ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರದಲ್ಲಿ ಇಕೊ ಟೂರಿಸಂ; ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ

ವಿಶ್ವ ಪ್ರವಾಸೋದ್ಯಮ ದಿನ
Last Updated 26 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶಗಳ ಸೆರಗಿನಲ್ಲಿರುವ ಖಾನಾಪುರ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ಪರಿಸರ ಪ್ರವಾಸೋದ್ಯಮ (ಇಕೊ ಟೂರಿಸಂ) ಬೆಳೆಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ಸದ್ಯದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಇಕೊ ಟೂರಿಸಂ ಬಗ್ಗೆ ಸಾಕಷ್ಟು ಕ್ರೇಜ್‌ ಹುಟ್ಟಿಕೊಂಡಿದೆ. ಕಾಡು ಮೇಡು ಅಲೆದಾಡುವುದು, ನದಿ, ಹಳ್ಳ– ಕೊಳ್ಳ ಪಕ್ಕದಲ್ಲಿ ಟೆಂಟ್‌ ಹಾಕಿ ರಾತ್ರಿ ಕಳೆಯುವುದು, ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸುವುದು, ಅವುಗಳ ಛಾಯಾಗ್ರಹಣ ಮಾಡುವುದು, ಅವುಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಅವುಗಳ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಅಪಡೇಟ್‌ ಮಾಡುವುದನ್ನು ಮಾಡುತ್ತಿದ್ದಾರೆ.

ಇವೆಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಯುವಕರನ್ನು ಸೆಳೆಯಲು ಇಕೊ ಟೂರಿಸಂ ಬೆಳೆಸಲು ಮುಂದೆ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದಾರೆ.

ಕಣಕುಂಬಿ ಕೇಂದ್ರಬಿಂದು:ಮಲಪ್ರಭಾ ಉಗಮಸ್ಥಳವಾಗಿರುವ ಕಣಕುಂಬಿಯಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಸುತ್ತಮುತ್ತಲೂ ಹಚ್ಚ ಹಸಿರು ಕಾಡು ಕಂಗೊಳಿಸುತ್ತದೆ. ವಿಶಿಷ್ಟವಾದ ಹಲವು ಹೂವುಗಳು ಇಲ್ಲಿ ಅರಳುತ್ತವೆ. ವಿಶೇಷವಾಗಿ ನವೆಂಬರ್‌– ಡಿಸೆಂಬರ್‌ ವೇಳೆಯಲ್ಲಿ ಇಡೀ ಕಾಡಿಗೆ ಕಾಡೇ ಅರಳಿ ನಿಂತಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು, ‘ಫ್ಲಾವರ್‌ ವ್ಯಾಲಿ’ (ಹೂವುಗಳ ಕಣಿವೆ) ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹಲವು ಗುಹೆಗಳೂ ಇವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಗುಹೆಗಳನ್ನು ಪತ್ತೆ ಹಚ್ಚಿ, ಇವುಗಳನ್ನು ಹೊರಜಗತ್ತಿಗೆ ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಗುಹೆಗಳ ಸುರಕ್ಷತೆಯನ್ನು ಗಮನಿಸಿ, ಅಲ್ಲಿ ತೆರಳಲು ಪ್ರವಾಸಿಗರಿಗೆ ಸುರಕ್ಷಿತ ಮಾರ್ಗ ನಿರ್ಮಿಸುವುದು, ಕ್ಯಾನೋಪಿ ವಾಕ್‌, ಟ್ರೆಕ್ಕಿಂಗ್‌ ಟ್ರ್ಯಾಕ್‌ ನಿರ್ಮಿಸುವ ಯೋಜನೆ ಇದೆ.

ಅಡ್ವೆಂಚರ್‌ ಟೂರಿಸಂ:
ಬೆಳಗಾವಿ ಸಮೀಪ 16ನೇ ಶತಮಾನದಲ್ಲಿ ನಿರ್ಮಾಣವಾಗಿರುವ ರಾಜಹಂಸಗಢಕ್ಕೆ ಐತಿಹಾಸಿಕ ಮಹತ್ವವಿದೆ. ಎತ್ತರದ ಗುಡ್ಡದ ಮೇಲೆ ಆಕರ್ಷಕ ಕೋಟೆ ನಿರ್ಮಿಸಲಾಗಿದೆ. ಸುತ್ತಮುತ್ತಲು ಹತ್ತಾರು ಕಿ.ಮೀ ದೂರದವರೆಗೆ ತೆರೆದ ಆಕಾಶ ವೀಕ್ಷಿಸಬೇಕಾಗಿದೆ. ಇಂತಹ ವಾತಾವರಣವನ್ನು ಬಳಸಿಕೊಂಡು, ಅಡ್ವೆಂಚರ್‌ ಟೂರಿಸಂ ರೂಪಿಸಲು ಪ್ರವಾಸೋದ್ಯಮ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ.

ರಾಜ್ಯ ಸರ್ಕಾರವು ಸುಮಾರು ₹ 5 ಕೋಟಿ ಮಂಜೂರು ಮಾಡಿದೆ. ರೂಪ್‌ ವೇ, ಪ್ಯಾರಾ ಗ್ಲೈಡಿಂಗ್‌, ಜಿಪ್‌ಲೈನ್‌ ಸೇರಿದಂತೆ ವಿವಿಧ ಸಾಹಸಿ ಕ್ರೀಡೆಗಳನ್ನು ಇಲ್ಲಿ ಆಯೋಜಿಸಲು ಯೋಚಿಸಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಊಟ– ತಿಂಡಿ ವ್ಯವಸ್ಥೆ ಮಾಡಲು ‘ಫುಡ್‌ ಕೋರ್ಟ್‌’, ವಿಹರಿಸಲು ಉದ್ಯಾನ ಕೂಡ ನಿರ್ಮಾಣಗೊಳ್ಳಲಿದೆ.

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರ ವಿಶೇಷ ಆಸಕ್ತಿಯಿಂದಾಗಿ ಸರ್ಕಾರ ಈಗಾಗಲೇ ₹ 5 ಕೋಟಿ ಬಿಡುಗಡೆ ಮಾಡಿದೆ. ಅದಕ್ಕೆ ರೂಪವಾಗಿ ಸದ್ಯದಲ್ಲಿಯೇ ಕ್ರಿಯಾ ಯೋಜನೆ ಸಲ್ಲಿಸುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT