆ. ಕಳೆದೊಂದು ವಾರದಿಂದ ನಮ್ಮ ನಿತ್ಯದ ಚಟುವಟಿಕೆಗಳೇ ಅಸ್ತವ್ಯಸ್ತಗೊಂಡಿವೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಳೆ ನೀರು ಸೇವನೆ:

‘ಇಲ್ಲಿನವರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ. ಐತಿಹಾಸಿಕ ಕಿತ್ತೂರು ಪಟ್ಟಣ ಪಂಚಾಯ್ತಿಗೆ  ಸೇರಿದವರೆಂಬ ಹಮ್ಮು ಹಾಗೂ ಗ್ರಾಮ ಪಂಚಾಯ್ತಿಗಿಂತ ಹೆಚ್ಚು ಕರ ತುಂಬುವ ನಾಗರಿಕರು ಎಂಬ ಬಿಮ್ಮು ಬಿಟ್ಟರೆ, ನಾವು ಕನಿಷ್ಠ ಸವಲತ್ತುಗಳಿಂದ ವಂಚಿತರಾಗಿದ್ದೇವೆ’ ಎನ್ನುತ್ತಾರೆ ಅವರು.

‘ಕರೆಂಟ್ ಇಲ್ಲದ್ದರಿಂದ ಅಕ್ಕ-ಪಕ್ಕದ ಹೊಲಗಳಿಗೆ ನೀರು ತರಲು ಹೋಗದಂತಾಗಿದೆ. ಇದ್ದೊಂದು ಕೊಳವೆಬಾವಿ ಕೆಟ್ಟು ಹೋಗಿದೆ. ನಲ್ಲಿಗಳಿದ್ದರೂ ನೀರು ಪೂರೈಕೆ ನಿಂತು ಹೋಗಿದೆ. ಮಳೆಯಾಗುತ್ತಿರುವುದರಿಂದ ಅದೇ ನೀರನ್ನು ನಾವು ಕುಡಿಯುತ್ತಿದ್ದೇವೆ. ಬೇಕಾದರೆ ನಮ್ಮ ಮನೆಗೆ ಬಂದು ನೋಡಿರಿ’ ಎಂದು ಸಣ್ಣತಮ್ಮಪ್ಪ ಸುಂಕದ ಹೇಳಿದರು.

‘ಊರಿಗೆ ಹೊಸ ಅಂಗನವಾಡಿ ಕಟ್ಟಡ ಮಂಜೂರಾಗಿದೆ. ಅರ್ಧ ಕಾಮಗಾರಿ ನಡೆದು ಸ್ಥಗಿತಗೊಂಡಿದೆ. ಆರು ತಿಂಗಳಾದರೂ ಕಾಮಗಾರಿ ನಡೆಯುವ ಸುಳಿವು ಇಲ್ಲದಾಗಿದೆ’ ಎಂದು ಅವರು ಅರ್ಧಕ್ಕೆ ನಿಂತಿರುವ ಕಟ್ಟಡವನ್ನು ತೋರಿಸಿದರು.

ಹಿಂದಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವಧಿಯಲ್ಲಿ 35 ವಿದ್ಯುತ್‌ ಕಂಬ ನೆಡಲಾಗಿದೆ. ಕಂಬಗಳ ಮೇಲೆ ಪರಿವರ್ತಕ ಕುಳಿತಿದೆ. ಆದರೆ ಇನ್ನೂವರೆಗೆ ವಿದ್ಯುತ್ ಸಂಪರ್ಕ ಬಂದಿಲ್ಲ
-ದ್ಯಾಮಣ್ಣ ಪಾಗಾದ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT