ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಪ್ರಭಾ ಬಲದಂಡೆ ಕಾಲುವೆ ಆಧುನೀಕರಣ: ಸಚಿವ ಗೋವಿಂದ ಕಾರಜೋಳ

ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ
Last Updated 26 ಜನವರಿ 2022, 7:53 IST
ಅಕ್ಷರ ಗಾತ್ರ

ಬೆಳಗಾವಿ: ‘ಘಟಪ್ರಭಾ ಬಲದಂಡೆ ಕಾಲುವೆಯ ಆಯ್ದ ಭಾಗಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ₹ 702 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾಡಳಿತದಿಂದ ಇಲ್ಲಿನ ನೆಹರೂ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘8 ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಈ ಪೈಕಿ ತುಬಚಿ–ಬಬಲೇಶ್ವರ ಹಂತ–1 ಮತ್ತು ಹಂತ–2, ಗೊಡಚಿನಮಲ್ಕಿ ಹಂತ–1ರ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿವೆ. ಬಸವೇಶ್ವರ ಏತ ನೀರಾವರಿ ಯೋಜನೆಯಲ್ಲಿಈವರೆಗೆ 46ಸಾವಿರ ಹೆಕ್ಟೇರ್‌ ತೂಬುಗಾಲುವೆ ಕ್ಷೇತ್ರ ಸೃಷ್ಟಿಸಲಾಗಿದೆ’ ಎಂದು ಹೇಳಿದರು.

ಪರಿಹಾರಕ್ಕೆ ಶಿಫಾರಸು: ‘22,524 ವಿದ್ಯುತ್‌ ಮಗ್ಗ ನೇಕಾರರಿಗೆ 2021–22ನೇ ಸಾಲಿನಲ್ಲಿ ಕೋವಿಡ್ 2ನೇ ಅಲೆ ಪ್ರಯುಕ್ತ ಒಂದು ಬಾರಿಯ ಪರಿಹಾರ ಯೋಜನೆಯಲ್ಲಿ ತಲಾ ₹ 3ಸಾವಿರ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.

ಶಾಸಕ ಅನಿಲ ಬೆನಕೆ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು. ಕೋವಿಡ್ ಕಾರಣದಿಂದ ಕಾರ್ಯಕ್ರಮ ಸರಳವಾಗಿ ನಡೆಯಿತು.

‘9 ಹೊಸ ಏತ ನೀರಾವರಿ’
‘ಪ್ರಸ್ತುತ 5 ಕೆರೆ ತುಂಬುವ ಯೋಜನೆಗಳು ಚಾಲ್ತಿಯಲ್ಲಿವೆ. ಇದರಿಂದ 125 ಕೆರೆಗಳನ್ನು ಮಳೆಗಾಲದಲ್ಲಿ ತುಂಬಿಸುವ ಗುರಿ ಹೊಂದಲಾಗಿದೆ. 9 ಹೊಸ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಒಟ್ಟು 9.69 ಟಿಎಂಸಿ ನೀರಿನ ಹಂಚಿಕೆಯ ಅಗತ್ಯವಿದೆ’ ಎಂದು ಸಚಿವರು ತಿಳಿಸಿದರು.

‘2021ರ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ 98,677 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿದೆ. 1,09,428 ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ₹ 94.80 ಕೋಟಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ 86ಸಾವಿರ ರೈತರಿಗೆ 20,718 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಪೂರೈಸಲಾಗಿದ್ದು, ಇದಕ್ಕಾಗಿ ₹ 12.57 ಕೋಟಿ ಸಹಾಯಧನ ಪಾವತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘₹ 1,205.31 ಕೋಟಿ ಜಮಾ’
‘ರೈತರ ಆದಾಯ ಹೆಚ್ಚಿಸುವ ಉದ್ದೇಶದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ನಿಧಿಯಲ್ಲಿ ಜಿಲ್ಲೆಗೆ ಆರಂಭದಿಂದ ಇಲ್ಲಿವರೆಗೆ 5.56 ಲಕ್ಷ ಮಂದಿಗೆ ₹ 1,205.31 ಕೋಟಿ ಜಮಾ ಮಾಡಲಾಗಿದೆ’ ಎಂದುಕಾರಜೋಳ ತಿಳಿಸಿದರು.

ಸಹಕಾರ ಇಲಾಖೆ ವತಿಯಿಂದ ₹ 1 ಲಕ್ಷವರೆಗಿನ ಸಾಲ ಮನ್ನಾ ಯೋಜನೆಯಲ್ಲಿ 2.87 ಲಕ್ಷ ರೈತರ ₹ 1,162 ಕೋಟಿ ಸಾಲ ಮನ್ನಾ ಮೊತ್ತದ ಪೈಕಿ ಇದುವರೆಗೆ 2.65 ಲಕ್ಷ ರೈತರ ₹ 1,049 ಕೋಟಿ ಬಿಡುಗಡೆಯಾಗಿದೆ. 2021–22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 33ಸಾವಿರ ರೈತ ಸದಸ್ಯರಿಂದ 468.67 ಲಕ್ಷ ಲೀಟರ್‌ ಹಾಲು ಸಂಗ್ರಹಿಸಿ ₹ 17 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ’ ಎಂದು ಹೇಳಿದರು.

‘2021ರ ಜುಲೈ ಹಾಗೂ ನವೆಂಬರ್‌ನಲ್ಲಿ ಉಂಟಾದ ಅತಿವೃಷ್ಟಿ, ಪ್ರವಾಹದಿಂದ 1.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 1,15,383 ರೈತರಿಗೆ ₹ 94.8 ಕೋಟಿ ಮೊತ್ತವನ್ನು ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ಖಾತೆಗಳಿಗೆ ನೀಡಲು ದೃಢೀಕರಣ ಮಾಡಲಾಗಿದೆ’ ಎಂದರು.

ನಿರ್ದಾಕ್ಷಿಣ್ಯ ಕ್ರಮ
ಗಣತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿರುವ ಜನರಿಗೆ ಕೆಲವರು ಭಾಷೆ, ಧರ್ಮ, ಜಾತಿ ಮೊದಲಾದ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ತೊಂದರೆ ಕೊಡುತ್ತಿದ್ದಾರೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಖಚಿತ.
–ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT